– ಸಿಗಂದೂರು ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವ
ಶಿವಮೊಗ್ಗ: ಸಾಗರದ (Sagar) ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗಿರುವ ದೇಶದ 2ನೇ ಅತಿ ಉದ್ದದ ಕೇಬಲ್ ಸೇತುವೆಯಾದ ಸಿಗಂದೂರು ಸೇತುವೆಯನ್ನು (Sigandur Bridge) ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು (Nitin Gadkari) ಲೋಕಾರ್ಪಣೆ ಮಾಡಿದರು.
ಸೇತುವೆ ಲೋಕಾರ್ಪಣೆ ವೇಳೆ ನಡೆದ ಹೋಮದಲ್ಲಿ ಸಚಿವರು ಪಾಲ್ಗೊಂಡರು. ಲೋಕಾರ್ಪಣೆ ನಂತರ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಂಸದ ಬಿ.ವೈ ರಾಘವೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ ಸಾಥ್ ನೀಡಿದರು. ಇದನ್ನೂ ಓದಿ: 60 ವರ್ಷಗಳ ಕನಸು ನನಸು | ಇಂದು ಸಿಗಂದೂರು ಸೇತುವೆ ಲೋಕಾರ್ಪಣೆ – ಬ್ರಿಡ್ಜ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
ದೇವಸ್ಥಾನದಲ್ಲಿ ನವಚಂಡಿಕಾ ಹೋಮದ ಪೂರ್ಣಾವತಿ ನೆರವೇರಿಸಲಾಯಿತು. ಧರ್ಮದರ್ಶಿ ರಾಮಪ್ಪನವರು ಕೇಂದ್ರ ಸಚಿವರಿಗೆ ಸೇತುವೆಯ ಪ್ರತಿಕೃತಿ ನೀಡಿ ಗೌರವಿಸಿದರು.
ಸೇತುವೆ ಲೋಕಾರ್ಪಣೆ ಜೊತೆಗೆ ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗಗಳ 2,056 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳಿಗೆ ಸಚಿವರು ಚಾಲನೆ ನೀಡಲಿದ್ದಾರೆ.
ಸಿಗಂದೂರು ಸೇತುವೆ, 2019ರ ಡಿಸೆಂಬರ್‍ನಲ್ಲಿ ಕಾಮಗಾರಿ ಪ್ರಾರಂಭಗೊಂಡಿತು. 2.44 ಕಿಲೋಮೀಟರ್ ಉದ್ದದ ಕೇಬಲ್ ಸೇತುವೆ ಇದಾಗಿದ್ದು, ಅಗಲ 16 ಮೀಟರ್, ಸೇತುವೆ ಫುಟ್‍ಪಾತ್ 2*1.5 ಮೀಟರ್ ಇದೆ. ಸಂಪರ್ಕ ರಸ್ತೆ 1.05 ಕೀಮೀ ನಿಂದ 3 ಕೀಮಿ ಇದ್ದು, ಉಕ್ಕಿನ ಕೇಬಲ್ ಉದ್ದ 470 ಮೀಟರ್, ಕೇಬಲ್ ಎತ್ತರ 38.50 ಮೀಟರ್ ಇದೆ. 473 ಕೋಟಿ ರೂ. ವೆಚ್ಚವಾಗಿದೆ. ದಿಲೀಪ್ ಬಿಲ್ಡ್ ಕಾನ್ ಎಂಬ ಕಂಪನಿಯಿಂದ ಸೇತುವೆ ನಿರ್ಮಾಣವಾಗಿದೆ.
ಕೋವಿಡ್ ಕಾರಣದಿಂದ ಮೂರು ವರ್ಷದಲ್ಲಿ ಮುಗಿಯಬೇಕಾದ ಸೇತುವೆ ಐದು ವರ್ಷ ತೆಗೆದುಕೊಂಡಿತು. 100 ಟನ್ ತೂಕ ತಡೆದುಕೊಳ್ಳುವ ಸಾಮಥ್ರ್ಯ ಹೊಂದಿದೆ. ಗುಜರಾತ್‍ನ ಓಖಾ ಬಳಿ ನರ್ಮದಾ ನದಿಗೆ ನಿರ್ಮಿಸಿದ ತೂಗು ಸೇತುವೆ ಬಳಿಕ ದೇಶದಲ್ಲಿ ನಿರ್ಮಾಣಗೊಂಡ ದೇಶದ ಎರಡನೇ ಅತೀ ದೊಡ್ಡ ಕೇಬಲ್ ಸೇತುವೆ ಇದಾಗಿದೆ. ಇದನ್ನೂ ಓದಿ: ಈಡೇರಿದ ಶರಾವತಿ ಮಡಿಲ ಮಕ್ಕಳ 6 ದಶಕಗಳ ಕನಸು!