Union Budget: 10 ಆದಾಯ ತೆರಿಗೆ ಬದಲಾವಣೆಗಳು – ಮಧ್ಯಮ ವರ್ಗದವರ ಬೇಡಿಕೆಗಳೇನು?

Public TV
4 Min Read

ನವದೆಹಲಿ: ಕೇಂದ್ರ ಬಜೆಟ್ 2025 (Union Budget 2025) ಇದೇ ಫೆ.1 ರಂದು ಮಂಡನೆಯಾಗಲಿದೆ. ಕೇಂದ್ರ ಹಣಕಾಸು ಸಚಿವರು ಆಯವ್ಯಯ ಮಂಡಿಸಲು ಸಜ್ಜಾಗಿದ್ದಾರೆ. ಜನರ ನಿರೀಕ್ಷೆಗಳು ಗರಿಗೆದರಿವೆ. ನಮ್ಮ ವಲಯಕ್ಕೆ ಏನೇನು ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಸಂಬಳ ಪಡೆಯುವ ಉದ್ಯೋಗಿಗಳು, ಕಾರ್ಪೊರೇಟ್‌ಗಳು ಮತ್ತು ಉದ್ಯಮಿಗಳಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಏನು ನೀಡಲಿದ್ದಾರೆ ಎಂಬುದರ ಮೇಲೆ ಎಲ್ಲರ ಗಮನ ಕೇಂದ್ರೀಕರಿಸಿದೆ. ಆದಾಯ ತೆರಿಗೆ ಸೇರಿದಂತೆ ಯಾವೆಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆ ತರಲಿದ್ದಾರೆಂದು ಕುತೂಹಲದ ಕಣ್ಣಿನಿಂದ ಕಾಯುತ್ತಿದ್ದಾರೆ.

ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಈ ಹೊತ್ತಿನಲ್ಲಿ ಆದಾಯ ತೆರಿಗೆ, ಎಲೆಕ್ಟ್ರಿಕ್ ವೆಹಿಕಲ್ಸ್ (ಇವಿ) ಮತ್ತು ಕ್ರಿಪ್ಟೋ, ಗೃಹ ಸಾಲ, ಉಳಿತಾಯಕ್ಕೆ ಪ್ರೋತ್ಸಾಹ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಇವುಗಳಲ್ಲಿ ಬದಲಾವಣೆಗಳನ್ನು ತರುವ ಸಂಬಂಧ ಹಲವು ಶಿಫಾರಸುಗಳನ್ನು ತಜ್ಞರು ನೀಡಿದ್ದಾರೆ. ಈ ಪ್ರಸ್ತಾವಿತ ಸುಧಾರಣೆಗಳು ತೆರಿಗೆದಾರರಿಗೆ ಒಂದಷ್ಟು ಪರಿಹಾರ ಒದಗಿಸುವ ಗುರಿಯನ್ನು ಹೊಂದಿವೆ. ಇದನ್ನೂ ಓದಿ: Union Budget 2025| ಯಾವಾಗ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆ ಮಾಡುತ್ತಾರೆ?

ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆ
ವೈಯಕ್ತಿಕ ಆದಾಯ ತೆರಿಗೆ ದರಗಳನ್ನು ಸಂಭಾವ್ಯವಾಗಿ ಕಡಿಮೆ ಮಾಡುವ ಮೂಲಕ ಮಧ್ಯಮ ವರ್ಗದ ತೆರಿಗೆದಾರರಿಗೆ ಪರಿಹಾರವನ್ನು ಒದಗಿಸಲು ತೆರಿಗೆ ಸ್ಲ್ಯಾಬ್‌ಗಳನ್ನು ಪರಿಷ್ಕರಿಸಲು ಸರ್ಕಾರವು ಪರಿಗಣಿಸಬೇಕು ಎಂಬ ಕೂಗು ಕೇಳಿಬಂದಿದೆ.

ಆದಾಯ ತೆರಿಗೆ ಆಡಳಿತದ ಅಡಿಯಲ್ಲಿ ವಿನಾಯಿತಿ ಮಿತಿಯನ್ನು ಹೆಚ್ಚಿಸುವ ಮೂಲಕ ಹಣದುಬ್ಬರವನ್ನು ಪರಿಹರಿಸಬಹುದು. ಆದಾಯ ತೆರಿಗೆಗೆ ಕನಿಷ್ಠ 10 ಲಕ್ಷ ರೂ. ಮಿತಿ ಅಳವಡಿಸಿಕೊಳ್ಳಬೇಕು ಎಂದು ಅನೇಕ ತೆರಿಗೆದಾರರು ನಿರೀಕ್ಷಿಸಿದ್ದಾರೆ. ಸರ್ಕಾರವು ವಾರ್ಷಿಕವಾಗಿ 15 ಲಕ್ಷದವರೆಗೆ ಗಳಿಸುವವರಿಗೆ ಆದಾಯ ತೆರಿಗೆ ದರಗಳನ್ನು ಕಡಿಮೆ ಮಾಡಬೇಕು. ಇದರಿಂದ ವೈಯಕ್ತಿಕ ಆದಾಯ ಹೆಚ್ಚಳವಾಗಲಿದೆ. ಆಗ ಮಾರುಕಟ್ಟೆಯಲ್ಲಿ ವಿನಿಯೋಗವು ಹೆಚ್ಚಲಿದೆ ಎಂದು ಕ್ಲಿಯರ್‌ಟ್ಯಾಕ್ಸ್‌ನ ತೆರಿಗೆ ತಜ್ಞ ಶೆಫಾಲಿ ಮುಂದ್ರಾ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಫೈನಾನ್ಸ್ ಕಿರುಕುಳ: 3 ವರ್ಷ ಜೈಲು, 1 ಲಕ್ಷದ ವರೆಗೆ ದಂಡ – ಗುರುವಾರ ಸರ್ಕಾರದಿಂದ ಸುಗ್ರೀವಾಜ್ಞೆ

ಹೊಸ ತೆರಿಗೆ ವ್ಯವಸ್ಥೆಯಲ್ಲಿ ಗೃಹ ಸಾಲದ ಪ್ರಯೋಜನಗಳು
ಹೊಸ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ ಮನೆ ಹೊಂದುವವರನ್ನು ಪ್ರೋತ್ಸಾಹಿಸಬೇಕು. ಹಳೆ ತೆರಿಗೆ ಪದ್ಧತಿಯಲ್ಲಿ ಕಡಿಮೆ ತೆರಿಗೆ ಇರುವವರಿಗೂ ಇದರ ಲಾಭ ಸಿಗಬೇಕು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತೆರಿಗೆ ತಜ್ಞರು ಸಲಹೆ ನೀಡಿದ್ದಾರೆ.

ಮನೆ ಮಾಲೀಕರಿಗೆ ಪ್ರೋತ್ಸಾಹ
ಮನೆ ಹೊಂದುವವರು ಸೆಕ್ಷನ್ 24(ಬಿ) ಅಡಿಯಲ್ಲಿ ಗೃಹ ಸಾಲಗಳ ಮೇಲಿನ ಹೆಚ್ಚಿನ ಬಡ್ಡಿ ಕಡಿತದ ಮಿತಿಗಳಿಂದ ಪ್ರಯೋಜನ ಪಡೆಯಬಹುದು. ಕನಿಷ್ಠ ಒಂದು ಮನೆಗಾದರೂ, ಪೂರ್ತಿ ಬಡ್ಡಿ ಪಾವತಿಸುವವರಿಗೆ ರಿಯಾಯಿತಿ ಮಿತಿಯನ್ನು ಹೆಚ್ಚಿಸಬೇಕು. ಪ್ರಸ್ತುತ ಈ ಮಿತಿಯನ್ನು 2 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಬೇಕು ದಿವಾನ್ ಪಿ.ಎನ್‌ನ ವ್ಯವಸ್ಥಾಪಕ ಪಾಲುದಾರ ಧ್ರುವ ಚೋಪ್ರಾ ತಿಳಿಸಿದ್ದಾರೆ.

ಎನ್‌ಪಿಎಸ್ ಕಡಿತ ಮಿತಿ ಹೆಚ್ಚಿಸುವುದು
ಹೆಚ್ಚುವರಿ ಎನ್‌ಪಿಎಸ್ ಕಡಿತದ ಮಿತಿಯನ್ನು 50,000 ದಿಂದ 1 ಲಕ್ಷಕ್ಕೆ ಹೆಚ್ಚಿಸಬೇಕು. ಅದಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಬೇಕು ಎಂಬ ಕೂಗು ಕೇಳಿಬಂದಿದೆ.

ಶ್ರೇಣಿ-2 ನಗರಗಳಿಗೆ ಹೆಚ್‌ಆರ್‌ಎ
ದ್ವಿತೀಯ ದರ್ಜೆ ನಗರಗಳಾದ ಬೆಂಗಳೂರು, ಹೈದರಾಬಾದ್, ಪುಣೆಯಲ್ಲಿ ಉದ್ಯೋಗಿಗಳಿಗೆ ಮನೆ ಬಾಡಿಗೆ ಭತ್ಯೆಯನ್ನು 50%ಗೆ ವಿಸ್ತರಿಸಬೇಕು ಎಂದು ಬೇಡಿಕೆಯೂ ಇದೆ.

ಸೆಕ್ಷನ್ 80ಡಿ ಅಡಿಯಲ್ಲಿ ಸುಧಾರಣೆಗಳು
ಈಗಿನ ದಿನಮಾನಗಳಲ್ಲಿ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಾಗಿದೆ. ಹೀಗಾಗಿ, ಹಿರಿಯ ನಾಗರಿಕರ ಆರೋಗ್ಯ ವಿಮೆ ಸೆಕ್ಷನ್ 80ಡಿ ಅಡಿಯಲ್ಲಿ 25ರಿಂದ 50 ಸಾವಿರಕ್ಕೆ ಹಾಗೂ 50ರಿಂದ 1 ಲಕ್ಷಕ್ಕೆ ತೆರಿಗೆ ಮಿತಿಯನ್ನು ಹೆಚ್ಚಿಸಬೇಕು ಎಂದು ಶೆಫಾಲಿ ಮುಂದ್ರಾ ಸಲಹೆ ನೀಡಿದ್ದಾರೆ. ಇದನ್ನೂ ಓದಿ: PUBLiC TV Impact | ಹಾಲಿಗೆ ನೀರು ಕಲಬೆರಕೆ ಮಾಡಿರೋದು ತನಿಖೆಯಲ್ಲಿ ಧೃಢ – ಸಿಬ್ಬಂದಿ, ಅಧಿಕಾರಿಗಳು ವಜಾ

ಪಿಎಫ್ ಬಡ್ಡಿಯ ಮೇಲಿನ ಟಿಡಿಎಸ್‌ಗೆ ವಿನಾಯಿತಿ ನೀಡಬೇಕು
ಪಿಎಫ್ ಮೇಲಿನ ಬಡ್ಡಿಯು 2.5 ಲಕ್ಷ ರೂ. ಮೀರಿದಾಗ ವಿಧಿಸುವ ಟಿಡಿಎಸ್ ಅನ್ನು ಹಣ ಹಿಂಪಡೆಯುವ ವರೆಗೂ ಕಡಿತ ಮಾಡಬಾರದು ಎಂಬ ಬೇಡಿಕೆ ಇದೆ.

ಹೂಡಿಕೆ ಮೇಲಿನ ತೆರಿಗೆ
ಹೂಡಿಕೆಯ ಲಾಭದ ಮೇಲಿನ ತೆರಿಗೆಗಳಿಗೆ ಸಂಬಂಧಿಸಿದಂತೆ ಕೆಲವು ಬದಲಾವಣೆಯ ಅಗತ್ಯತೆಗಳನ್ನು ನಿರೀಕ್ಷಿಸಲಾಗಿದೆ. ಭಾರತೀಯ ಹಾಗೂ ವಿದೇಶಿ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ, ಚಿನ್ನದ ಮೇಲಿನ ಹೂಡಿಕೆಯಿಂದ ಸಿಗುವ ಲಾಭಕ್ಕೆ ತೆರಿಗೆ ಪ್ರಮಾಣ ತಗ್ಗಿಸಬೇಕು. ಸ್ಟಾಕ್ ಲಾಭದ ಮೇಲಿನ ತೆರಿಗೆಗಳು ಹೆಚ್ಚಾಗಿರುವುದರಿಂದ (ಅಲ್ಪಾವಧಿಗೆ 15% ರಿಂದ 20% ಮತ್ತು ದೀರ್ಘಾವಧಿಗೆ 10% ರಿಂದ 12.5% ವರೆಗೆ), ಷೇರುಗಳನ್ನು ಖರೀದಿಸುವಾಗ ಮತ್ತು ಮಾರಾಟ ಮಾಡುವಾಗ ಪಾವತಿಸುವ ತೆರಿಗೆಯನ್ನು ತೆಗೆದುಹಾಕಬೇಕು.

ಹಿರಿಯ ನಾಗರಿಕರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡುವುದು
ಹಿರಿಯ ನಾಗರಿಕರಿಗೆ ಹಣಕಾಸಿನ ಒತ್ತಡ ಕಡಿಮೆ ಮಾಡಬೇಕಿದೆ. ಅವರಿಗೆ ಉದಾರವಾದ ವಿನಾಯಿತಿ ಮಿತಿಯನ್ನು ಒದಗಿಸಬೇಕಿದೆ. ಹೆಚ್ಚಿನ ವಿನಾಯಿತಿ ನೀಡಬೇಕಿದೆ ಎಂಬುದು ತಜ್ಞರ ಸಲಹೆ.

ಸೆಕ್ಷನ್ 80ಸಿ ಅಡಿಯಲ್ಲಿ ಮಿತಿ ಹೆಚ್ಚಳ
ಸೆಕ್ಷನ್ 80ಸಿ ಮಿತಿಯನ್ನು ಪರಿಷ್ಕರಿಸಬೇಕು ಎಂದು ಮಧ್ಯಮ ವರ್ಗ ಆಶಯ ವ್ಯಕ್ತಪಡಿಸಿದೆ. ಈಗ ಇರುವ 1.5 ಲಕ್ಷ ಮಿತಿಯು 2014ರಿಂದಲೂ ಬದಲಾಗಿಲ್ಲ. ಎಫ್‌ಡಿ, ಪಿಪಿಎಫ್ ಮೊದಲಾದ ಹೂಡಿಕೆ ಉತ್ತೇಜನಕ್ಕೆ ಇದು ತುಂಬಾ ಅವಶ್ಯಕ ಎಂದು ತಜ್ಞರು ತಿಳಿಸಿದ್ದಾರೆ.

Share This Article