ಓಲೈಕೆಯ ಲೇಪವಿಲ್ಲದ ಅಭಿವೃದ್ಧಿಪರ ಬಜೆಟ್ : ಸುನಿಲ್ ಕುಮಾರ್

Public TV
2 Min Read

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರ ಬಜೆಟ್ ಭವಿಷ್ಯದ ಭಾರತಕ್ಕೆ ಪೂರಕವಾದ ನೀತಿ- ನಿರೂಪಕ ಅಂಶಗಳನ್ನು ಹೊಂದಿದೆ. ಇಂಧನ ಕ್ಷೇತ್ರಕ್ಕೆ ದೂರದೃಷ್ಟಿಯ ಸ್ಪರ್ಶ ನೀಡಿದ್ದಾರೆ ಎಂದು ಇಂಧನ ಸಚಿವ ಸುನಿಲ್‌ ಕುಮಾರ್‌ ಹೇಳಿದ್ದಾರೆ.

ಸುನಿಲ್‌ ಕುಮಾರ್‌ ಹೇಳಿದ್ದೇನು?
ಮುಂದಿನ 25 ವರ್ಷಗಳ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ತಯಾರಿಸಲಾಗಿದೆ. ಯಾವುದೇ‌ ಒಂದು ವರ್ಗದ ಓಲೈಕೆಗೆ ಸೀಮಿತವಾಗಿರದೇ ಪಾಲಿಸಿ ಆಧರಿತ ಕಾರ್ಯಕ್ರಮಗಳ ಜಾರಿಗೆ ಕೇಂದ್ರ ಆದ್ಯತೆ ನೀಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಸ್ವಚ್ಛ ಇಂಧನಕ್ಕೆ ಬಜೆಟ್ ನಲ್ಲಿ ಒತ್ತು ನೀಡಿದ್ದಾರೆ. ಇದನ್ನೂ ಓದಿ: ದೇಶದ ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡುವ ಬಜೆಟ್: ಶಶಿಕಲಾ ಜೊಲ್ಲೆ

ಕೇಂದ್ರ ಸರಕಾರದ ಆದ್ಯತಾ ವಲಯದಲ್ಲಿ ಇಂಧನ ಕ್ಷೇತ್ರ ಸೇರಿದ್ದು, ವಿದ್ಯುತ್ ಪ್ರಸರಣ ಮತ್ತು ಆಧುನೀಕರಣಕ್ಕೆ ಒತ್ತು ನೀಡಿದ್ದಾರೆ. ವಿಶೇಷವಾಗಿ ಹಸಿರು ಶಕ್ತಿ ಮೂಲಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಸುಸ್ಥಿರ ಅಭಿವೃದ್ಧಿಗೆ ಕಡಿಮೆ‌‌ ಇಂಗಾಲ ಬಿಡುಗಡೆ ಮಾಡುವ ಶಕ್ತಿ ಮೂಲಗಳ ಬಳಕೆಗೆ ಅಗತ್ಯ ಎಂದು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ವಿಶ್ವ ವೇದಿಕೆಯಲ್ಲಿ ಪ್ರತಿಪಾದಿಸಿದ್ದರು.‌ ಇದರ ಮುಂದುವರಿದ ಭಾಗವಾಗಿ ʼಪಂಚಾಮೃತʼ ಕಲ್ಪನೆಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಒತ್ತು‌ ನೀಡಿದ್ದಾರೆ.

2030ರ ಹೊತ್ತಿಗೆ 8 ಗಿಗಾ ಹರ್ಟ್ಸ್ ಸೋಲಾರ್ ವಿದ್ಯುತ್‌ ಉತ್ಪಾದನೆಯ ಮಹತ್ವಾಕಾಂಕ್ಷೆಯನ್ನು ಹೊಂದಿದ್ದು, ಇದಕ್ಕೆ 19,500 ಕೋಟಿ ರೂ. ಅನುದಾನ ನಿಗದಿ ಮಾಡಿರುವುದು ಅತ್ಯಂತ ಸ್ವಾಗತಾರ್ಹ.‌ ಜೊತೆಗೆ ಎಲೆಕ್ಟ್ರಿಕ್‌ ವಾಹನಗಳ ಅಭಿವೃದ್ಧಿಗೂ ಆದ್ಯತೆ ನೀಡಿರುವುದು ಆ ವಲಯದ ಬೆಳವಣಿಗೆಗೆ ಪೂರಕವಾಗಿದೆ.

ಗ್ರೀನ್ ಎನರ್ಜಿಯ ಜತೆಗೆ ಕ್ಲೀನ್ ಎನರ್ಜಿಯ ವಿಚಾರವನ್ನು ಬಜೆಟ್ ಪ್ರಸ್ತಾಪಿಸಲಾಗಿದೆ. ಇದು ವಿದ್ಯುತ್ ಪ್ರಸರಣ ಹಾಗೂ ಸೋರಿಕೆಯ ತಡೆಗೆ ಹೊಸ ಮಾರ್ಗ ತೋರುವುದು ಸ್ಪಷ್ಟ. ಕೇಂದ್ರ ಸರಕಾರ ಈಗಾಗಲೇ ರಾಜ್ಯದ ವಿದ್ಯುದೀಕರಣಕ್ಕೆ ತೆರೆದ ಮನಸಿನಿಂದ ಸಹಕಾರ ನೀಡುತ್ತಿದ್ದು, ಬಜೆಟ್ ವಿಶ್ಲೇಷಣೆ ಸಂದರ್ಭದಲ್ಲಿ ಈ ಬಗ್ಗೆ‌ ಇನ್ನಷ್ಟು ಸ್ಪಷ್ಟತೆ ದೊರಕುತ್ತದೆ. ಇದನ್ನೂ ಓದಿ: ಗ್ರಾಮೀಣ, ನಗರಾಭಿವೃದ್ಧಿ ಎರಡು ಕ್ಷೇತ್ರಗಳ ಅಭಿವೃದ್ಧಿಗೆ ಪೂರಕ: ಬಿಎಸ್‌ವೈ ಮೆಚ್ಚುಗೆ

ಯಾವುದೋ ಒಂದು ರಾಜ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಗಳನ್ನು ಘೋಷಿಸುವ ಪರಂಪರೆಯನ್ನು ಈ ಬಾರಿ ಕೈ ಬಿಡಲಾಗಿದೆ. ದೇಶದ ಸಮಷ್ಠಿ ದೃಷ್ಟಿಕೋನ ಬಜೆಟ್ ನಲ್ಲಿದೆ. ನವೋದ್ಯಮ, ಕೃಷಿ, ರೈಲು, ಇಂಧನದ ಜತೆಗೆ ರಕ್ಷಣಾ ಇಲಾಖೆಯಲ್ಲಿ ಆತ್ಮ ನಿರ್ಭರತೆಗೆ‌ ಕೇಂದ್ರ ಒತ್ತು‌ನೀಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರದ ಕೊಡುಗೆ ವಿಫುಲವಾಗಿದೆ. “ಒನ್ ಕ್ಲಾಸ್ ಒನ್ ಟಿವಿ ಚಾನಲ್” ಮೂಲಕ ಇ- ವಿದ್ಯಾ ಯೋಜನೆ ಜಾರಿಗೆ ಮುಂದಾಗಿದೆ. ಇದು ಕೋವಿಡ್ ಸಂದರ್ಭದಲ್ಲಿ ಪೂರ್ಣ ಶಿಕ್ಷಣ ವಂಚಿತ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗುತ್ತದೆ.

ರಾಜ್ಯಗಳಿಗೆ 1 ಲಕ್ಷ ಕೋಟಿ ಬಡ್ಡಿ ರಹಿತ ಸಾಲ ನೀಡುವ ವಿಚಾರವನ್ನು ಬಜೆಟ್ ನಲಿ ಪ್ರಸ್ತಾಪಿಸಲಾಗಿದೆ. ಒನ್ ನೇಶನ್ ಒನ್ ರಜಿಸ್ಟ್ರೇಶನ್ ಪ್ರಸ್ತಾಪ‌ ನೋಂದಣಿ ಕ್ಷೇತ್ರದಲ್ಲಿನ‌ ಗೊಂದಲಗಳನ್ನು ನಿವಾರಣೆ ಮಾಡುತ್ತದೆ. 60 ಲಕ್ಷ ಉದ್ಯೋಗ ಸೃಷ್ಟಿಯ ಸ್ಪಷ್ಟ ಗುರಿ ನಿಗದಿ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *