UK Elections 2024: ಕ್ಷಮೆ ಕೇಳಿ ಸೋಲಿನ ಹೊಣೆ ಹೊತ್ತುಕೊಂಡ ರಿಷಿ ಸುನಾಕ್‌

Public TV
2 Min Read

ಲಂಡನ್‌: ಬ್ರಿಟನ್‌ ಸಂಸತ್‌ ಚುನಾವಣೆಯಲ್ಲಿ (UK Elections 2024) ಕನ್ಸರ್ವೇಟಿವ್‌ ಪಕ್ಷಕ್ಕೆ (Conservative Party) ಹೀನಾಯ ಸೋಲಾದ ಬೆನ್ನಲ್ಲೇ ಪ್ರಧಾನಿ ರಿಷಿ ಸುನಾಕ್‌ (Rishi Sunak) ಕ್ಷಮೆ ಕೇಳಿದ್ದಾರೆ.

ಸಾರ್ವತ್ರಿಕ ಚುನಾವಣೆಯಲ್ಲಿ ಕೀರ್ ಸ್ಟಾರ್ಮರ್ (Keir Starmer) ನೇತೃತ್ವದ ಲೇಬರ್ ಪಕ್ಷವು (Labour Party) ಒಟ್ಟು 650 ಸ್ಥಾನಗಳಲ್ಲಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದ ನಂತರ ಕ್ಷಮೆಯಾಚಿಸಿದ ರಿಷಿ ಸುನಕ್ ಸೋಲನ್ನು ಒಪ್ಪಿಕೊಂಡರು. ಪಕ್ಷದ ಸೋಲಿಗೆ ಕ್ಷಮೆ ಕೇಳಿದ ಅವರು ಈ ಸೋಲಿನ ಸಂಪೂರ್ಣ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತೇನೆ ಎಂದು ಹೇಳಿದರು.

ಲೇಬರ್ ಪಕ್ಷವು ಈ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದೆ ಮತ್ತು ಅವರ ವಿಜಯಕ್ಕಾಗಿ ಅಭಿನಂದಿಸಲು ನಾನು ಸರ್ ಕೀರ್ ಸ್ಟಾರ್ಮರ್ ಅವರನ್ನು ಕರೆದಿದ್ದೇನೆ ಎಂದರು. ಕನ್ಸರ್ವೇಟಿವ್‌ ಪಕ್ಷ ಸೋತರೂ ರಿಚ್ಮಂಡ್ ನಾರ್ತಲರ್ಟನ್ (Richmond Northallerton) ಕ್ಷೇತ್ರದಿಂದ ರಿಷಿ ಸುನಕ್‌ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಸಿಎಂ ಸರ್ಕಾರಕ್ಕೆ ಸೈಟ್ ವಾಪಸ್ ಕೊಡದಿದ್ದರೆ‌ ಭ್ರಷ್ಟಾಚಾರ ಚಿರಸ್ಥಾಯಿಯಾಗಿ ಉಳಿಯುತ್ತೆ: ಹೆಚ್. ವಿಶ್ವನಾಥ್

ಲೇಬರ್‌ ಪಾರ್ಟಿ ಗೆದ್ದ ಬಳಿಕ ಭಾಷಣ ಮಾಡಿದ ಪ್ರಧಾನಿ ಅಭ್ಯರ್ಥಿ ಕೀರ್ ಸ್ಟಾರ್ಮರ್, ಅವ್ಯವಸ್ಥೆಯನ್ನು ಕೊನೆಗೊಳಿಸುತ್ತೇವೆ ಎಂದು ನಾವು ಭರವಸೆ ನೀಡಿದ್ದೇವೆ ಮತ್ತು ಅದನ್ನೇ ನಾವು ಮಾಡುತ್ತೇವೆ. ಇನ್ನು ಮುಂದೆ ಬದಲಾವಣೆ ಪ್ರಾರಂಭವಾಗಲಿದೆ. ನಮ್ಮ ದೇಶವನ್ನು ಮತ್ತೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.


ಸಂಸತ್ತಿನ 650 ಸ್ಥಾನಗಳಿಗೆ ಗುರುವಾರ ಮತಪತ್ರಗಳ ಮೂಲಕ ಚುನಾವಣೆ ನಡೆದಿದ್ದು ಇಂದು ಮತ ಎಣಿಕೆ ನಡೆಯುತ್ತಿದೆ. ಚುನಾವಣಾ ಸಮೀಕ್ಷೆಗಳು 13 ವರ್ಷಗಳಿಂದ ಅಧಿಕಾರದಲ್ಲಿರುವ ಕನ್ಸರ್ವೇಟಿವ್‌ ಪಕ್ಷಕ್ಕೆ ಹೀನಾಯ ಸೋಲಾಗಬಹುದು ಎಂದು ಭವಿಷ್ಯ ನುಡಿದಿದ್ದವು.

650 ಸದಸ್ಯರ ಹೌಸ್ ಆಫ್ ಕಾಮನ್ಸ್‌ನಲ್ಲಿ ಬಹುಮತಕ್ಕೆ 326 ಸ್ಥಾನಗಳನ್ನು ಗೆಲ್ಲುವ ಅಗತ್ಯವಿದೆ. ಚುನಾವಣೋತ್ತರ ಸಮೀಕ್ಷೆಗಳು ಲೇಬರ್‌ ಪಕ್ಷ 410 ಸ್ಥಾನಗಳನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದಿದ್ದವು. ಇನ್ನೂ ಆರು ತಿಂಗಳು ಅಧಿಕಾರವಧಿ ಇದ್ದರೂ ಅವಧಿಪೂರ್ವ ಚುನಾವಣೆಗೆ ಹೋಗುವ ಮೂಲಕ ರಿಷಿ ಸುನಕ್ ಅಚ್ಚರಿ ನಿರ್ಧಾರ ಕೈಗೊಂಡಿದ್ದರು.

 

Share This Article