ಉತ್ತರಾಖಂಡದ ಬಳಿಕ ಗುಜರಾತ್‌ನಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಿದ್ಧತೆ

Public TV
2 Min Read

ಗಾಂಧೀನಗರ: ಉತ್ತರಾಖಂಡದ ಬಳಿಕ ಗುಜರಾತ್‌ನಲ್ಲೂ (Gujarat) ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿ ಮಾಡಲು ಸಿದ್ಧತೆಗಳು ಪ್ರಾರಂಭವಾಗಿವೆ. ಏಕರೂಪ ನಾಗರಿಕ ಸಂಹಿತೆಯನ್ನು ರೂಪಿಸಲು ಮತ್ತು ಜಾರಿಗೆ ತರಲು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ರಂಜನಾ ದೇಸಾಯಿ ನೇತೃತ್ವದಲ್ಲಿ ಐದು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Bhupendra Patel) ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ನಾವು ಸಂವಿಧಾನದ 75 ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದೇವೆ. ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದು ಅವರ ಉದ್ದೇಶ, ಯುಸಿಸಿಯಿಂದ ಎಲ್ಲರಿಗೂ ಸಮಾನ ಹಕ್ಕುಗಳು ಸಿಗುತ್ತವೆ. ನಾವು ರಚನೆ ಮಾಡಿರುವ ಸಮಿತಿಯು 45 ದಿನಗಳಲ್ಲಿ ತನ್ನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದ್ದು, ಅದರ ಆಧಾರದ ಮೇಲೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಿಎಂ ತಿಳಿಸಿದರು. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಪ್ರಕರಣ – ಸಂಸತ್‌ನಲ್ಲಿ ಚರ್ಚೆಯಾಗಬೇಕು ಎಂದು ಆಗ್ರಹಿಸಿದ ಅಖಿಲೇಶ್ ಯಾದವ್

bhupendra patel gujarat chief minister

370 ನೇ ವಿಧಿ ರದ್ದತಿ ಮತ್ತು ತ್ರಿವಳಿ ತಲಾಖ್ ನಿಷೇಧವನ್ನು ಉಲ್ಲೇಖಿಸಿದ ಸಿಎಂ ಪಟೇಲ್, 370 ನೇ ವಿಧಿ ರದ್ದತಿ, ಒಂದು ರಾಷ್ಟ್ರ ಒಂದು ಚುನಾವಣೆ ಮತ್ತು ತ್ರಿವಳಿ ತಲಾಖ್ ಬಗ್ಗೆ ನೀಡಿದ ಭರವಸೆಗಳನ್ನು ಈಡೇರಿಸಲಾಗುತ್ತಿದೆ ಎಂದು ಹೇಳಿದರು. ಈ ದಿಕ್ಕಿನಲ್ಲಿ ಪ್ರಧಾನಿ ಮೋದಿಯವರ ಸಂಕಲ್ಪವನ್ನು ಈಡೇರಿಸಲು ಗುಜರಾತ್ ನಿರಂತರವಾಗಿ ಕೆಲಸ ಮಾಡುತ್ತಿದೆ. ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಈ ಕೆಲಸ ಮಾಡುತ್ತಿದೆ ಎಂದರು.

ವರದಿಯನ್ನು ಸಿದ್ಧಪಡಿಸುವಲ್ಲಿ ಎಲ್ಲಾ ಅಂಶಗಳನ್ನು ಪರಿಗಣಿಸಲಾಗುವುದು ಎಂದು ಗುಜರಾತ್ ಗೃಹ ಸಚಿವ ಹರ್ಷ್ ಸಾಂಘ್ವಿ ಹೇಳಿದ್ದಾರೆ. ಏಕರೂಪ ನಾಗರಿಕ ಸಂಹಿತೆಯು ಸಂವಿಧಾನದ ಸ್ಫೂರ್ತಿಯಾಗಿದ್ದು, ಇದು ಸಾಮರಸ್ಯ ಮತ್ತು ಸಮಾನತೆಯನ್ನು ಸ್ಥಾಪಿಸುತ್ತದೆ. ಗುಜರಾತ್‌ನ ಎಲ್ಲಾ ನಾಗರಿಕರು ಸಮಾನ ಹಕ್ಕುಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಯುಸಿಸಿ ಸಮಿತಿಯನ್ನು ರಚಿಸಿದ್ದಾರೆ. ಇದನ್ನೂ ಓದಿ: ಚೀನಾ, ಮೆಕ್ಸಿಕೊ, ಕೆನಡಾಗೆ ಸುಂಕದ ಬರೆ – ಅಮೆರಿಕಕ್ಕೆ ಬೀಳುತ್ತಾ ರಿವರ್ಸ್‌ ಟ್ಯಾಕ್ಸ್‌ ಎಫೆಕ್ಟ್‌?

ಇದರ ನೇತೃತ್ವವನ್ನು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶೆ ನ್ಯಾಯಮೂರ್ತಿ (ನಿವೃತ್ತ) ರಂಜನಾ ದೇಸಾಯಿ ವಹಿಸಲಿದ್ದಾರೆ. ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಸಿಎಲ್ ಮೀನಾ, ವಕೀಲ ಆರ್‌ಸಿ ಕೊಡೇಕರ್, ಮಾಜಿ ಉಪಕುಲಪತಿ ದಕ್ಷೇಶ್ ಠಾಕರ್ ಮತ್ತು ಸಾಮಾಜಿಕ ಕಾರ್ಯಕರ್ತೆ ಗೀತಾ ಶ್ರಾಫ್ ಕೂಡ ಸಮಿತಿಯಲ್ಲಿದ್ದಾರೆ. ಮುಂದಿನ 45 ದಿನಗಳಲ್ಲಿ ಈ ಬಗ್ಗೆ ವಿವರವಾದ ಸಂಶೋಧನೆ ನಡೆಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವಂತೆ ಮುಖ್ಯಮಂತ್ರಿಗಳು ಈ ಸಮಿತಿಗೆ ನಿರ್ದೇಶನ ನೀಡಿದ್ದಾರೆ ಎಂದರು.

Share This Article