Special- ಯುಐ ಗ್ಲೋಬಲ್ ಸಿನಿಮಾ : ಏನಿದೆ ಅದರಲ್ಲಿ ವಿಶೇಷ?

Public TV
2 Min Read

ಕನ್ನಡದ ಮತ್ತೊಂದು ಸಿನಿಮಾ ವಿಶ್ವ ಪರ್ಯಟನೆಗೆ ಸಜ್ಜಾಗಿದೆ. ಕನ್ನಡದ ಮತ್ತೊಂದು ಸಿನಿಮಾ ಸಿನಿ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಲಿದೆ. ಅದು ಬೇರಾವುದೂ ಅಲ್ಲ. ಒನ್ ಆನ್ ಓನ್ಲಿ ಉಪ್ಪಿ ನಿರ್ದೇಶನ ಮಾಡಿ, ನಟಿಸುತ್ತಿರುವ ಯುಐ (UI). ಯಾವಾಗ ಜನರು ಟೈಟಲ್ ಕೇಳಿದರೋ ತಲೆ ಕೆಡಿಸಿಕೊಂಡರು. ಅದಕ್ಕೆ ಉಪ್ಪಿ (Upendra) ಉತ್ತರ ಕೊಡುತ್ತಾರೆ. ಆದರೆ ಅದು ಸಿನಿಮಾ ಬಿಡುಗಡೆಯಾದ ಮೇಲೆ. ಹಾಗಿದ್ದರೆ ಏನು ನಡೆಯುತ್ತಿದೆ ಯುಐ ಅಡ್ಡದಲ್ಲಿ? ಏನು ಸ್ಪೆಶಾಲಿಟಿ ಹೊಂದಿದೆ ಈ ಸಿನಿಮಾ? ಇದನ್ನು ಗ್ಲೋಬಲ್ ಸಿನಿಮಾ ಎಂದಿದ್ದೇಕೆ ರಿಯಲ್‌ಸ್ಟಾರ್? ಆ ಕಥನ ನಿಮ್ಮ ಮುಂದೆ.

ಉಪ್ಪಿಇದೊಂದು ಹೆಸರು ಕನ್ನಡಿಗರಿಗೆ ಮಾತ್ರ ಅಲ್ಲ, ದಕ್ಷಿಣ ಭಾರತದ ಜನರಲ್ಲಿ ಕಿಚ್ಚು ಮೂಡಿಸುತ್ತದೆ. ಹುಚ್ಚು ಹಿಡಿಸುತ್ತದೆ. ಅದರಲ್ಲೂ ಇವರೇ ನಿರ್ದೇಶಕ ಅದರಂತೂ ಕೇಳಬೇಕೆ? ಇಲ್ಲಿವರೆಗೆ ಉಪ್ಪಿ ನಿರ್ದೇಶನ ಮಾಡಿದ ಸಿನಿಮಾಗಳದ್ದು ಒಂದು ತೂಕವಾದರೆ, ಈ ಯುಐ ಇದೆಯಲ್ಲ ಅದು ಭೂಮಿ ತೂಕ. ಭರ್ತಿ ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಹಲವಾರು ಗ್ರೇಟ್ ಸ್ಪೆಶಾಲಿಟಿಗಳಿವೆ. ಭಾರತದಲ್ಲೇ ಮೊದಲ ಬಾರಿ ಎನ್ನುವಂಥ ವಿಷಯ ಹಾಗೂ ತಾಂತ್ರಿಕ ಕೆಲಸಗಳಿವೆ. ಅದಕ್ಕಾಗಿಯೇ ಬೆಂಗಳೂರು ಸಮೀಪ ಹತ್ತು ಎಕರೆ ಜಾಗದಲ್ಲಿ ಹಿಂದೆಂದೂ ಕಾಣದಂಥ ಸೆಟ್ ಹಾಕಲಾಗಿದೆ. ಇದನ್ನೂ ಓದಿ:ನಟ ಚಿರಂಜೀವಿ ಸರ್ಜಾ 3 ನೇ ವರ್ಷದ ಪುಣ್ಯತಿಥಿ

ಉಪ್ಪಿ ನಿರ್ದೇಶನ ಅಂದರೆ ಅಲ್ಲಿ ಗ್ರಾಫಿಕ್ಸ್ ಗೆ ಕೆಲಸ ಅಷ್ಟೇನೂ ಇರುತ್ತಿರಲಿಲ್ಲ. ಆದರೆ ಈ ಬಾರಿ ಉಪ್ಪಿ ಹಳೇ ಸ್ಟೈಲ್ ಮರೆತು ಅತ್ಯದ್ಭುತ ನಯಾ ತಂತ್ರಜ್ಞಾನಕ್ಕೆ ಕೈ ಹಾಕಿದ್ದಾರೆ. ಕಂಪ್ಯೂಟರೈಸ್ಡ್ ಕ್ಯಾಮೆರಾ ಬಳಸುತ್ತಿದ್ದಾರೆ. ಮೊಕೊ ಬೋಟ್ ಹೆಸರಿನ ಈ ಕ್ಯಾಮೆರಾದಲ್ಲಿ ಇಲ್ಲಿವರೆಗೆ ಭಾರತದ ಯಾವುದೇ ಸಿನಿಮಾ ಚಿತ್ರೀಕರಣ ಮಾಡಿಲ್ಲ. ಅದರ ಜೊತೆಗೆ ವರ್ಚುವಲ್ ಗ್ರಾಫಿಕ್ಸ್ ಕೂಡ ಕೆಲಸ ಮಾಡಲಿದೆ. ಕೆಲವೊಂದು ತಾಂತ್ರಿಕ ವಿಷಯ ಈಗ ಅರ್ಥವಾಗುವುದಿಲ್ಲ. ಅದನ್ನು ಸಿನಿಮಾ ನೋಡಿದ ಮೇಲೆಯೇ ಅನುಭವಿಸಬೇಕು. ಈ ಹೊಸ ತಂತ್ರಜ್ಞಾನಕ್ಕೆ ನಿರ್ಮಾಪಕರಲ್ಲಿ ಒಬ್ಬರಾದ ನವೀನ್ ಮನೋಹರ್ ನಾಯ್ಡು ಬರೀ ಹೆಗಲು ಕೊಟ್ಟಿಲ್ಲ ಜೀವವನ್ನೇ ತೇಯುತ್ತಿದ್ದಾರೆ. ಉಪ್ಪಿ ಇದಕ್ಕೆ ಹೆಮ್ಮೆ ಪಡುತ್ತಾರೆ.

`ಇದೊಂದು ಗ್ಲೋಬಲ್ ಸಿನಿಮಾ’ ಎನ್ನುತ್ತಾರೆ ಉಪ್ಪಿ. ಯಾರೇ ನೋಡಿದರೂ ಇದನ್ನು ಒಪ್ಪಿಕೊಳ್ಳಬೇಕು. ಹಾಗಿರುತ್ತದೆ ಕತೆ ಹಾಗೂ ಮೇಕಿಂಗ್ ಎನ್ನುವುದು ಇವರ ಷರಾ. ಇದುವರೆಗೆ ಮನಸಿಗೆ ಸಂಬಂಧಿಸಿದ ವಿಷಯ ಹೆಣೆಯುತ್ತಿದ್ದ ಉಪ್ಪಿ ಈ ಬಾರಿಯೂ ಹಾಗೆಯೇ ಮಾಡಿರುತ್ತಾರೆ. ಆದರೆ ವಿಷಯ ಮಾತ್ರ ಇಡೀ ವಿಶ್ವಕ್ಕೆ ಮೆಚ್ಚುಗೆಯಾಗುತ್ತದೆ ಎನ್ನುವುದು ಇವರ ನಂಬಿಕೆ. ಇದರ ಜೊತೆಗೆ ಅಪ್‌ಡೇಟ್ ತಂತ್ರಜ್ಞಾನವನ್ನು ದಿಕ್ಕೆಡಿಸುವಂತೆ ಬಳಸಿಕೊಳ್ಳಲಿದ್ದಾರೆ. ಅದಕ್ಕಾಗಿಯೇ ಹಗಲು ರಾತ್ರಿ ಬೆವರು ಸುರಿಸುತ್ತಿದ್ದಾರೆ. ಇನ್ನೇನು ಮುಕ್ತಾಯ ಹಂತಕ್ಕೆ ಬಂದಿದೆ. ಬಿಡುಗಡೆ ಬಗ್ಗೆ ಸದ್ಯಕ್ಕೆ ಮಾತಾಡೋದು ಬೇಡ.

ಅದ್ಭುತ ತಂಡವನ್ನು ಕಟ್ಟಿಕೊಂಡು ಉಪ್ಪಿ ಹೊಸ ಯುದ್ಧಕ್ಕೆ ಸಜ್ಜಾಗಿದ್ದಾರೆ. ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಅದಕ್ಕೇ ಇದನ್ನು ಮಾಡುತ್ತಿದ್ಧಾರೆ ಎಂದು ತಿಳಿಯಬೇಡಿ. ಈಗ ಆಗಬೇಕಿತ್ತು. ಆಗುತ್ತಿದೆ ಅಷ್ಟೇ. ಇದಕ್ಕೆ ಲಹರಿ ಆಡಿಯೋ ಸಂಸ್ಥೆ ಮಾಲೀಕರ ಮಗ ಮನೋಹರ್ ನಾಯ್ಡು ಮಕ್ಕಳಾದ ಚಂದ್ರು, ನವೀನ್ ಹಾಗೂ ಸಲಗ ಕೆ.ಪಿ.ಶ್ರೀಕಾಂತ್ ಬಂಡವಾಳ ಹಾಕಿದ್ದಾರೆ. ಎಲ್ಲರೂ ಒಂದೊಂದೆ ಕೆಲಸವನ್ನು ಹಂಚಿಕೊಂಡಿದ್ದಾರೆ.

Share This Article