ಕೊರೊನಾ ಕಿರಿಕ್- ಜನತೆ, ಪೊಲೀಸರಿಗಾಗಿ ಆ್ಯಪ್ ಕಂಡು ಹಿಡಿದ ರಾಜ್ಯದ ಯುವಕ

Public TV
2 Min Read

ಉಡುಪಿ: ಭಾರತ ಲಾಕ್‍ಡೌನ್ ಆಗಿ ಐದು ದಿನ ಆದ್ರೂ ಹೊರಗೆ ಬರುವ ಜನರನ್ನ ಕಂಟ್ರೋಲ್ ಮಾಡುವುದಕ್ಕೆ ಆಗುತ್ತಿಲ್ಲ. ಅಗತ್ಯ ವಸ್ತು ತೆಗೆದುಕೊಳ್ಳಲು ಬರುತ್ತಿರುವವರಿಗೂ ಪೊಲೀಸರು ಲಾಠಿ ರುಚಿ ತೋರಿಸುವ ಸ್ಥಿತಿ ಎದುರಾಗಿದೆ. ಪೊಲೀಸರ ತಲೆನೋವನ್ನು ಕಡಿಮೆ ಮಾಡುವುದಕ್ಕೆ ಉಡುಪಿಯ ಎಂಟೆಕ್ ಪದವೀಧರನೋರ್ವ ಪ್ಲಾನ್ ಮಾಡಿದ್ದಾರೆ.

ಉಡುಪಿ ಮೂಲದ ಯುವಕ ವಿಕ್ರಮ್ ಬಾಳಿಗ ಕೊರೊನಾ ಸೇಫ್ಟಿ ಪೊಲೀಸ್ ಆ್ಯಪ್ ಒಂದನ್ನು ಸಿದ್ಧಪಡಿಸಿದ್ದಾರೆ. ಇದು ಕೇವಲ ಜಿಲ್ಲೆಗೆ ಮಾತ್ರ ಅಲ್ಲ, ಇಡೀ ರಾಜ್ಯಕ್ಕೆ ಉಪಯೋಗವಾಗುವ ಆ್ಯಪ್ ಆಗಿದೆ. ವಿಕ್ರಮ್ ಮೈಸೂರು ಮಹಾರಾಜ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಟೆಕ್ ಪದವಿ ಪೂರೈಸಿದ್ದಾರೆ. ಡಿಸೈನಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅವರು ಕೊರೊನಾ ಜಾಗೃತಿಗಾಗಿ ಮತ್ತು ಉಪಯೋಗಕ್ಕೆ ಪೊಲೀಸರು ಮತ್ತು ಸಾರ್ವಜನಿಕರಿಗೆ ಆ್ಯಪ್ ರೆಡಿ ಮಾಡಿದ್ದಾರೆ.

ಕೊರೊನಾ ಪಬ್ಲಿಕ್ ಸೇಫ್ಟಿ ಎಂದು ಆ್ಯಪ್‍ಗೆ ಹೆಸರು ಕೊಟ್ಟಿದ್ದೇನೆ. ತುರ್ತು ಸಂದರ್ಭದಲ್ಲಿ ಅಗತ್ಯ ವಸ್ತುಗಳ ಪೂರೈಕೆ ಮಾಡುವ ಜನರಿಗೆ ಉಪಯೋಗ ಆಗಲಿ ಎಂಬುದು ಇದರ ಮುಖ್ಯ ಉದ್ದೇಶ. ಈ ಆ್ಯಪ್‍ನಿಂದ ಜನರಿಗೆ ಮತ್ತು ಪೊಲೀಸರಿಗೆ ಉಪಯೋಗ ಆಗಲಿದೆ. ಮನೆಯಿಂದ ಹೊರಡುವ ಮೊದಲು ಈ ಆ್ಯಪ್‍ನಲ್ಲಿ ವ್ಯಕ್ತಿ ತಾನು ಯಾವ ಉದ್ದೇಶದಿಂದ ಹೊರಗೆ ಹೋಗುತ್ತಿದ್ದೇನೆ ಎಂಬುದನ್ನು ನಮೂದಿಸಬೇಕು. ಪೊಲೀಸರಿಗೆ ರಿಕ್ವೆಸ್ಟ್ ಕಳುಹಿಸಬೇಕು. ಪೊಲೀಸರು ಅದನ್ನು ಓಕೆ ಮಾಡಿದರೆ ರಿಕ್ವೆಸ್ಟ್ ಕಳಿಸಿದ ವ್ಯಕ್ತಿ ಮನೆಯಿಂದ ಹೊರಡಬಹುದು. ಪೊಲೀಸರು ಓಕೆ ಮಾಡುವ ಅಥವಾ ರಿಜೆಕ್ಟ್ ಮಾಡುವ ಅವಕಾಶವನ್ನು ಕೂಡ ಈ ಆ್ಯಪ್ ನಲ್ಲಿ ಇನ್‍ಸ್ಟಾಲ್ ಮಾಡಲಾಗಿದೆ ಎಂದು ವಿಕ್ರಮ್ ವಿವರಿಸಿದ್ದಾರೆ.

ಆ್ಯಪ್ ಅನ್ನು ಇನ್‍ಸ್ಟಾಲ್ ಮಾಡುವ ಸಂದರ್ಭದಲ್ಲಿ ನಮ್ಮ ಫೋನ್ ನಂಬರ್ ಅಡ್ರೆಸ್ ಮತ್ತು ವಾಹನದ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಸುಳ್ಳು ಮತ್ತು ಬೇಕಾಬಿಟ್ಟಿ ಸುತ್ತಾಡುವ ಅವಕಾಶ ಇರುವುದಿಲ್ಲ. ಇಂತಿಷ್ಟೇ ಸಮಯದ ಒಳಗೆ ವಾಪಸ್ ಬರಬೇಕು ಎಂದು ಪೊಲೀಸರು ಸೂಚನೆ ಕೊಡುವ ಅವಕಾಶ ಇದರಲ್ಲಿದೆ. ಪೊಲೀಸರ ಬಳಿ ಕೂಡ ಸಂಚಾರದ ಸಂಪೂರ್ಣ ಮಾಹಿತಿಗಳು ಇದರಲ್ಲಿ ಅಡಕವಾಗಿರುತ್ತದೆ. ಇದು ಕೇವಲ ಕೊರೊನಾ ಲಾಕ್‍ಡೌನ್‍ಗಾಗಿ ಅಲ್ಲ ಮುಂದಿನ ದಿನಗಳಲ್ಲೂ ಇದನ್ನು ಬಳಸಬಹುದು. ಸಮಾಜ ಸೇವಕರಿಗೆ ಆಸ್ಪತ್ರೆಯವರಿಗೆ ಆಹಾರವನ್ನು ಪೂರೈಕೆ ಮಾಡುವವರಿಗೆ ಎಂಜಿಒಗಳಿಗೆ ಇದು ಬಳಕೆ ಆಗಲಿದೆ.

ಪೊಲೀಸರ ಮೇಲೆ ತಪ್ಪು ಭಾವನೆ ಬರಬಾರದು. ಸರ್ಕಾರದ ಮೇಲೆ ಒತ್ತಡ ಕಮ್ಮಿ ಆಗಬೇಕು, ಜನರ ಬಳಕೆಗೆ ಇದು ಉಪಯೋಗ ಆಗಬೇಕು ಎನ್ನುವ ಉದ್ದೇಶದಿಂದ ಆ್ಯಪ್ ಸಿದ್ಧಪಡಿಸಿದ್ದೇನೆ ಎಂದು ವಿಕ್ರಂ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *