JNU ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಜಾಮೀನು ಅರ್ಜಿ ವಜಾ

Public TV
1 Min Read

ನವದೆಹಲಿ: ಜೆಎನ್‍ಯು ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ಕರ್ಡೂಮಾ ಹೆಚ್ಚುವರಿ ಸೆಷನ್ಸ್ ನ್ಯಾಯಲಯ ತಿರಸ್ಕರಿಸಿದೆ. ಎಂಟು ತಿಂಗಳ ಸುದೀರ್ಘ ವಿಚಾರಣೆ ಬಳಿಕ ಇಂದು ನ್ಯಾ.ಅಮಿತಾಭ್ ರಾವತ್ ತೀರ್ಪು ಪ್ರಕಟಿಸಿದ್ದಾರೆ.

2020ರ ಫೆಬ್ರವರಿ 20 ರಂದು ದೆಹಲಿಯಲ್ಲಿ ನಡೆದ ಕೋಮು ಗಲಭೆ ಪ್ರಕರಣದಲ್ಲಿ ಉಮರ್ ಖಾಲಿದ್‍ನನ್ನು ಬಂಧಿಸಲಾಗಿದ್ದು ಪ್ರಕರಣದಲ್ಲಿ ಒಳಸಂಚು ಮಾಡಿರುವುದಾಗಿ ಆರೋಪಿಸಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಪ್ರಕರಣ ದಾಖಲಿಸಲಾಗಿತ್ತು. ಬಂಧನ ಬಳಿಕ ಖಾಲಿದ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ:  ರುಬೆಲ್ ಮೂಲಕ ಖರೀದಿಸಿದರಷ್ಟೇ ತೈಲ: ವಿರೋಧಿಗಳಿಗೆ ಶಾಕ್ ಕೊಟ್ಟ ಪುಟಿನ್

ಖಾಲಿದ್ ಪರ ವಾದ ಮಂಡಿಸಿದ್ದ ವಕೀಲ ತ್ರಿದೀಪ್ ಪೈಸ್, ಇದೊಂದು ಉದ್ದೇಶಪೂರ್ವಕವಾಗಿ ದಾಖಲಿಸಿದ ಪ್ರಕರಣವಾಗಿದೆ. ಪೊಲೀಸರು ಕಟ್ಟುಕಥೆಯೊಂದನ್ನು ಕಟ್ಟಿದ್ದಾರೆ. ಖಾಲಿದ್ ವಿರುದ್ಧದ ಸಾಕ್ಷಿ ಹೇಳಿಕೆಗಳು ಅಸಮಂಜಸವಾಗಿದೆ ಮತ್ತು ಆರೋಪಪಟ್ಟಿ ದೂರದರ್ಶನ ಧಾರಾವಾಹಿ ಸ್ಕ್ರಿಪ್ಟ್ ಅನ್ನು ಹೋಲುತ್ತದೆ ಎಂದು ವಾದಿಸಿದರು. ಇದನ್ನೂ ಓದಿ: ರಷ್ಯಾ ಯುದ್ಧವನ್ನು 2ನೇ ಮಹಾಯುದ್ಧಕ್ಕೆ ಹೋಲಿಸಿದ ಝೆಲೆನ್ಸ್ಕಿ

ಇದಕ್ಕೆ ಪ್ರತಿವಾದ ಮಂಡಿಸಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್, ದೆಹಲಿ ಗಲಭೆಯು ಆರೋಪಿಗಳು ರೂಪಿಸಿದ ಪೂರ್ವಯೋಜಿತ ಆಳವಾದ ಸಂಚಿನ ಭಾಗವಾಗಿದೆ. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಯನ್ನು ಪ್ರಸ್ತಾಪಿಸಿದ ಪ್ರಾಸಿಕ್ಯೂಟರ್, ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ಗುರಿಯಾಗುವ ವಾತಾವರಣವನ್ನು ಸೃಷ್ಟಿಸಲು ಖಾಲಿದ್ ಪ್ರಯತ್ನಿಸಿದರು ಎಂದು ವಾದಿಸಿದರು.

ದೆಹಲಿ ಪೊಲೀಸರು ಈ ಪ್ರಕರಣದಲ್ಲಿ 2020ರ ಸೆಪ್ಟೆಂಬರ್ 13 ರಂದು ಖಾಲಿದ್‍ನನ್ನು ಬಂಧಿಸಿದ್ದರು. ನವೆಂಬರ್ 22 ರಂದು ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ಖಾಲಿದ್ ಜುಲೈ 2021 ರಲ್ಲಿ ಜಾಮೀನು ಅರ್ಜಿ ಸಲ್ಲಿಸಿದರು ಮತ್ತು ಹಲವಾರು ವಿಚಾರಣೆಗಳ ನಂತರ, ನ್ಯಾಯಾಲಯವು ಈ ತಿಂಗಳ ಆರಂಭದಲ್ಲಿ ತನ್ನ ಆದೇಶವನ್ನು ಕಾಯ್ದಿರಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *