ಮದುವೆ ಮೆರವಣಿಗೆಯಲ್ಲಿ ಭೂಗತ ಪಾತಕಿಯ ಗುಂಡಿಕ್ಕಿ ಹತ್ಯೆ

Public TV
1 Min Read

ಇಸ್ಲಾಮಾಬಾದ್: ಲಾಹೋರ್‌ನ ಭೂಗತ ಪಾತಕಿಯನ್ನ (Underworld Don) ಮದುವೆ ಮೆರವಣಿಗೆ ಸಂದರ್ಭದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂಬುದಾಗಿ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಅಮೀರ್ ಬಾಲಾಜ್ ಟಿಪ್ಪು (Ameer Balaj Tipu) ಮೃತ ಭೂಗತ ಪಾತಕಿ. ಈತನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಘಟನೆಯಿಂದಾಗಿ ಮದುವೆಗೆ ಬಂದಿರುವ ಅತಿಥಿಗಳಲ್ಲಿ ಮೂವರಿಗೆ ಗಾಯಗಳಾಗಿವೆ. ದುಷ್ಕರ್ಮಿಗಳ ದಾಳಿಯಿಂದ ಗಾಯಗೊಂಡ ನಾಲ್ವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಮೀರ್‌ ಅದಾಗಲೇ ಮೃತಪಟ್ಟಿದ್ದಾನೆ.

ಮೃತ ಅಮೀರ್ ಎದೆಗೆ ನಾಲ್ಕು ಗುಂಡುಗಳು ತಗುಲಿರುವುದು ಕಂಡುಬಂದಿದೆ. ಗುಂಡಿನ ದಾಳಿಯಿಂದಾಗಿ ತೀವ್ರ ರಕ್ತಸ್ರಾವವಾಗಿ ಅಮೀರ್‌ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅಮೀರ್‌ ಸಾವಿನ ಸುದ್ದಿ ಬೆಂಬಲಿಗರನ್ನು ಕೆರಳಿಸಿದೆ. ಕೂಡಲೇ ಆಸ್ಪತ್ರೆಯ ಹೊರಗೆ ಅಮೀರ್‌ ಬೆಂಬಲಿಗರು ಜಮಾಯಿಸಿದರು. ಮಹಿಳೆಯರಂತೂ ತಮ್ಮ ಎದೆಗೆ ಹೊಡೆದುಕೊಂಡು ದುಷ್ಕರ್ಮಿಗಳ ಕೃತ್ಯ ಖಂಡಿಸಿದರು. ಜೊತೆಗೆ ಆಕ್ರೋಶ ಕೂಡ ಹೊರಹಾಕಿದರು. ಇದನ್ನೂ ಓದಿ: ಮೃತ ನವಲ್ನಿಗೆ ಗೌರವ ಸಲ್ಲಿಸಲು ಬೀದಿಗಿಳಿದ 400 ಮಂದಿಯ ಬಂಧನ

ಒಟ್ಟಿನಲ್ಲಿ ಘಟನೆಯ ಬಗ್ಗೆ ಸಂಪೂರ್ಣ ತನಿಖೆಯನ್ನು ಅಧಿಕಾರಿಗಳು ಪ್ರಾರಂಭಿಸಿದ್ದಾರೆ. ಈ ದಾಳಿಗೆ ಕಾರಣವೇನು..? ಹಾಗೂ ದಾಳಿಯ ಹಿಂದಿನ ಉದ್ದೇಶವೇನು..?, ಯಾರು ಈ ದಾಳಿಯನ್ನು ಮಾಡಿದ್ದಾರೆ ಎಂಬುದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಯುತ್ತಿದೆ. ಸ್ಥಳೀಯ ವರದಿಗಳ ಪ್ರಕಾರ, ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ತೊರೆದಿರುವ ಅಮೀರ್ ಬಾಲಾಜ್, ಇತ್ತೀಚೆಗೆ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (PML-N) ಸೇರಿದ್ದನು ಎಂದು ಹೇಳಲಾಗಿದೆ.

Share This Article