ವಿತ್ತ ಮಾಂತ್ರಿಕ ಅರುಣ್ ಜೇಟ್ಲಿ ವಿಧಿವಶ

Public TV
2 Min Read

ನವದೆಹಲಿ: ಮಾಜಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ (66) ವಿಧಿವಶರಾಗಿದ್ದಾರೆ.  ಅನಾರೋಗ್ಯದ ಹಿನ್ನೆಲೆಯಲ್ಲಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಜೇಟ್ಲಿ ಇಂದು ಮಧ್ಯಾಹ್ನ 12 ಗಂಟೆ 7 ನಿಮಿಷಕ್ಕೆ  ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿದ್ದಾರೆ.

ಅರುಣ್ ಜೇಟ್ಲಿ ಅವರು ಅನೇಕ ದಿನಗಳಿಂದ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅನಾರೋಗ್ಯದ ಕಾರಣದಿಂದ ಫೆಬ್ರವರಿಯಲ್ಲಿ ಬಜೆಟ್ ಕೂಡ ಮಂಡನೆ ಮಾಡಿರಲಿಲ್ಲ.

ಕಳೆದ ಕೆಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಅರುಣ್ ಜೇಟ್ಲಿ ಮೇ 23ದಂದು ಏಮ್ಸ್ ನಿಂದ ಡಿಸ್ಚಾರ್ಜ್ ಆಗಿದ್ದರು. ಆರೋಗ್ಯದಲ್ಲಿ ಮತ್ತೆ ಏರುಪೇರು ಕಂಡ ಬಂದ ಹಿನ್ನೆಲೆಯಲ್ಲಿ ಆಗಸ್ಟ್ 9 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಾಗಿದ್ದರು. 66 ವರ್ಷದ ಅರುಣ್ ಜೇಟ್ಲಿ ಅವರನ್ನು ನೆಫ್ರಾಲಜಿಸ್ಟ್, ಹೃದ್ರೋಗ ತಜ್ಞರು ತಪಾಸಣೆ ಮಾಡಿದ್ದರು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಕೇಂದ್ರ ಆರೋಗ್ಯ ಸಚಿವ ಹರ್ಷವಧನ್, ಗೃಹ ಸಚಿವ ಅಮಿತ್ ಶಾ ಅವರು ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಶುಕ್ರವಾರ (ಆಗಸ್ಟ್ 16) ರಾತ್ರಿ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಆಸ್ಪತ್ರೆಗೆ ತೆರಳಿ ಅರುಣ್ ಜೇಟ್ಲಿಯವರ ಆರೋಗ್ಯ ವಿಚಾರಿಸಿದ್ದರು.

 ಈ ಹಿಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅಮೆರಿಕಾಗೆ ತೆರಳಿ ಕ್ಯಾನ್ಸರ್ ಚಿಕಿತ್ಸೆ ಪಡೆದುಕೊಂಡಿದ್ದರು. ಹೀಗಾಗಿ ಈ ವರ್ಷದ ಬಿಜೆಪಿ ಸರ್ಕಾರದ ಫೆಬ್ರವರಿ ಬಜೆಟ್ ನ್ನು ಪಿಯೂಶ್ ಗೋಯಲ್ ಮಂಡಿಸಿದ್ದರು. 2014ರ ಮೋದಿ ಸರ್ಕಾರದಲ್ಲಿ ಅರುಣ್ ಜೇಟ್ಲಿ ಅತ್ಯಂತ ಪ್ರಮುಖ ನಾಯಕರಾಗಿದ್ದು, ವಿತ್ತ ಮತ್ತು ರಕ್ಷಣಾ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಶುಗರ್ ಸಮಸ್ಯೆಯಿಂದ ಬಳಲುತ್ತಿದ್ದ ಅರುಣ್ ಜೇಟ್ಲಿ 2018ರ ಮೇ ನಲ್ಲಿ ಕಿಡ್ನಿ ಕಸಿ(kidney transplant) ಮಾಡಿಸಿಕೊಂಡಿದ್ದರು.

ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅರುಣ್ ಜೇಟ್ಲಿ ಮತ್ತೆ ಹಳೆಯ ಹುರುಪಿನಲ್ಲಿಯೇ ಸಚಿವರಾಗಿ ಕೆಲಸ ಮಾಡಿಕೊಂಡಿದ್ದರು. ಆದರೆ ಅಂದಿನಿಂದ ಅರುಣ್ ಜೇಟ್ಲಿಯವರ ಆರೋಗ್ಯ ಕ್ಷೀಣಿಸುತ್ತಾ ಬಂದಿತ್ತು. ತಮ್ಮ ಆನಾರೋಗ್ಯವನ್ನು ಎಲ್ಲಿಯೂ ತೋರಿಸಿಕೊಳ್ಳದ ಅರುಣ್ ಜೇಟ್ಲಿ ತೆರೆಯ ಹಿಂದೆ ಎಂಬಂತೆ ಪಕ್ಷದ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಬಾಲ್ಯ: ನವದೆಹಲಿಯಲ್ಲಿ ಡಿಸೆಂಬರ್ 28, 1952ರಂದು ಕಿಶನ್ ಹಾಗೂ ರತನ್ ಪ್ರಭಾ ಜೇಟ್ಲಿ ದಂಪತಿ ಮಗನಾಗಿ ಜನಿಸಿದ್ದ  ಜೇಟ್ಲಿ 1969-70ರ ಅವಧಿಯಲ್ಲಿ ನವದೆಹಲಿಯಲ್ಲಿ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ ಪ್ರಾಥಮಿಕ ಶಾಲೆ ಅಧ್ಯಯನ ನಡೆಸಿ  1973ರಲ್ಲಿ ನವದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ವಾಣಿಜ್ಯ ಪದವಿಯನ್ನು ಪಡೆದುಕೊಂಡರು. ಇವರು 1977ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಫ್ಯಾಕಲ್ಟಿ ಆಫ್ ಲಾದಿಂದ ಕಾನೂನು ಪದವಿಯನ್ನು ಪಡೆದುಕೊಂಡಿದ್ದರು.

ಭಾರತದ ಹೆಸರಾಂತ ರಾಜಕಾರಣಿ ಹಾಗೂ ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದರು. ಜೊತೆಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಸೇವೆಯನ್ನು ಸಲ್ಲಿಸಿದ್ದರು. ಭಾರತ ಸರ್ಕಾರದಲ್ಲಿ ವಾಣಿಜ್ಯ, ಕೈಗಾರಿಕೆ, ಕಾನೂನು ಹಾಗೂ ನ್ಯಾಯಾಂಗದ ಯೂನಿಯನ್ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಆಂತರಿಕ ತುರ್ತು ಪರಿಸ್ಥಿತಿಯ (1975-77) ಘೋಷಣೆಯಾದಾಗ, 19 ತಿಂಗಳುಗಳ ಕಾಲ ಸೆರೆವಾಸದಲ್ಲಿದ್ದರು. 1973ರಲ್ಲಿ ರಾಜ್ ನರೇನ್ ಹಾಗೂ ಜಯ ಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಆರಂಭವಾದ ಭ್ರಷ್ಟಾಚಾರಕ್ಕೆ ವಿರುದ್ಧದ ಚಳುವಳಿಯಲ್ಲಿ ಅರುಣ್ ಜೇಟ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1977ರಿಂದ ದೇಶದ ಹಲವಾರು ಹೈಕೋರ್ಟ್ ಗಳಲ್ಲಿ ಹಾಗೂ ಭಾರತದ ಸುಪ್ರೀಂ ಕೋರ್ಟ್ ನಲ್ಲಿ ವಕೀಲರಾಗಿ ಕರ್ತವ್ಯ ನಿರ್ವಹಿಸಿದ್ದರು.

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಡಿಯಲ್ಲಿ ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಬಂದಾಗ 1999 ಅಕ್ಟೋಬರ್ 13 ರಲ್ಲಿ  ಮಾಹಿತಿ ಹಾಗೂ ಪ್ರಸಾರ ರಾಜ್ಯ ಮಂತ್ರಿಯಾಗಿ (ಸ್ವತಂತ್ರ ಹೊಣೆಗಾರಿಕೆ) ನೇಮಕಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *