ಕುಸಿದೇ ಬಿಡ್ತು 1,700 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಸೇತುವೆ

Public TV
2 Min Read

ಪಾಟ್ನಾ: ಬರೋಬ್ಬರಿ 1,700 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದ ಸೇತುವೆಯೊಂದು (Bridge) ಕುಸಿದು ಬಿದ್ದಿರುವ ಘಟನೆ ಬಿಹಾರದಲ್ಲಿ (Bihar) ನಡೆದಿದೆ.

ಬಿಹಾರದ ಖಗರಿಯಾದಲ್ಲಿ ನಿರ್ಮಿಸಲಾಗುತ್ತಿದ್ದ ಅಗುವನಿ ಸುಲ್ತಾನ್‌ಗಂಜ್ ಗಂಗಾ ಸೇತುವೆ ಭಾನುವಾರ ಕುಸಿದು ನೀರುಪಾಲಾಗಿದೆ. ಘಟನೆಯಲ್ಲಿ ಸದ್ಯ ಯಾವುದೇ ಪ್ರಾಣಹಾನಿಯಾಗಿಲ್ಲ. ಸ್ಥಳೀಯರು ಸೇತುವೆ ಕುಸಿದು (Bridge Collapse) ಬೀಳುತ್ತಿರುವ ವೀಡಿಯೋಗಳನ್ನು ಸೆರೆಹಿಡಿದ್ದು, ಇವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸೇತುವೆಯನ್ನು ಖಗಾರಿಯಾ, ಆಗುವನಿ ಮತ್ತು ಸುಲ್ತಾನ್‌ಗಂಜ್ ನಡುವೆ ಗಂಗಾ ನದಿಯ ಮೇಲೆ ನಿರ್ಮಿಸಲಾಗುತ್ತಿತ್ತು. ಏಪ್ರಿಲ್‌ನಲ್ಲಿ ಸುರಿದಿದ್ದ ಬಿರುಗಾಳಿ ಸಹಿತ ಭಾರೀ ಮಳೆಯ ಪರಿಣಾಮ ಸೇತುವೆಗೆ ಹಾನಿಯಾಗಿತ್ತು. 2 ವರ್ಷಗಳ ಹಿಂದೆಯೂ ಸೇತುವೆಯ ಒಂದು ಭಾಗ ಕುಸಿದಿತ್ತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಒಡಿಶಾ ರೈಲು ದುರಂತದ ತನಿಖೆ ಸಿಬಿಐ ಹೆಗಲಿಗೆ

ಏಪ್ರಿಲ್‌ನಲ್ಲಿ ಸೇತುವೆಗೆ ಹಾನಿಯಾಗಿದ್ದಾಗ ಕಳಪೆ ಕಾಮಗಾರಿಯ ಆರೋಪಗಳು ಕೇಳಿಬಂದಿದ್ದವು. ಆದರೂ ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಎಚ್ಚೆತ್ತುಕೊಂಡಿರಲಿಲ್ಲ. ಹೀಗಾಗಿ ನಿರ್ಮಾಣಹಂತದಲ್ಲಿದ್ದಾಗಲೇ ಸೇತುವೆ ಕುಸಿದಿದೆ. ಈ ಹಿನ್ನೆಲೆ ನಿತೀಶ್ ಕುಮಾರ್ ನೇತೃತ್ವದ ಬಿಹಾರದ ಸರ್ಕಾರವನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದಕ್ಕೂ ಮೊದಲು 2022 ರ ಡಿಸೆಂಬರ್‌ನಲ್ಲಿ ಬಿಹಾರದ ಬೇಗುಸರಾಯ್‌ನಲ್ಲಿ ಬುರ್ಹಿ ಗಂಡಕ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆಯ ಒಂದು ಭಾಗ ಕುಸಿದಿತ್ತು. ಸೇತುವೆ ಬಿರುಕು ಬಿಟ್ಟಿದ್ದು, ಅದರ 2-3 ಕಂಬಗಳು ಬಿದ್ದಿವೆ ಎಂದು ವರದಿಯಾಗಿತ್ತು. ಅದಕ್ಕೂ ಒಂದು ತಿಂಗಳ ಹಿಂದೆ ನವೆಂಬರ್‌ನಲ್ಲಿ ಸಿಎಂ ನಿತೀಶ್ ಕುಮಾರ್ ಅವರ ನಳಂದ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದು ಬಿದ್ದಿತ್ತು. ಪರಿಣಾಮ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದು, ಇನ್ನೊಬ್ಬರು ಗಾಯಗೊಂಡಿದ್ದರು. ಕಿಶನ್‌ಗಂಜ್ ಮತ್ತು ಸಹರ್ಸಾ ಜಿಲ್ಲೆಗಳಲ್ಲಿಯೂ ಉದ್ಘಾಟನೆಗೆ ಮುನ್ನ ನಿರ್ಮಾಣ ಹಂತದಲ್ಲಿದ್ದ ಸೇತುವೆಗಳು ಕುಸಿದಿವೆ. ಇದನ್ನೂ ಓದಿ: ಒಡಿಶಾ ರೈಲ್ವೆ ದುರಂತ – ಅನಾಥರಾದ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡ ಅದಾನಿ ಗ್ರೂಪ್

Share This Article