ಪ್ರಕೃತಿಯ ರಮ್ಯಚೈತ್ರ ಕಾಲವೇ ‘ಯುಗಾದಿ’

Public TV
2 Min Read

ಹೊಸ ಯುಗದ ಆರಂಭ.. ವಸಂತ ಋತುವಿನ ಚೈತ್ರಮಾಸದ ಮೊದಲ ದಿನವೇ ಯುಗಾದಿ (Ugadi). ಪ್ರಕೃತಿಗೂ ಯುಗಾದಿಗೂ ಒಂದು ಅಪೂರ್ವ ನಂಟಿದೆ. ಗಿಡ-ಮರಗಳಲ್ಲಿ ಹಸಿರ ಚಿಗುರು ಪ್ರಕೃತಿಗೆ ಜೀವಕಳೆ ಬರುವ ಕಾಲ. ನವಚೈತನ್ಯ ತುರುವ ಸಂದರ್ಭ. ಪ್ರಕೃತಿಯ ರಮ್ಯಚೈತ್ರ ಕಾಲವೇ ಯುಗಾದಿ.

ಈ ಜಗತ್ತು ಕಾಲಚಕ್ರದ ಪ್ರತೀಕ. ಕಾಲಚಕ್ರ ಉರುಳಿದಂತೆ ಜಗತ್ತಿನಲ್ಲಿ ಬದಲಾವಣೆ ಆಗುತ್ತಿರುತ್ತದೆ. ಬದಲಾವಣೆ ಜಗದ ನಿಯಮ ಎಂಬ ಮಾತಿನಂತೆ. ಪ್ರಕೃತಿಯ ಮಡಿಲಿನಲ್ಲಿ ಬೀಜ ಮೊಳಕೆ ಒಡೆಯುತ್ತದೆ. ಗಿಡವಾಗುತ್ತದೆ. ಗಿಡ ಮರವಾಗಿ ಬೆಳೆಯುತ್ತದೆ. ಮರದಲ್ಲಿ ಹೂವು ಬಿಡುತ್ತದೆ. ಹೂವು ಕಾಯಾಗಿ, ಕಾಯಿ ಹಣ್ಣಾಗುತ್ತದೆ. ಹಣ್ಣಿನ ಬೀಜ ಮತ್ತೊಂದು ಗಿಡದ ಹುಟ್ಟಿಗೆ ಕಾರಣವಾಗುತ್ತದೆ. ಇದನ್ನೂ ಓದಿ: ಯುಗಾದಿ ಚಂದ್ರನ ದರ್ಶನ – ಏನಿದರ ಮಹತ್ವ?

ಹುಟ್ಟು-ಬೆಳವಣಿಗೆ-ಮಾರ್ಪಾಡಿನ ಕಾಲಚಕ್ರದ ಆರಂಭದ ಗತಿಯೇ ಯುಗಾದಿ. ಪ್ರಕೃತಿಯಲ್ಲಾಗುವ ಬದಲಾವಣೆಗಳಿಗೆ ಋತುಗಳೆನ್ನುತ್ತೇವೆ. ವಸಂತ ಋತುವಿನ ಚೈತ್ರಮಾಸದ ಮೊದಲ ದಿನ ಯುಗಾದಿ. ಚಿರುಗಿನ ಕ್ಷಣ. ಚಿಗುರು ಹಣ್ಣೆಲೆಯಾಗಿ ಉದುರುವ ಕಾಲಕ್ಕೆ ಸಾಗುವ ಆರಂಭದ ಕ್ಷಣವಿದು. ಮನುಷ್ಯ ಜೀವನವೂ ಹೀಗೆಯೇ ಸಾಗುತ್ತದೆ. ಹುಟ್ಟು; ಬೆಳವಣಿಗೆ; ಮುಪ್ಪು; ಸಾವು ಮತ್ತೆ ಮಾರ್ಪಾಡು. ಕಾಲಚಕ್ರ ಹೀಗೆಯೇ ಉರುಳುತ್ತಿರುತ್ತದೆ.

ಪ್ರಕೃತಿಯ ಚೈತ್ರ ಕಾಲವನ್ನು ಭಾರತೀಯರು ಸಾಂಪ್ರದಾಯಿಕವಾಗಿ ಸ್ವಾಗತಿಸುತ್ತಾರೆ. ‘ಯುಗಾದಿ’ ಹಬ್ಬ ಆಚರಿಸುತ್ತಾರೆ. ಬದುಕಿನಲ್ಲಿ ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುವ ಸಂಕೇತವಾಗಿ ಬೇವು-ಬೆಲ್ಲವನ್ನು ತಿನ್ನುತ್ತಾರೆ. ಬೆಲ್ಲವೆಂಬ ಸಿಹಿ ಮತ್ತು ಬೇವು ಎಂಬ ಕಹಿ ಎರಡನ್ನೂ ಪ್ರಕೃತಿಯೇ ನಮಗೆ ಕೊಟ್ಟಿದೆ. ಅಂದರೆ ಮನುಷ್ಯನ ಬದುಕಿನಲ್ಲಾಗುವ ಎಲ್ಲಾ ಬದಲಾವಣೆ ಮತ್ತು ಅನುಭವಗಳಿಗೂ ಪ್ರಕೃತಿಯೇ ಆಧಾರ. ಇದನ್ನೂ ಓದಿ: ವರಲಕ್ಷ್ಮಿ ಶರತ್‌ಕುಮಾರ್ ಜೋಡಿಯನ್ನು ಭೇಟಿಯಾದ ಕಿಚ್ಚ ಫ್ಯಾಮಿಲಿ

ಹಬ್ಬ ಎಂದರೆ ಸಂಭ್ರಮ. ಮನೆಯನ್ನು ಶುಚಿಗೊಳಿಸಿ, ಮಾವು-ಬೇವು ತಳಿರು ತೋರಣದಿಂದ ಅಲಂಕರಿಸಿ ಚೈತ್ರದ ಚಿಗುರಿನ ಕಾಲವನ್ನು ಸ್ವಾಗತಿಸುವುದು, ದೇವಸ್ಥಾನಗಳಿಗೆ ತೆರಳಿ ಪೂಜೆ-ಪುನಸ್ಕಾರ ಮಾಡುವುದು, ಮನೆಯಲ್ಲಿ ರುಚಿ ರುಚಿಯಾದ ಭಕ್ಷ ಭೋಜ್ಯಗಳನ್ನು ಮಾಡಿ ಸವಿದು ಸಂಭ್ರಮಿಸುವ ಪರಿ ಇದ್ದೇ ಇರುತ್ತದೆ.

ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು ಅಂತ ಹಾಡೇ ಇದೆ. ಮಾವಿನ ಮರದಲ್ಲಿ ಮಾವಿನಕಾಯಿ ನಳನಳಿಸುತ್ತಿರುತ್ತವೆ. ಯುಗಾದಿ ಹಬ್ಬಕ್ಕೆ ಸಿಹಿಯಾದ ಹೋಳಿಗೆ ಜೊತೆಗೆ ಹುಳಿ ಮಾವಿನಕಾಯಿ ಚಿತ್ರಾನ್ನ ಇರಲೇಬೇಕು. ಹುಳಿ, ಸಿಹಿ, ಖಾರ ಯುಗಾದಿ ಹಬ್ಬಕ್ಕೆ ಪೂರಕ.

ಹೊಸತೊಡಕು
ಯುಗಾದಿ ಹಬ್ಬದ ಮಾರನೇ ದಿನ ಹೊಸತೊಡಕು ಹಬ್ಬ. ಆ ದಿನ ಮಾಂಸಾಹಾರದ್ದೇ ಕಾರುಬಾರು. ಕುರಿ-ಕೋಳಿಗಳನ್ನು ಬಲಿಕೊಟ್ಟು ಬಗೆ ಬಗೆಯ ಮಾಂಸದಡಿಗೆ ಮಾಡಿ ಸೇವಿಸುತ್ತಾರೆ. ಹೊಸತೊಡಕಿಗಾಗಿಯೇ ಅನೇಕರು ಮುಂಚಿತವಾಗಿ ಚೀಟಿ ಹಾಕಿರುತ್ತಾರೆ. ಚೀಟಿ ದುಡ್ಡಿನಲ್ಲಿ ಮಾಂಸ ಖರೀದಿಸಿ ಪರಸ್ಪರರು ಹಂಚಿಕೊಳ್ಳುತ್ತಾರೆ. ಹಬ್ಬದ ದಿನ ಸಿಹಿ ಮತ್ತು ಮಾರನೇ ದಿನ ಖಾರದ ಊಟ ಮಾಡಿ ಜನ ಸಂಭ್ರಮಿಸುತ್ತಾರೆ.

Share This Article