ನಾನ್ ಸ್ಟ್ರೈಕರ್ ನಲ್ಲಿ ಉಮೇಶ್ ಯಾದವ್ ನಿಂತಿದ್ರೂ ಔಟ್: ಮೂರನೇ ಅಂಪೈರ್ ಎಡವಟ್ಟು

Public TV
2 Min Read

ಮುಂಬೈ: ಆರ್‌ಸಿಬಿ ಮುಂಬೈ ನಡುವಿನ ಪಂದ್ಯದಲ್ಲಿ ಉಮೇಶ್ ಯಾದವ್ ಔಟ್ ಪರಿಶೀಲನೆ ವೇಳೆ 3ನೇ ಅಂಪೈರ್ ಪ್ರಮಾದ ಎಸಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಅವರ ನಾಟೌಟ್ ತೀರ್ಪು ವಿವಾದಕ್ಕೆ ಕಾರಣವಾದ ಬಳಿಕ ಪ್ರಸ್ತುತ ಬುಮ್ರಾ ಎಸೆತದಲ್ಲಿ ಯಾದವ್ ಔಟ್ ನೀಡಿರುವ ವೇಳೆ 3ನೇ ಅಂಪೈರ್ ಮಾಡಿರುವ ಪ್ರಮಾದ ಭಾರೀ ಚರ್ಚೆಗೆ ಕಾರಣವಾಗಿದೆ.

ಮುಂಬೈ ಇಂಡಿಯನ್ಸ್ ನೀಡಿದ ಬೃಹತ್ ಮೊತ್ತವನ್ನು ಬೆನ್ನೆತ್ತಿದ್ದ ಆರ್‌ಸಿಬಿ 18 ಓವರ್ ಅಂತ್ಯಕ್ಕೆ 8 ವಿಕೆಟ್ ಗೆ 137 ರನ್ ಗಳಿಸಿತ್ತು. ಈ ವೇಳೆ ಸ್ಟ್ರೇಕ್ ನಲ್ಲಿದ್ದ ಉಮೇಶ್ ಯಾದವ್ ಬುಮ್ರಾ ಅವರ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಔಟಾಗಿದ್ದರು. ಆದರೆ ಈ ವೇಳೆ ನೋಬಾಲ್ ಚೆಕ್ ಮಾಡಲು 3ನೇ ಅಂಪೈರ್ ಗೆ ಮನವಿ ಸಲ್ಲಿಸಲಾಗಿತ್ತು. ವಿಡಿಯೋ ಪರಿಶೀಲನೆ ವೇಳೆ ನಾನ್ ಸ್ಟ್ರೈಕರ್ ನಲ್ಲಿ ಉಮೇಶ್ ಯಾದವ್ ನಿಂತಿರುವುದು ಸೆರೆಯಾಗಿದ್ದರೂ ಅಂಪೈರ್ ಔಟ್ ಎಂದು ಘೋಷಿಸಿದ್ದರು.

ಎಡವಟ್ಟು ಆಗಿದ್ದು ಎಲ್ಲಿ?
ಅಂಪೈರ್ ಉಮೇಶ್ ಯಾದವ್ ಎಸೆತವನ್ನು ಪರಿಶೀಲನೆ ನಡೆಸುವ ಬದಲು ಕೊಹ್ಲಿ ಆಡಿದ ಎಸೆತವನ್ನು ಪರಿಶೀಲನೆ ನಡೆಸಿದ್ದರು. ಆದರೆ ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಸದ್ಯ ಪಂದ್ಯದ ಬಳಿಕ ಸಾಮಾಜಿಕ ಜಾಲತಾಣದಲ್ಲಿ 3 ನೇ ಅಂಪೈರ್ ಮಾಡಿದ ಪ್ರಮಾದ ಬೆಳಕಿಗೆ ಬಂದಿದೆ.

ಇದೇ ಮೊದಲಲ್ಲ: ಪಂದ್ಯದ ಸಂದರ್ಭದಲ್ಲಿ 3ನೇ ಅಂಪೈರ್ ಈ ರೀತಿ ಪ್ರಮಾದ ಎಸಗಿರುವುದು ಇದೇ ಮೊದಲಲ್ಲ. ಈ ಹಿಂದೆ 2011 ರಲ್ಲೂ ಇಂತಹ ಘಟನೆ ನಡೆದಿತ್ತು. ವಾಂಖೆಡೆ ಕ್ರೀಡಾಂಗಣದಲ್ಲಿ ಅಮಿತ್ ಮಿಶ್ರಾ ಅವರ ಬೌಲಿಂಗ್ ನಲ್ಲಿ ಸಚಿನ್ ರನ್ನು ಔಟ್ ಎಂದು ತೀರ್ಪು ನೀಡಲಾಗಿತ್ತು. ಆದರೆ ನೋಬಾಲ್ ಪರಿಶೀಲನೆ ವೇಳೆ ಸಚಿನ್ ನಾನ್ ಸ್ಟ್ರೈಕ್ ನಲ್ಲಿದ್ದ ವಿಡಿಯೋ ಪರಿಶೀಲನೆ ನಡೆಸಿ ಔಟ್ ಎಂದು ತೀರ್ಪು ನೀಡಲಾಗಿತ್ತು. ಈ ಎಡವಟ್ಟಿಗೆ ಸ್ಪಷ್ಟನೆ ನೀಡಿದ್ದ ಐಪಿಎಲ್ ಆಡಳಿತ ಮಾನವ ಸಹಜ ತಪ್ಪಿನಿಂದಾಗಿ ತೀರ್ಪು ಪ್ರಕಟವಾಗಿದೆ. ತಾಂತ್ರಿಕ ಸಮಸ್ಯೆಯಿಂದಲೂ ನಡೆದಿರುವ ಸಾಧ್ಯತೆ ಇದೆ. ಅಂಪೈರ್ ಬಳಿಯಿದ್ದ ಕಂಪ್ಯೂಟರ್ ಪ್ಯಾಡ್ ಸಹ ಇದಕ್ಕೆ ಕಾರಣವಾಗಿರಬಹುದು ಎಂದು ತಿಳಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *