ಕೊರೊನಾ ವಿರುದ್ಧದ ಹೋರಾಟ – ರಾಷ್ಟ್ರಪತಿ, ಸಂಸದರು, ಸಚಿವರ 1 ವರ್ಷ ವೇತನ ಕಡಿತ

Public TV
2 Min Read

ನವದೆಹಲಿ: ಕೊರೊನಾ ವೈರಸ್ ಉಂಟು ಮಾಡಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಂಸದರು, ಸಚಿವರ 1 ವರ್ಷದ ವೇತನ ಕಡಿತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿರ್ಧರಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಸಂಸದರು ಮತ್ತು ಕೇಂದ್ರ ಸಚಿವರ ವೇತನವನ್ನು ಒಂದು ವರ್ಷದಲ್ಲಿ ಶೇ.30ರಷ್ಟು ಕಡಿತಗೊಳಿಸುವ ಸುಗ್ರೀವಾಜ್ಞೆಯನ್ನು ಜಾರಿಗೆ ತರಲಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್, ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ (ಎಂಪಿಎಲ್‍ಎಡಿಎಸ್)ಯನ್ನು ಎರಡು ವರ್ಷಗಳ ಕಾಲ ಸ್ಥಗಿತಗೊಳಿಸಲಾಗಿದೆ. ಈ ಹಣವನ್ನು ಕೊರೊನಾ ವಿರುದ್ಧದ ಹೋರಾಟದ ನಿಧಿಗೆ ವರ್ಗಾಯಿಸಲು ಕ್ಯಾಬಿನೆಟ್ ನಿರ್ಧರಿಸಿದೆ. ಎಂಪಿಎಲ್‍ಎಡಿಎಸ್ ಅಡಿಯಲ್ಲಿರುವ ಹಣವು ಎರಡು ವರ್ಷಗಳವರೆಗೆ ಸುಮಾರು 7,900 ಕೋಟಿ ರೂ. ಆಗಲಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ರಾಜ್ಯಪಾಲರು ಸಹ ಶೇ.30 ರಷ್ಟು ಸಂಬಳ ಕಡಿತಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. 1954 ರ ತಿದ್ದುಪಡಿ ಪ್ರಕಾರ ಸಂಸತ್ತಿನ ಸದಸ್ಯರಿಗೆ ನೀಡುತ್ತಿದ್ದ ವೇತನ, ಭತ್ಯೆ ಮತ್ತು ಪಿಂಚಣಿಯನ್ನು ಶೇ.30 ರಷ್ಟು ಕಡಿಮೆ ಮಾಡುವ ಸುಗ್ರೀವಾಜ್ಞೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಇದು ಏಪ್ರಿಲ್ 1ರಿಂದ ಒಂದು ವರ್ಷದವರೆಗೆ ಜಾರಿಗೆ ಬರಲಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸರಿಯಾದ ನಿರ್ಧಾರವನ್ನೇ ಕೈಗೊಂಡಿದ್ದಾರೆ. ಹಣಕ್ಕಿಂತ ಹೆಚ್ಚಾಗಿ, ಸರಿಯಾದ ಸಂದೇಶವನ್ನು ಕಳುಹಿಸುವುದು ಮಹತ್ವವಾಗಿದೆ. ಸಂಸದರು ಮತ್ತು ಇತರ ಗಣ್ಯರ ವೇತನವನ್ನು ಕಾನೂನಿನಿಂದ ನಿರ್ಧರಿಸುವುದರಿಂದ ಸುಗ್ರೀವಾಜ್ಞೆ ಅಗತ್ಯವಾಗಿದೆ ಎಂದರು.

ಕೊರೊನಾ ವಿರುದ್ಧದ ಹೋರಾಟಕ್ಕೆ ಸುದೀರ್ಘ ಪ್ರಯಾಣದ ತಯಾರಿ ನಡೆಸುವಂತೆ ಪ್ರಧಾನಿ ಮೋದಿ ಅವರು ಬಿಜೆಪಿ ಕಾರ್ಯಕರ್ತರಿಗೆ ಸಲಹೆ ನೀಡಿದ್ದರು. ಇದಾದ ಕೆಲ ಗಂಟೆಯಲ್ಲಿ ಈ ನಿರ್ಧಾರವನ್ನು ಕ್ಯಾಬಿನೆಟ್‍ನಲ್ಲಿ ಕೈಗೊಂಡು ಸುದೀರ್ಘ ಹೋರಾಟಕ್ಕೆ ಸಿದ್ಧತೆಯನ್ನು ಸ್ಪಷ್ಟಪಡಸಿದ್ದಾರೆ.

ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವಿವಿಧ ರಾಜ್ಯ ಸರ್ಕಾರಗಳು ಈಗಾಗಲೇ ವೇತನ ಕಡಿತ ಮತ್ತು ಇತರ ಕ್ರಮಗಳನ್ನು ಕೈಗೊಂದಿವೆ. ರಾಜ್ಯ ವಿಪತ್ತು ಪರಿಹಾರ ನಿಧಿಗೆ ಹಣ ಸಂಗ್ರಹಿಸಲು ಕೇರಳ ಸರ್ಕಾರವು ಶಾಸಕರು, ಸಚಿವರ ಹಾಗೂ ಅಧಿಕಾರಿಗಳ ಒಂದು ತಿಂಗಳ ವೇತನವನ್ನು ಕಡಿತಗೊಳಿಸಲು ನಿರ್ಧರಿಸಿದೆ. ಕೋವಿಡ್-19 ಬಿಕ್ಕಟ್ಟಿನ ವಿರುದ್ಧ ಹೋರಾಡಲು ರಾಜ್ಯಕ್ಕೆ ಸಹಾಯ ಮಾಡಲು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಒಂದು ವರ್ಷದ ಸಂಬಳವನ್ನು ಬಿಟ್ಟುಕೊಟ್ಟಿದ್ದಾರೆ.

ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ ಮತ್ತು ರಾಜಸ್ಥಾನಗಳು ತಮ್ಮ ಸರ್ಕಾರಿ ನೌಕರರ ಶ್ರೇಣಿಯನ್ನು ಅವಲಂಬಿಸಿ ವೇತನವನ್ನು ಕಡಿತಗೊಳಿಸುವುದಾಗಿ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *