ರಷ್ಯಾದ ವಾಯುನೆಲೆಗಳ ಮೇಲೆ ಉಕ್ರೇನ್‌ ಡ್ರೋನ್‌ ದಾಳಿ – 40 ವಿಮಾನಗಳು ಧ್ವಂಸ

Public TV
1 Min Read

ಮಾಸ್ಕೋ: ರಷ್ಯಾದ (Russia) ವಾಯುನೆಲೆಗಳ ಮೇಲೆ ಉಕ್ರೇನ್ (Ukraine) ಅತಿದೊಡ್ಡ ಡ್ರೋನ್ ದಾಳಿ ನಡೆಸಿದೆ. ಪೂರ್ವ ಸೈಬೀರಿಯಾದ ರಷ್ಯಾದ ವಾಯು ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ಉಕ್ರೇನ್‌ ದಾಳಿಯನ್ನು ಇರ್ಕುಟ್ಸ್ಕ್ ಪ್ರದೇಶದ ರಷ್ಯಾದ ಗವರ್ನರ್ ದೃಢಪಡಿಸಿದ್ದಾರೆ.

ಒಲೆನ್ಯಾ ಮತ್ತು ಬೆಲಾಯಾದಲ್ಲಿನ ವಾಯುನೆಲೆಗಳು ಸೇರಿದಂತೆ ರಷ್ಯಾದ ಮಿಲಿಟರಿ ವಾಯುನೆಲೆಗಳ ಮೇಲೆ ಏಕಕಾಲದಲ್ಲಿ ಈ ದಾಳಿ ನಡೆದಿದೆ. ದಾಳಿಯಲ್ಲಿ ವಾಯುನೆಲೆಯಲ್ಲಿದ್ದ 40 ಕ್ಕೂ ಹೆಚ್ಚು ರಷ್ಯಾದ ವಿಮಾನಗಳನ್ನು ಧ್ವಂಸ ಮಾಡಲಾಗಿದೆ ಎಂದು ಉಕ್ರೇನಿಯನ್ ಮಾಧ್ಯಮಗಳು ವರದಿ ಮಾಡಿವೆ. ದಾಳಿಯಲ್ಲಿ ನಾಶವಾದ ವಿಮಾನಗಳಲ್ಲಿ Tu-95 ಮತ್ತು Tu-22M3 ಬಾಂಬರ್‌ಗಳು ಮತ್ತು ಕನಿಷ್ಠ ಒಂದು A-50 ಸೇರಿವೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.

ಶಸ್ತ್ರಾಸ್ತ್ರಗಳ ಕೊರತೆ ಎದುರಿಸುತ್ತಿರುವ ಉಕ್ರೇನ್‌ ರಷ್ಯಾದ ಮೇಲೆ ದಾಳಿ ನಡೆಸಲು ಡ್ರೋನ್‌ಗಳ ಪಡೆಯನ್ನು ಸಜ್ಜು ಮಾಡಿದೆ. ಹಿಂದೆಯೂ ರಷ್ಯಾದ ಮಿಲಿಟರಿ ಮತ್ತು ತೈಲ ಘಟಕಗಳ ಮೇಳೆ ದಾಳಿ ಮಾಡಲು ಉಕ್ರೇನ್‌ ಡ್ರೋನ್‌ಗಳನ್ನು ಬಳಸಿಕೊಂಡಿತ್ತು.

ರಷ್ಯಾ ಸೋಮವಾರ ಇಸ್ತಾನ್‌ಬುಲ್‌ನಲ್ಲಿ ಮಾತುಕತೆಯ ಬಗ್ಗೆ ಪ್ರಸ್ತಾಪಿಸಿತ್ತು. ಈ ಪ್ರಸ್ತಾಪವನ್ನು ಉಕ್ರೇನ್ ಅಂಗೀಕರಿಸಿತ್ತು. ಈ ಬಗ್ಗೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ತಮ್ಮ ಸಚಿವ ರುಸ್ಟೆಮ್ ಉಮೆರೊವ್ ನೇತೃತ್ವದ ನಿಯೋಗ ರಷ್ಯಾದೊಂದಿಗೆ ಮಾತುಕತೆಗಾಗಿ ಇಸ್ತಾನ್‌ಬುಲ್‌ಗೆ ಬರಲಿದೆ ಎಂದು ಹೇಳಿದ್ದರು. ಇದೆಲ್ಲ ಬೆಳವಣಿಗೆಗಳ ನಡುವೆ ಉಕ್ರೇನ್‌ ರಷ್ಯಾ ಮೇಲೆ ದಾಳಿ ನಡೆಸಿದೆ.

Share This Article