ವಕ್ಫ್ ಬೋರ್ಡ್‌ ಅಧಿಕಾರವನ್ನು ಕಡಿಮೆ ಮಾಡುವ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ

Public TV
2 Min Read

ನವದೆಹಲಿ: ವಕ್ಫ್ ಬೋರ್ಡ್‌ (Waqf Board) ಅಧಿಕಾರವನ್ನು ಕಡಿಮೆ ಮಾಡುವ ವಕ್ಫ್ (ತಿದ್ದುಪಡಿ) ಮಸೂದೆ 2024 ಕೇಂದ್ರ ಸರ್ಕಾರ ಲೋಕಸಭೆಯಲ್ಲಿ (Lok Sabha) ಮಂಡಿಸಿದೆ.

ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ಖಾತೆಯ ಸಚಿವ ಕಿರಣ್‌ ರಿಜುಜು (Kiren Rijiju) ಅವರು ಮಸೂದೆಯನ್ನು ಮಂಡಿಸಿದರು. ಈ ಮಸೂದೆ ಈಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

ಪ್ರಸ್ತುತ ವಕ್ಫ್ ಬೋರ್ಡ್ ಹೊಂದಿರುವ ಏಕಪಕ್ಷೀಯ ಅಧಿಕಾರಗಳನ್ನು ಕಡಿಮೆ ಮಾಡಲು ಕೇಂದ್ರ ಉದ್ದೇಶಿಸಿದೆ. ಹಿಂದಿನ ಕಾಯ್ದೆಯಲ್ಲಿ ವಕ್ಫ್‌ ಬೋರ್ಡ್‌ಗೆ ಹೆಚ್ಚಿನ ಅಧಿಕಾರ ನೀಡಿತ್ತು. ಇದರ ಪ್ರಕಾರ ಭೂಮಿಯನ್ನು ವಕ್ಫ್ ಬೋರ್ಡ್‌ನಿಂದ ಹಿಂಪಡೆಯುವುದು ಅಸಾಧ್ಯವಾಗಿತ್ತು. ಇದಾದ ನಂತರ ವಕ್ಫ್ ಬೋರ್ಡ್ ತೆಗೆದುಕೊಳ್ಳುವ ನಿರ್ಣಯಗಳು ಪದೇ ಪದೇ ವಿವಾದಕ್ಕೆ ಕಾರಣವಾಗುತ್ತಿದ್ದವು. ಇದನ್ನು ತಡೆಯುವುದರ ಸಲುವಾಗಿ ವಕ್ಫ್ ಕಾಯ್ದೆಗೆ ಕೇಂದ್ರ ತಿದ್ದುಪಡಿ ತಂದಿದೆ.

ಈ ಮಸೂದೆಗೆ ಸಂಸತ್ ಅನುಮೋದನೆ ನೀಡಿದಲ್ಲಿ ಮುಂದೆ ಯಾವುದೇ ಆಸ್ತಿಯನ್ನು ಇದು ತನ್ನದು ಎಂದು ಘೋಷಿಸಿಕೊಳ್ಳಲು ವಕ್ಫ್‌ಬೋರ್ಡ್‌ಗೆ ಸಾಧ್ಯವಾಗುವುದಿಲ್ಲ. ಕೇಂದ್ರದ ಈ ನಡೆಯನ್ನು ವಿಪಕ್ಷಗಳು ತೀವ್ರವಾಗಿ ಟೀಕಿಸುತ್ತಿವೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಪವನ್ ಕಲ್ಯಾಣ್

ಕಾಯ್ದೆಯಲ್ಲಿ ಏನಿದೆ?
ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಮಸೂದೆಯು ವಕ್ಫ್ ಮಂಡಳಿಗಳ ಆಸ್ತಿಯನ್ನು ನಿರ್ವಹಿಸಲು ಅಧಿಕಾರವನ್ನು ನಿರ್ಬಂಧಿಸುವ ಗುರಿಯನ್ನು ಹೊಂದಿದೆ ಮತ್ತು ಹೆಚ್ಚಿನ ಸರ್ಕಾರಿ ನಿಯಂತ್ರಣವನ್ನು ಒದಗಿಸುತ್ತದೆ.

ಯಾವುದೇ ವಕ್ಫ್ ಆಸ್ತಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಣಿಯನ್ನು ಕಡ್ಡಾಯಗೊಳಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ, ಇದರಿಂದ ಆಸ್ತಿ ಮೌಲ್ಯಮಾಪನ ಮಾಡಬಹುದು.

 

ಈ ಕಾಯಿದೆ ಪ್ರಾರಂಭವಾಗುವ ಮೊದಲು ಅಥವಾ ನಂತರ ವಕ್ಫ್ ಆಸ್ತಿ ಎಂದು ಗುರುತಿಸಲಾದ ಅಥವಾ ಘೋಷಿಸಲಾದ ಯಾವುದೇ ಸರ್ಕಾರಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕಾಯ್ದೆ ಹೇಳುತ್ತದೆ. ವಕ್ಫ್‌ ಆಸ್ತಿಯೇ ಅಥವಾ ಸರ್ಕಾರಿ ಭೂಮಿಯೇ ಎಂಬುದನ್ನು ಜಿಲ್ಲಾಧಿಕಾರಿಗಳು ನಿರ್ಧರಿಸಬೇಕಾಗುತ್ತದೆ. ಜಿಲ್ಲಾಧಿಕಾರಿಗಳ ತೀರ್ಮಾನವೇ ಅಂತಿಮವಾಗಿರುತ್ತದೆ.

ಒಮ್ಮೆ ಜಿಲ್ಲಾಧಿಕಾರಿಗಳು ನಿರ್ಧರಿಸಿದ ನಂತರ ಜಿಲ್ಲಾಧಿಕಾರಿಗಳು ಕಂದಾಯ ದಾಖಲೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಬಹುದು ಮತ್ತು ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬಹುದು. ಜಿಲ್ಲಾಧಿಕಾರಿ ತನ್ನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುವವರೆಗೆ ಅಂತಹ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ತಿದ್ದುಪಡಿ ಮಸೂದೆ ಹೇಳುತ್ತದೆ.

Share This Article