BJP ಕಚೇರಿಗೆ ತೆರಳುತ್ತಿದ್ದ ಕೇಂದ್ರ ಸಚಿವರ ಬೆಂಗಾವಲು ವಾಹನಕ್ಕೆ ಕಲ್ಲು ತೂರಾಟ – ಪರಿಸ್ಥಿತಿ ಉದ್ವಿಗ್ನ

Public TV
1 Min Read

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಕೂಚ್‌ ಬೆಹಾರ್‌ನಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿಸಿತ್‌ ಪ್ರಮಾಣಿಕ್‌ (Nisith Pramanik) ಅವರ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಸಿರುವ ಘಟನೆ ನಡೆದಿದೆ.

ಕಲ್ಲು ತೂರಾಟ ನಡೆಸಿರುವ ಪರಿಣಾಮ ಕೇಂದ್ರ ಸಚಿವರ ಎಸ್ ಯುವಿ ಕಾರಿನ ವಿಂಡ್ ಶೀಲ್ಡ್‌ಗೆ ಹಾನಿಯಾಗಿದೆ. ತೃಣಮೂಲ ಕಾಂಗ್ರೆಸ್ (Trinamool Congress) ಬೆಂಬಲಿಗರು ದಾಳಿಯ ನೇತೃತ್ವ ವಹಿಸಿದ್ದರು ಎಂದು ಪ್ರಮಾಣಿಕ್ ಆರೋಪಿಸಿದ್ದಾರೆ. ಘಟನೆ ವೇಳೆ ನೆರೆದಿದ್ದ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು. ಇದನ್ನೂ ಓದಿ: ಕಾಲೇಜು ಪ್ರಿನ್ಸಿಪಾಲ್‍ಗೇ ಬೆಂಕಿ ಇಟ್ಟ ವಿದ್ಯಾರ್ಥಿ – ಚಿಕಿತ್ಸೆ ಫಲಿಸದೇ ಸಾವು

ಪುಂಡರ ಕುಕೃತ್ಯಕ್ಕೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಸಚಿವರೊಬ್ಬರು ಸುರಕ್ಷಿತವಾಗಿಲ್ಲದಿದ್ದರೆ ಜನಸಾಮಾನ್ಯರ ಪಾಡು ಏನು? ಈ ಘಟನೆಯು ಬಂಗಾಳದ ಪ್ರಜಾಪ್ರಭುತ್ವ ಸ್ಥಿತಿಯನ್ನು ತೋರಿಸುತ್ತದೆ” ಎಂದು ಟೀಕಿಸಿದ್ದಾರೆ.

ಕೇಂದ್ರ ಸಚಿವರು ಬಿಜೆಪಿಯ ಸ್ಥಳೀಯ ಕಚೇರಿಗೆ ತೆರಳುತ್ತಿದ್ದಾಗ ಕಲ್ಲು ತೂರಾಟ ನಡೆಸಲಾಗಿದೆ. ಬುಡಕಟ್ಟು ಜನಾಂಗದವರ ಹತ್ಯೆ ವಿಚಾರವಾಗಿ ಕೇಂದ್ರ ಸಚಿವ ಪ್ರಮಾಣಿಕ್‌ ಅವರ ಮೇಲೆ ಸ್ಥಳೀಯರು ಆಕ್ರೋಶ ಹೊಂದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮದುವೆ ವೇಳೆ ಹೃದಯಾಘಾತದಿಂದ ವಧು ಸಾವು – ತಂಗಿಗೆ ತಾಳಿ ಕಟ್ಟಿದ ವರ

ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಇತ್ತೀಚೆಗೆ ಕೂಚ್ ಬೆಹಾರ್‌ನಲ್ಲಿ ನಡೆದ ರ‍್ಯಾಲಿಯಲ್ಲಿ, ಬುಡಕಟ್ಟು ಜನಾಂಗದವರ ಹತ್ಯೆಗಳಾಗುತ್ತಿವೆ. ಇಂತಹ ಸನ್ನಿವೇಶದಲ್ಲಿ ಸಮುದಾಯದವರಲ್ಲಿ ಇರುವ ಆತಂಕ ಹೋಗಲಾಡಿಸುವ ಕೆಲಸ ಆಗುತ್ತಿಲ್ಲ ಎಂದು ಸಚಿವ ಪ್ರಮಾಣಿಕ್‌ ಅವರನ್ನು ಗುರಿಯಾಗಿಸಿ ಟೀಕಿಸಿದ್ದರು. ಪ್ರಮಾಣಿಕ್‌ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ತೃಣಮೂಲ ಕಾಂಗ್ರೆಸ್‌ ಎಚ್ಚರಿಸಿತ್ತು.

Share This Article
1 Comment

Leave a Reply

Your email address will not be published. Required fields are marked *