ಉಡುಪಿಯಲ್ಲಿ ವಿಟ್ಲಪಿಂಡಿ ಉತ್ಸವಕ್ಕೆ ಅದ್ಧೂರಿ ತೆರೆ

Public TV
1 Min Read

ಉಡುಪಿ: ನಗರದಲ್ಲಿ ಎರಡು ದಿನದ ಅಷ್ಟಮಿ ಸಂಪನ್ನಗೊಂಡಿದೆ. ಶ್ರೀಕೃಷ್ಣನ ಲೀಲೋತ್ಸವ ಸಂಭ್ರಮ, ಮಣ್ಣಿನ ಕೃಷ್ಣನ ಜಲಸ್ತಂಭನ, ಅಷ್ಟಮಠಗಳ ರಥಬೀದಿಯಲ್ಲಿ ಲಕ್ಷಾಂತರ ಮಂದಿ ಭಕ್ತರು ನೆರೆದಿದ್ದರು. ಚಿನ್ನದ ರಥದಲ್ಲಿ ಕಡೆಗೋಲು ಶ್ರೀಕೃಷ್ಣ ವಿರಾಜಮಾನನಾದನು. ಕೃಷ್ಣ ಲೀಲೋತ್ಸವದಲ್ಲಿ ವಿವಿಧ ವೇಷಗಳ ಅಬ್ಬರ ಕಂಡುಬಂದಿದ್ದು, ಒಟ್ಟಿನಲ್ಲಿ ಉಡುಪಿ ಶ್ರೀಕೃಷ್ಣ ಮಠ ನಂದಗೋಕುಲವಾಗಿತ್ತು.

ನಗರದ ಶ್ರೀಕೃಷ್ಣ ಮಠದಲ್ಲಿ ಕೃಷ್ಣಜನ್ಮಾಷ್ಟಮಿಯಂದು ಭಕ್ತರು ಸಾಂಪ್ರದಾಯಿಕ-ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಳಕಗೊಂಡಿದ್ದರು. ಕೃಷ್ಣನ ಜನನ ನಂತರದ ಕೃಷ್ಣ ಲೀಲೋತ್ಸವದ ವೈಭವ ಭಕ್ತಕೋಟಿಯನ್ನು ಸಂಭ್ರಮದ ಸಾಗರದಲ್ಲಿ ತೇಲಾಡಿಸಿತು. ಶನಿವಾರ ಮಧ್ಯಾಹ್ನ ಮೂರು ಗಂಟೆಗೆ ಸರಿಯಾಗಿ ಮಠದೊಳಗಿಂದ ಕೃಷ್ಣನ ಮೃನ್ಮಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ತರುವ ಮೂಲಕ ವಿಟ್ಲಪಿಂಡಿ ಉತ್ಸವ ಆರಂಭಗೊಂಡಿತು. ಸಾಂಪ್ರದಾಯಿಕ ಗೊಲ್ಲ ವೇಷಧಾರಿಗಳು ಮಡಿಕೆಯೊಡೆಯುವ ಮೂಲಕ ಉತ್ಸವಕ್ಕೆ ಅಧಿಕೃತ ಚಾಲನೆ ಕೊಟ್ಟರು. ಸ್ವಾಮೀಜಿ ರಥದಲ್ಲಿ ಕೃಷ್ಣನ ಮೂರ್ತಿಯನ್ನು ಕುಳ್ಳಿರಿಸಿ- ಆರತಿಯೆತ್ತಿ ಮೆರವಣಿಗೆ ನಡೆಸಿದರು.

ಈ ವೇಳೆ ಸಾವಿರಾರು ವೇಷಧಾರಿಗಳು ಮುರಳೀಲೋಲನ, ನಂದಕಿಶೋರನ ಮೆರವಣಿಗೆಯನ್ನು ಮತ್ತಷ್ಟು ವೈಭವಯುಕ್ತ ಮಾಡಿದರು. ಹುಲಿವೇಷ ತಂಡ, ರಾಕ್ಷಸ ವೇಷ, ನಾಗ ಕನ್ನಿಕೆ ಹೀಗೆ ಹಲವಾರು ವೇಷಗಳು ವಿಟ್ಲಪಿಂಡಿಯ ಮೆರುಗನ್ನು ಹೆಚ್ಚಿಸಿತು. ರಥಬೀದಿಯಲ್ಲಿ ಲಕ್ಷ ಮಂದಿ ಭಕ್ತರು ಪಾಲ್ಗೊಂಡರೆ, ಉಡುಪಿ ನಗರದಾದ್ಯಂತ ವಿವಿಧ ವೇಷಗಳು ಹಬ್ಬಕ್ಕೆ ಮೆರುಗು ಕೊಟ್ಟಿತು. ಪಿಶಾಚಿ ಕುಣಿತ, ಶಾರ್ಧೂಲ, ಮಕ್ಕಳ ಪೇಪರ್ ವೇಷ, ನಗರಕ್ಕೆ ರಂಗು ತುಂಬಿಸಿತು. ನಗರದೆಲ್ಲೆಡೆ ಹುಲಿವೇಷಗಳ ಕಲರವ ಜೋರಾಗಿತ್ತು.

ವಿಟ್ಲಪಿಂಡಿ ಉತ್ಸವ ಅಷ್ಟಮಠಗಳ ಮುಂಭಾಗದಲ್ಲಿ ಸಾಗಿ ಸುತ್ತಲೂ ನಿಂತಿದ್ದ ಭಕ್ತರಿಗೆ ದರ್ಶನ ಕೊಟ್ಟು ಕನಕಗೋಪುರದ ಮುಂಭಾಗವಾಗಿ ಮಠದ ಪ್ರವೇಶ ದ್ವಾರದತ್ತ ಸಾಗಿತು. ಚಾತುರ್ಮಾಸದ ಸಂದರ್ಭ ಶ್ರೀಕೃಷ್ಣ ಯೋಗ ನಿದ್ರೆಯಲ್ಲಿರುತ್ತಾನೆ ಎಂಬುದು ನಂಬಿಕೆ ಎಂದು ಅದಮಾರು ಮಠದ ಈಶಪ್ರಿಯ ಸ್ವಾಮೀಜಿ ಹೇಳಿದ್ದಾರೆ.

ಅಷ್ಟಮಿ ದಿನ ಕೃಷ್ಣನ ಮೃನ್ಮಯ ಮೂರ್ತಿಯನ್ನು ಮೆರವಣಿಗೆ ಮಾಡಲಾಯ್ತು. ಅದಮಾರು ಶ್ರೀಗಳು ಪರ್ಯಾಯ ಸ್ವಾಮೀಜಿಗಳು ಮೃನ್ಮಯ ಮೂರ್ತಿಯನ್ನು ಮಠದ ಮಧ್ವ ಸರೋವರರದಲ್ಲಿ ಜಲಸ್ತಂಭನ ಮಾಡುವ ಮೂಲದ ಎರಡು ದಿನಗಳ ಕಾಲ ವೈಭವದಿಂದ ನಡೆದ ಅಷ್ಟಮಿ ಮತ್ತು ವಿಟ್ಲಪಿಂಡಿ ಉತ್ಸವಕ್ಕೆ ಸಂಭ್ರಮದ ತೆರೆ ಬಿತ್ತು.

Share This Article
Leave a Comment

Leave a Reply

Your email address will not be published. Required fields are marked *