ಕೊರೊನಾ ತಡೆಗೆ ಬಿಸಿಲಿನಲ್ಲಿ ಕುಳಿತುಕೊಳ್ಳಿ- ಆರೋಗ್ಯ ಸಚಿವ ಅಶ್ವಿನಿ ಚೌಬೆ

Public TV
2 Min Read

– ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ

ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಇತ್ತ ಜನ ಸಹ ಆತಂಕಕ್ಕೊಳಗಾಗುತ್ತಿದ್ದಾರೆ. ಈ ನಡುವೆಯೇ ರಾಜಕಾರಣಿಗಳು ವಿವಿಧ ಬಗೆಯ ಹೇಳಿಕೆಗಳನ್ನು ನೀಡುವ ಮೂಲಕ ವಿವಾದಕ್ಕೆ ಕಾರಣರಾಗುತ್ತಿದ್ದಾರೆ. ಇದೀಗ ಕೇಂದ್ರದ ಆರೋಗ್ಯ ಖಾತೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅದೇ ರೀತಿ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದಾರೆ.

ಕೊರೊನಾ ವೈರಸ್ ತಡೆಗೆ ಸಲಹೆ ನೀಡಿರುವ ಅವರು, ಕೊರೊನಾ ವೈರಸ್‍ನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು 15 ನಿಮಿಷ ಬಿಸಿಲಿನಲ್ಲಿ ಕುಳಿತುಕೊಳ್ಳಿ, ಇದರಿಂದಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕೊರೊನಾ ವೈರಸ್ ಸಾಯುತ್ತದೆ ಎಂದು ಹೇಳಿದ್ದಾರೆ. ಈ ಹಿಂದೆ ಸಹ ಕ್ಯಾನ್ಸರ್ ಚಿಕಿತ್ಸೆಗೆ ಗೋಮೂತ್ರವನ್ನು ಬಳಸಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು. ಇದೀಗ ಕೊರೊನಾ ತಡೆಗೆ ಸಲಹೆ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.

ಬೆಳಗ್ಗೆ ಸುಮಾರು 11ರಿಂದ ಮಧ್ಯಾಹ್ನ 12ರ ಮಧ್ಯೆ ಬಿಸಿಲು ಜೋರಾಗಿರುತ್ತದೆ. ಈ ವೇಳೆ ಬಿಸಿಲಿನಲ್ಲಿ 15 ನಿಮಿಷಗಳ ಕಾಲ ಕುಳಿತುಕೊಂಡರೆ ವಿಟಮಿನ್ ಡಿ ಲೆವೆಲ್ ಹೆಚ್ಚುತ್ತದೆ. ಇದರಿಂದಾಗಿ ರೋಗ ನಿರೋಧಕ ಶಕ್ತಿ ಸಹ ಹೆಚ್ಚುತ್ತದೆ. ಈ ಮೂಲಕ ಕೊರೊನಾ ವೈರಸ್ ಕೊಲ್ಲಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ರಾತ್ರಿಯಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ವಿಚಾರವಾಗಿ ಯಾವುದೇ ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತನಾಡಬಾರದು. ಈ ಕುರಿತು ಸಚಿವರು ಹಾಗೂ ಸಂಸದರು ಎಚ್ಚರಿಕೆಯಿಂದ ಇರಬೇಕು. ಈ ಸಾಂಕ್ರಾಮಿಕ ರೋಗದ ವಿಚಾರವಾಗಿ ಅನಗತ್ಯವಾಗಿ ಟ್ವೀಟ್ ಮಾಡುವುದಾಗಲಿ, ಹೇಳಿಕೆ ನೀಡುವುದಾಗಲಿ ಮಾಡಬಾರದು ಎಂದು ಸೂಚಿಸಿದ್ದರು.

ಸೋಮವಾರವಷ್ಟೇ ಕೇಂದ್ರ ಆರೋಗ್ಯ ಸಚಿವಾಲಯ ಕೊರೊನಾ ವೈರಸ್ ತಡೆಗೆ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಮೂರು ಪುಟಗಳ ಹೇಳಿಕೆ ಬಿಡುಗಡೆ ಮಾಡಿದೆ. ಇದರಲ್ಲಿ ಬಿಸಿಲಿನಲ್ಲಿ ಕುಳಿತುಕೊಳ್ಳುವುದರಿಂದ ಕೊರೊನಾ ವೈರಸ್ ತಡೆಯಬಹುದು ಎಂಬ ಸಾಲುಗಳು ಎಲ್ಲಿಯೂ ಇಲ್ಲ. ಹೀಗಾಗಿ ಇದೀಗ ಕೇಂದ್ರ ಸಚಿವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಒಟ್ಟು 173 ರಾಷ್ಟ್ರ ಹಾಗೂ ಪ್ರಾಂತ್ಯಗಳಲ್ಲಿ ಕೊರೊನಾ ವೈರಸ್ ಹರಡಿದ್ದು, ಈವರೆಗೆ ಸುಮಾರು 2,18,455 ಮಂದಿಗೆ ಸೋಂಕು ತಗುಲಿದೆ. ಚೀನಾದಲ್ಲಿ 3,245 ಮಂದಿ ಸೇರಿದಂತೆ ವಿಶ್ವದೆಲ್ಲೆಡೆ ಒಟ್ಟು 8,938 ಮಂದಿ ಕೊರೊನಾ ಸೋಂಕು ತಗುಲಿ ಜೀವ ಕಳೆದುಕೊಂಡಿದ್ದಾರೆ. ಸುಮಾರು 85,664 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಪ್ರಸ್ತುತ 1,23,853 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

ಭಾರತಕ್ಕೆ ಕಾಲಿಟ್ಟಿರುವ ಕೊರೊನಾ ವೈರಸ್‍ಗೆ ಈವರೆಗೆ 169 ಮಂದಿ ತುತ್ತಾಗಿದ್ದು, 14 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 152 ಮಂದಿ ಕೊರೊನಾದಿಂದ ಬಳಲುತ್ತಿದ್ದು 4 ಮಂದಿ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ ಒಟ್ಟು 14 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ನೆರೆಯ ಮಹಾರಾಷ್ಟ್ರದಲ್ಲಿ ಬುಧವಾರದವರೆಗೆ 44 ಕೊರೊನಾ ಸೋಂಕಿತ ಪ್ರಕರಣ ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *