ಬೆಳಗಾವಿ(ಚಿಕ್ಕೋಡಿ): ನೆರೆಯ ಮಹಾರಾಷ್ಟ್ರಕ್ಕೆ ನೀರು ಹರಿಸುವ ಸಿಎಂ ಹೇಳಿಕೆಗೆ ಕೆಂಡಾಮಂಡಲವಾಗಿರುವ ಬಿಜೆಪಿ ಹಿರಿಯ ಶಾಸಕ ಉಮೇಶ ಕತ್ತಿ ಯಡಿಯೂರಪ್ಪ ವಿರುದ್ಧ ಕತ್ತಿ ಬೀಸಿದ್ದಾರೆ.
ಪಬ್ಲಿಕ್ ಟಿವಿ ಪ್ರತಿನಿಧಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ಸಿಎಂ ಹೇಳಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲು ಕೃಷ್ಣಾ ನದಿಯ ಬಿ ಸ್ಕೀಮ್, 740 ಟಿಎಂಸಿ ನೀರು ಬಳಕೆಗೆ ಯಡಿಯೂರಪ್ಪ ಯೋಚನೆ ಮಾಡಲಿ. ಮೊದಲು ನಮ್ಮ ರಾಜ್ಯಕ್ಕೆ ನೀರು ಬಳಕೆ ಮಾಡುವ ಬಗ್ಗೆ ವಿಚಾರ ಮಾಡಲಿ. ಅದರ ಬಗ್ಗೆ ಮಾತನಾಡುವುದು ಬಿಟ್ಟು ಮಹಾರಾಷ್ಟ್ರದ ಚುನಾವಣೆಯಲ್ಲಿ ಯಡಿಯೂರಪ್ಪ ಭಾಷಣೆ ಮಾಡುವುದು ಸರಿಯಲ್ಲ. ಮೊದಲು ಸಿಎಂ ಉತ್ತರ ಕರ್ನಾಟಕದ ನೀರಾವರಿ ಬಗ್ಗೆ ಯೋಚನೆ ಮಾಡಲಿ ಎಂದು ಕಿಡಿಕಾರಿದರು.
ಯಡಿಯೂರಪ್ಪನವರು ಮಹದಾಯಿ ಬಗ್ಗೆ ಮಾತನಾಡುತ್ತಿಲ್ಲ. ದಯವಿಟ್ಟು ಉತ್ತರ ಕರ್ನಾಟಕ ಹಾಳು ಮಾಡುವ ಯೋಚನೆ ಮಾಡಬೇಡಿ. ನಾನು ಮತ್ತೆ ಉತ್ತರ ಕರ್ನಾಟಕದ ಬಗ್ಗೆ ಧ್ವನಿ ಎತ್ತುತ್ತೇನೆ. ಬಿಎಸ್‍ವೈ ಉತ್ತರ ಕರ್ನಾಟಕದ ಬಗ್ಗೆ ಯೋಚನೆ ಮಾಡಬೇಕು. ಮಹದಾಯಿ, ಕೃಷ್ಣಾ ನದಿ ನೀರು ಬಳಕೆ ಬಗ್ಗೆ ಯೋಚಿಸಲಿ. ಈ ಬಗ್ಗೆ ಮೊದಲು ತೀರ್ಮಾನವಾಗಲಿ ಮುಂದೆ ಅವರು ಎಲ್ಲಿ ಬೇಕಿದ್ದಲ್ಲಿ ನೀರು ಹರಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ರಾಜ್ಯಕ್ಕೆ ಅನ್ಯಾಯ ಆದರೆ ನಾನು ಯಾವುದೇ ರಾಜಕೀಯ ಹೋರಾಟಕ್ಕೂ ಸಿದ್ಧ ಎಂದರು. ನೆರೆಯ ಮಹಾರಾಷ್ಟ್ರಕ್ಕೆ ನೀರು ಹರಿಸುವ ಮೊದಲು ನಮ್ಮಲ್ಲಿನ ನೀರಿನ ಸಮಸ್ಯ ಬಗೆಹರಿಸಿ ಎಂದು ಕೆಂಡಾಮಂಡಲರಾದರು.