ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರ

Public TV
2 Min Read

ಬೆಂಗಳೂರು: ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಸ್ಪೀಕರ್ ರಮೇಶ್ ಕುಮಾರ್ ಅಂಗೀಕರಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಚಿಂಚೋಳ್ಳಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಉಮೇಶ್ ಜಾಧವ್ ಅಯ್ಕೆಯಾಗಿದ್ದರು. ಮಾರ್ಚ್ 4ರಂದು ಸ್ಪೀಕರ್ ನಿವಾಸಕ್ಕೆ ತೆರಳಿದ್ದ ಉಮೇಶ್ ಜಧವ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು.

ಭಾರತ ಸಂವಿಧಾನದ ಅನುಚ್ಛೇದ 190(3)ಬಿ ಯಲ್ಲಿ ಸಭಾಧ್ಯಕ್ಷರು ಇಂತಹ ಸಂದರ್ಭಗಳಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸಂವಿಧಾನದ ಅನುಚ್ಛೇದ 190(3)ಬಿ ಯ ಅಡಿಯಲ್ಲಿ ಸೂಚಿಸಿದ ಹಾಗೆ ಕ್ರಮವನ್ನು ಜರುಗಿಸಿದ ನಂತರ ಡಾ. ಉಮೇಶ್ ಜಿ. ಜಾಧವ್ ಅವರ ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆ ಸದಸ್ಯತ್ವಕ್ಕೆ ನೀಡಿರುವ ರಾಜೀನಾಮೆಯನ್ನು ನನ್ನ ಸ್ವಂತ ನ್ಯಾಯಿಕ ಪ್ರಜ್ಞೆಯ ಮೇರೆಗೆ ಅಂಗೀಕರಿಸಲಾಗಿದೆ ಎಂದು ರಮೇಶ್ ಕುಮಾರ್ ಧೃಡೀಕರಣ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ರಾಜೀನಾಮೆ ಅಂಗೀಕಾರಕ್ಕೂ ಮೊದಲೇ ಉಮೇಶ್ ಜಾಧವ್ ಅವರನ್ನು ಬಿಜೆಪಿ ಕಲಬುರಗಿ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿತ್ತು. ರಾಜೀನಾಮೆ ಸಲ್ಲಿಕೆ ಬಳಿಕ ಮಾತನಾಡಿದ್ದ ಉಮೇಶ್ ಜಾಧವ್, ಸ್ಪೀಕರ್ ಮೇಲೆ ನಂಬಿಕೆ ಹೊಂದಿದ್ದು, ಪಕ್ಷಾತೀತವಾಗಿ ಕೆಲಸ ಮಾಡುತ್ತಾರೆ. ಸಂವಿಧಾನಬದ್ಧವಾಗಿ ನನ್ನ ರಾಜೀನಾಮೆಯನ್ನು ಅಂಗೀಕರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಕಾಂಗ್ರೆಸ್ ಶಾಸಕಾಂಗದ ನಾಯಕರಾಗಿರುವ ಸಿದ್ದರಾಮಯ್ಯ, ವಿಪ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಉಮೇಶ್ ಜಾಧವ್ ಸೇರಿದಂತೆ ಇನ್ನುಳಿದ ಮೂವರು ಶಾಸಕರನ್ನು ಅನರ್ಹಗೊಳಿಸಬೇಕೆಂದು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ದೂರು ಸಲ್ಲಿಸಿದ್ದರು.

ಪಕ್ಷಾಂತರ ಕಾಯ್ದೆ ಏನು ಹೇಳುತ್ತೆ?
ಪಕ್ಷಾಂತರ ನಿಷೇಧ ಕಾಯ್ದೆಯಡಿ ಪಕ್ಷದ ಆದೇಶ ಉಲ್ಲಂಘಿಸಿದರೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಬಹುದು. ಆಗ ಸಹಜವಾಗಿಯೇ ಶಾಸಕರು ಅನರ್ಹರಾಗುತ್ತಾರೆ. ಅನರ್ಹ ಶಾಸಕರು ವಿಧಾನಸಭೆ ಅವಧಿ ಮುಗಿಯುವವರೆಗೆ ಬೇರೆ ಪಕ್ಷಕ್ಕೆ ಸೇರುವಂತಿಲ್ಲ. ಹಾಲಿ ವಿಧಾನಸಭೆ ಅವಧಿ ಮುಗಿಯುವವರೆಗೂ ಉಪ ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ. ಅನರ್ಹಗೊಂಡ ಶಾಸಕರು ಮಂತ್ರಿ ಸ್ಥಾನ ಸೇರಿದಂತೆ ಯಾವುದೇ ಸರ್ಕಾರಿ ಹುದ್ದೆಯನ್ನು ಹೊಂದುವಂತಿಲ್ಲ.

ಅನರ್ಹಗೊಂಡ ದಿನದಿಂದ ಅವರ ಶಾಸಕತ್ವ ಅವಧಿ ಯಾವಾಗ ಮುಗಿಯುತ್ತದಫ ಅಲ್ಲಿವರೆಗೆ ಹುದ್ದೆಗಳನ್ನ ಹೊಂದುವಂತಿಲ್ಲ. ಪಕ್ಷದ ಒಟ್ಟು ಶಾಸಕರಲ್ಲಿ 2/3ರಷ್ಟು ಶಾಸಕರು ಗುಂಪಾಗಿ ಪಕ್ಷಾಂತರ ಮಾಡಿದರಷ್ಟೇ ಅನರ್ಹತೆ ಅನ್ವಯಿಸಲ್ಲ. ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ವಿಧಾನಸಭೆ ಸ್ಪೀಕರ್ ಕೈಯಲ್ಲಿದ್ದು, ಅನರ್ಹತೆ ಪ್ರಶ್ನಿಸಿ ಸ್ಪೀಕರ್ ಅವರಿಗೂ ಮನವಿ, ಕಾನೂನು ಹೋರಾಟವನ್ನೂ ಮಾಡಬಹುದು.

Share This Article
Leave a Comment

Leave a Reply

Your email address will not be published. Required fields are marked *