ಅಧ್ಯಾಯ 2 ಇಲ್ಲಿಂದ ಶುರು – ಯುಗಾದಿಯಂದೇ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ರಿಷಬ್‌

2 Min Read

ಕಾಂತಾರ ಚಾಪ್ಟರ್‌ 1(Kantara: A Legend – Chapter 1) ಯಶಸ್ವಿನ ಸಂಭ್ರಮದಲ್ಲಿರುವ ನಟ, ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ಅವರು ಅಭಿಮಾನಿಗಳ ತಲೆಗೆ ಮತ್ತೊಂದು ಹುಳ ಬಿಟ್ಟಿದ್ದಾರೆ.

ಯುಗಾದಿಯ (Ugadi) ಶುಭಾಶಯ ತಿಳಿಸಿದ ಅವರು ಅಧ್ಯಾಯ 2 ಇಲ್ಲಿಂದ ಶುರು ಎಂದು ಬರೆದಿರುವ ಬೋರ್ಡ್‌ನ ಫೋಟೋವನ್ನು ಹಂಚಿಕೊಂಡಿದ್ದಾರೆ.

ಬಿಳಿ ಬಣ್ಣದ ಬೋರ್ಡ್‌ನಲ್ಲಿ ಓಂ ಎಂದು ಆರಂಭದಲ್ಲಿ ಬರೆಯಲಾಗಿದೆ. ನಂತರ ಮಧ್ಯಭಾಗದಲ್ಲಿ ʻಅಧ್ಯಾಯ 2 ಇಲ್ಲಿಂದ ಶುರುʼ ಎಂದು ಬರೆದು ಕೊನೆಗೆ ಹ್ಯಾಪಿ ಯುಗಾದಿ.. ಯುಗಾದಿ ಹಬ್ಬದ ಶುಭಾಶಯಗಳು ಎಂದು ಬರೆದಿದ್ದಾರೆ.

ಅಪ್ಲೋಡ್‌ ಮಾಡಿದ ಫೋಟೋವನ್ನು ಪತ್ನಿ ಪ್ರಗತಿ ಶೆಟ್ಟಿ, ಸು ಫ್ರಂ ಸೋ ಸಿನಿಮಾದ ರವಿಯಣ್ಣ ಪಾತ್ರದ ಮೂಲಕವೇ ಪ್ರಸಿದ್ಧರಾಗಿರುವ ನಟ, ಕಾಂತರ ಬರಹಗಾರ ಶಾನೀಲ್‌ ಗೌತಮ್‌, ಛಾಯಾಗ್ರಾಹಕ ಅರವಿಂದ್‌ ಕಶ್ಯಪ್‌ ಅವರಿಗೆ ಟ್ಯಾಗ್‌ ಮಾಡಿದ್ದು ಅವರು ಅಧ್ಯಾಯ 2 ರಲ್ಲಿ ಇರುವುದು ದೃಢಪಟ್ಟಿದೆ.

ಈ ಪೋಸ್ಟ್‌ ಅಪ್ಲೋಡ್‌ ಮಾಡಿದ ಬೆನ್ನಲ್ಲೇ ಅಭಿಮಾನಿಗಳು ಕಾಂತಾರ ಚಾಪ್ಟರ್‌ 2 (Kantara Chapter 2) ಬರುತ್ತಾ ಎಂದು ಪ್ರಶ್ನಿಸುತ್ತಿದ್ದಾರೆ. ಅಥವಾ ಅಧ್ಯಾಯ 2 ಹೆಸರಿನಲ್ಲೇ ಬೇರೆ ಸಿನಿಮಾ ಬರುತ್ತಾ ಎಂದು ಕೇಳುತ್ತಿದ್ದಾರೆ.

ಕಾಂತಾರ ಚಾಪ್ಟರ್‌ 2 ಬಗ್ಗೆ ಇಲ್ಲಿಯವರೆಗೆ ರಿಷಬ್‌ ಶೆಟ್ಟಿ ಅಧಿಕೃತವಾಗಿ ಎಲ್ಲಿಯೂ ಏನು ಹೇಳಿಲ್ಲ. ಈ ಹಿಂದೆ ‘ಜೀ ಕುಟುಂಬ ಅವಾರ್ಡ್ಸ್’ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಕಾಂತಾರ ಚಾಪ್ಟರ್‌ 2 ಯಾವಾಗ ಬರುತ್ತೆ ಎಂದು ನಿರೂಪಕರು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ನೆಕ್ಸ್ಟ್​ ʻರೆಸ್ಟ್’ ಎಂದು ರಿಷಬ್‌ ಉತ್ತರ ನೀಡಿದ್ದರು.

ಮೊದಲ ಕಾಂತಾರ ಸಿನಿಮಾ 2022 ರಲ್ಲಿ ಬಿಡುಗಡೆಯಾಗಿ ಬಾಕ್ಸ್‌ ಆಫೀಸ್‌ನಲ್ಲಿ 400 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್‌ ಮಾಡಿತ್ತು. 2025 ರಲ್ಲಿ ಬಿಡುಗಡೆಯಾದ ಕಾಂತಾರ ಚಾಪ್ಟರ್‌ 1 ವಿಶ್ವಾದ್ಯಂತ 800 ಕೋಟಿ ರೂ. ಹೆಚ್ಚು ಕಲೆಕ್ಷನ್‌ ಮಾಡಿತ್ತು. ಇದನ್ನೂ ಓದಿ: `ಸರ್ಸೆ ಸೆರಗ ಸರ್ಸೆ’ ಹಿಂದಿ ಹಾಡು ವಿವಾದ – ನಟಿ ನೋರಾ ಫತೇಹಿ ವಿರುದ್ಧ ಫತ್ವಾ

ಕಾಂತಾರ ಚಾಪ್ಟರ್‌ – 1 ಕ್ಲೈಮ್ಯಾಕ್ಸ್‌ನಲ್ಲಿ ಕಾಂತಾರ ಸೀಕ್ವೆಲ್‌ ಬಗ್ಗೆ ಸುಳಿವು ನೀಡುವ ಅಂಶವಿತ್ತು. ಕೊನೆಯ ದೃಶ್ಯದಲ್ಲಿ ಹಳ್ಳಿಯ ಹಿರಿಯನೊಬ್ಬ ಬಾಲಕನಿಗೆ ಬೆರ್ಮೆಯ ಕಥೆಯನ್ನು ಹೇಳುತ್ತಾನೆ. ಕೊನೆಗೆ ಬಾಲಕ ಬಾವಿಗೆ ಬಿದ್ದ ಬೆರ್ಮೆ ಏನಾದ ಎಂಬ ಪ್ರಶ್ನೆಗೆ ಅದು ಇನ್ನೊಂದು ಕಥೆ ಎಂದು ಹೇಳುವುದರೊಂದಿಗೆ ಸಿನಿಮಾ ಮುಕ್ತಾಯವಾಗಿತ್ತು. ಈ ಕಾರಣಕ್ಕೆ ಅಂದಿನಿಂದಲೇ ಚಾಪ್ಟರ್-2‌ ಬರುತ್ತಾ ಎಂಬ ಪ್ರಶ್ನೆ ಎದ್ದಿತ್ತು.
Share This Article