ಮದುವಣಗಿತ್ತಿಯಂತೆ ಶೃಂಗಾರಗೊಂಡ ಶ್ರೀಕ್ಷೇತ್ರದಲ್ಲಿ ಗಮನಸೆಳೆಯುತ್ತಿದೆ `ಕೊಡೆ ಅಲಂಕಾರ’

Public TV
1 Min Read

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಆಗಮನಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಧರ್ಮಸ್ಥಳ ಮದುವಣಗಿತ್ತಿಯಂತೆ ಸಜ್ಜಾಗಿದೆ.

ಒಂದೆಡೆ ವಿದ್ಯುತ್ ದೀಪಗಳ ಅಲಂಕಾರ, ಮತ್ತೊಂದೆಡೆ ಬಣ್ಣದ ಕೊಡೆಗಳ ಆಕರ್ಷಕ ಚಿತ್ತಾರ ಕಣ್ಮನ ಸೆಳೆಯುತ್ತಿದೆ. ಇಷ್ಟಕ್ಕೂ ಈ ಅಲಂಕಾರಕ್ಕೆ ಪ್ರೇರಣೆಯಾಗಿದ್ದು ಮಾರಿಷಸ್ ದ್ವೀಪ ರಾಷ್ಟ್ರದ ಒಂದು ಬೀದಿಯಂತೆ.

ಹಿಂದೊಮ್ಮೆ ಧರ್ಮಸ್ಥಳದ ಧರ್ಮಾದಿಕಾರಿ ವೀರೇಂದ್ರ ಹೆಗ್ಗಡೆಯವರು ಮಾರಿಷಸ್ ದೇಶಕ್ಕೆ ಹೋಗಿದ್ದಾಗ ಅಂಬ್ರೆಲ್ಲಾ ಸ್ಟ್ರೀಟ್ ನೋಡಿ ಮಾರುಹೋಗಿದ್ದರು. ಇದೀಗ ಅದೇ ಮಾದರಿಯಲ್ಲಿ ಧರ್ಮಸ್ಥಳ ದೇವಸ್ಥಾನದ ಎದುರಲ್ಲಿ ಬಣ್ಣದ ಕೊಡೆಗಳಿಂದ ಅಲಂಕರಿಸಲಾಗಿದ್ದು, ಇದೀಗ ಭಾರೀ ಮೆಚ್ಚುಗೆ ಪಡೆದಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಕೂಡ ಈ ರೀತಿಯ ಅಲಂಕಾರ ಎಲ್ಲಿಯೂ ನೋಡಿಲ್ಲ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೇಗುಲ ದರ್ಶನದ ಬಳಿಕ ಪ್ರಧಾನಿ ಮೋದಿ ಬೆಳಗ್ಗೆ 11.45ರ ವೇಳೆಗೆ ಧರ್ಮಸ್ಥಳದಿಂದ 9 ಕಿಮೀ ದೂರವಿರುವ ಉಜಿರೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರಿಗೆ ರೂಪೇ ಕಾರ್ಡ್ ವಿತರಿಸಲಿದ್ದಾರೆ.

ನಂತರ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರನ್ನುದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. ಇದಕ್ಕಾಗಿ ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ಜರ್ಮನ್ ತಂತ್ರಜ್ಞಾನದಡಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಬಿಗಿ ಪೊಲೀಸ್ ಪಹರೆ ಇದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್. ಕೆ. ದತ್ತಾ ನಿನ್ನೆ ಭದ್ರತೆ ಪರಿಶೀಲಿಸಿದರು. ಜನಧನ್ ಯೋಜನೆಯಡಿ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು 12 ಲಕ್ಷಕ್ಕೂ ಹೆಚ್ಚು ಖಾತೆ ತೆರೆದಿದ್ದು ಪ್ರಧಾನಿಯವರ ಗಮನ ಸೆಳೆದಿತ್ತು.

Share This Article
Leave a Comment

Leave a Reply

Your email address will not be published. Required fields are marked *