ಎಥೆನಾಲ್‌ ಪೆಟ್ರೋಲ್‌ನಿಂದ ಮೈಲೇಜ್‌ ಕುಸಿತವಾಗಲ್ಲ, ವಿಮೆ ರದ್ದಾಗಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

Public TV
3 Min Read

ನವದೆಹಲಿ:ಎಥೆನಾಲ್‌ ಮಿಶ್ರಣದ ಪೆಟ್ರೋಲ್‌ನಿಂದ ವಾಹನಗಳ ಮೈಲೇಜ್‌ ಕುಸಿತವಾಗುವುದಿಲ್ಲ ಎಂದು ಕೇಂದ್ರ ಸರ್ಕಾರ (Union Govt) ಸ್ಪಷ್ಟನೆ ನೀಡಿದೆ.

ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ನಿಂದ (Ethanol Blending Petrol) ಮೈಲೇಜ್‌ (Mileage) ಕುಸಿತವಾಗಿದೆ ಎಂಬ ಆರೋಪಿಸಿದ ಬೆನ್ನಲ್ಲೇ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ದೀರ್ಘವಾದ ಪೋಸ್ಟ್‌ ಪ್ರಕಟಿಸಿ ಗೊಂದಲಗಳಿಗೆ ಸ್ಪಷ್ಟನೆ ನೀಡಿದೆ. ಅಷ್ಟೇ ಅಲ್ಲದೇ ವಾಹನದ ವಿಮೆಗಳು (Vehicle Insurance) ರದ್ದಾಗುವುದಿಲ್ಲ ಎಂದು ಹೇಳಿದೆ.

ಏನಿದು E20 ಇಂಧನ?
2003ಕ್ಕೆ ಮೊದಲು ಭಾರತದಲ್ಲಿ (India) ಕಚ್ಚಾ ತೈಲದಿಂದ ಸಂಸ್ಕರಣೆಗೊಂಡ ಪೆಟ್ರೋಲ್‌ ಬಂಕ್‌ಗಳಿಗೆ ಬರುತ್ತಿದ್ದವು. ಆದರೆ ಈಗ ಪೆಟ್ರೋಲ್‌ ಜೊತೆ ಎಥೆನಾಲ್‌ ಮಿಶ್ರಣವಾಗಿರುವ ಇಂಧನ ಬರುತ್ತಿದೆ.

20% ಎಥೆನಾಲ್‌ ಮತ್ತು 80% ಬಾಕಿ ಪೆಟ್ರೋಲ್‌ ಮಿಶ್ರಿತ ತೈಲವನ್ನು ಇ20 ತೈಲ ಎನ್ನುತ್ತಾರೆ. ಕಬ್ಬು, ಜೋಳ ಅಥವಾ ಹೆಚ್ಚುವರಿ ಧಾನ್ಯದಿಂದ ತಯಾರಿಸಲಾದ ಜೈವಿಕ ಇಂಧನವನ್ನು ಎಥೆನಾಲ್‌ ಎಂದು ಕರೆಯಲಾಗುತ್ತದೆ. 2003ರಲ್ಲಿ ಭಾರತದಲ್ಲಿ ಇ5 ಇಂಧನ ಸಿಗತೊಡಗಿತು. 2022ರ ವೇಳೆಗೆ ದೇಶದಲ್ಲಿ ಇ10 ಇಂಧನ ಮಾರಾಟವಾಗುತ್ತಿತ್ತು. 2023ರಲ್ಲಿ ಕೆಲ ನಗರಗಳಲ್ಲಿ ಪ್ರಾಯೋಗಿಕವಾಗಿ ಇ20 ಇಂಧನ ಮಾರಾಟ ಮಾಡಲಾಗುತ್ತಿತ್ತು. 2025 ರಿಂದ ದೇಶಾದ್ಯಂತ ಇ20 ಇಂಧನ ಮಾರಾಟ ಮಾಡಲಾಗುತ್ತಿದೆ. ಇದನ್ನೂ ಓದಿ: ಬೀದಿ ನಾಯಿಗಳ ಸ್ಥಳಾಂತರ; ಸುಪ್ರೀಂ ಆದೇಶಕ್ಕೆ ರಾಹುಲ್ ಗಾಂಧಿ ಆಕ್ಷೇಪ

ಸ್ಪಷ್ಟನೆಯಲ್ಲಿ ಏನಿದೆ?
ಚಾಲನಾ ಅಭ್ಯಾಸಗಳು, ವಾಹನ ನಿರ್ವಹಣೆ, ಟೈರ್ ಒತ್ತಡ ಮತ್ತು ಹವಾನಿಯಂತ್ರಣ ಬಳಕೆಯಂತಹ ಅಂಶಗಳು ವಾಹನದ ಮೈಲೇಜ್‌ ಮೇಲೆ ಪ್ರಭಾವ ಬೀರುತ್ತವೆ.

2009 ರಿಂದಲೂ ಅನೇಕ ವಾಹನಗಳು E20 ಇಂಧನಕ್ಕೆ ಹೊಂದಾಣಿಕೆಯಾಗುತ್ತಿವೆ. ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌, ಆಟೋಮೊಟಿವ್‌ ರಿಸರ್ಚ್‌ ಆಸೋಸಿಯೇಷನ್‌ ಆಫ್‌ ಇಂಡಿಯಾ, ಸೊಸೈಟಿ ಆಫ್‌ ಇಂಡಿಯನ್‌ ಆಟೋಮೊಬೈಲ್‌ ಮ್ಯಾನುಫ್ಯಾಕ್ಚರ್ಸ್‌ ನಡೆಸಿದ ಸಂಶೋಧನೆಯಿಂದ E20 ಇಂಧನವು ಉತ್ತಮ ವೇಗವರ್ಧನೆ ಮತ್ತು E10 ಇಂಧನಕ್ಕಿಂತ 30% ರಷ್ಟು ಕಡಿಮೆ ಇಂಗಾಲದ ಹೊರಸೂಸುವಿಕೆಯನ್ನು ನೀಡುತ್ತದೆ ಎಂದು ಕಂಡುಹಿಡಿದಿದೆ.

E20 ಬಳಸುವುದರಿಂದ ವಾಹನ ವಿಮೆ ರದ್ದಾಗುತ್ತದೆ ಎಂಬ ಹೇಳಿಕೆ ಆಧಾರರಹಿತ ಮತ್ತು ಉದ್ದೇಶಪೂರ್ವಕ ಭಯ ಹುಟ್ಟಿಸುವ ಹೇಳಿಕೆಯಾಗಿದೆ. ಎಥೆನಾಲ್-ಮಿಶ್ರಿತ ಇಂಧನವನ್ನು ಬಳಸುವ ವಾಹನಗಳಿಗೆ ವಿಮಾ ರಕ್ಷಣೆ ಸಿಗಲಿದೆ. ಹಳೆಯ ವಾಹನಗಳಲ್ಲಿ ಅಗತ್ಯವಿರುವ ಯಾವುದೇ ಸಣ್ಣ ಭಾಗಗಳ ಬದಲಾವಣೆಯನ್ನು ಕಂಪನಿಯ ಅಧಿಕೃತ ವರ್ಕ್‌ಶಾಪ್‌ನಲ್ಲಿ ಮಾಡಿಕೊಳ್ಳಬಹುದು.

ಜೈವಿಕ ಇಂಧನಗಳು ಮತ್ತು ನೈಸರ್ಗಿಕ ಅನಿಲವು ಭಾರತದ ಸೇತುವೆ ಇಂಧನಗಳು. ಕಬ್ಬು ಆಧಾರಿತ ಎಥೆನಾಲ್‌ನಿಂದ ಹಸಿರುಮನೆ ಅನಿಲ ಹೊರಸೂಸುವಿಕೆಯು ಪೆಟ್ರೋಲ್‌ಗಿಂತ 65% ರಷ್ಟು ಕಡಿಮೆ ಮತ್ತು ಮೆಕ್ಕೆಜೋಳ ಆಧಾರಿತ ಎಥೆನಾಲ್‌ನಿಂದ 50% ರಷ್ಟು ಕಡಿಮೆಯಾಗಿದೆ ಎಂದು ನೀತಿ ಆಯೋಗದ ಅಧ್ಯಯನ ಹೇಳಿದೆ.

ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಮಾಡಿದ್ದರಿಂದ ತೈಲ ಮಾರುಕಟ್ಟೆ ಕಂಪನಿಗಳಿಗೆ 1.44 ಲಕ್ಷ ಕೋಟಿಗೂ ರೂ. ಹೆಚ್ಚು ವಿದೇಶಿ ವಿನಿಮಯ ಉಳಿತಾಯವಾಗಿದೆ. ಇಂಗಾಲದ ಡೈಆಕ್ಸೈಡ್ ಅಂದಾಜು 736 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಕಡಿಮೆಯಾಗಿದ್ದು ದು 30 ಕೋಟಿ ಮರಗಳನ್ನು ನೆಡುವುದಕ್ಕೆ ಸಮಾನವಾಗಿದೆ.

ಬ್ರೆಜಿಲ್‌ನಲ್ಲಿ ಕೆಲ ವರ್ಷಗಳಿಂದ E27 ಇಂಧನ ಬಳಕೆ ಮಾಡುತ್ತಿದ್ದು ಅಲ್ಲಿ ಯಾವುದೇ ಸಮಸ್ಯೆಯಿಲ್ಲದೇ ಯಶಸ್ವಿಯಾಗಿದೆ. ಟೊಯೋಟಾ, ಹೋಂಡಾ, ಹುಂಡೈ ಮುಂತಾದ ವಾಹನ ತಯಾರಕರು ಅಲ್ಲಿಯೂ ವಾಹನಗಳನ್ನು ಉತ್ಪಾದಿಸುತ್ತಾರೆ ಎಂದು ಸ್ಪಷ್ಟನೆಯಲ್ಲಿ ಹೇಳಿದೆ.

Share This Article