ಬಿಯರ್ ಹಿಡಿದು ಕೃಷ್ಣನ ಹಾಡಿಗೆ ಟಿಕ್ ಟಾಕ್ – ಚಳಿ ಬಿಡಿಸಿದ ಜನ

Public TV
1 Min Read

ಉಡುಪಿ: ಗುರುವಾಯೂರಿನ ಶ್ರೀಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆಯ ಹಾಡನ್ನು ಬಿಯರ್ ಬಾಟಲಿ ಹಿಡ್ಕೊಂಡು ಟಿಕ್ ಟಾಕ್ ಮಾಡಿದ ಯುವಕರ ಚಳಿ ಬಿಡಿಸಲಾಗಿದೆ.

ಮೊಸರು ಕುಡಿಕೆಯ ಉತ್ಸವದಲ್ಲಿ ಕುಣಿದ ಕೇರಳದ ಯುವತಿಯ ವೀಡಿಯೋ ಅಷ್ಟಮಿ ಸಂದರ್ಭ ಸಿಕ್ಕಾಪಟ್ಟೆ ವೈರಲಾಗಿತ್ತು. ಆ ನಂತರ ಬಂದ ವೈಷ್ಣವಿಯ ಫೋಟೋಗಳು ಭಾರೀ ಜನಮನ್ನಣೆ ಪಡೆದಿತ್ತು. ಫೇಸ್ ಬುಕ್, ವಾಟ್ಸಾಪ್ ನಲ್ಲಿ ಗುರುವಾಯೂರು ಕೃಷ್ಣೆ ಆವರಿಸಿದ್ದಳು.

ಇದನ್ನು ಟಿಕ್ ಟಾಕ್ ಕಿಡಿಗೇಡಿಗಳು ಅದೇ ಹಾಡಿಗೆ ವೈಷ್ಣವಿಯನ್ನು ಹೋಲುತ್ತಾ ಕುಣಿದಿದ್ದರು. ಮೊಸರು ಕುಡಿಕೆಯ ಬದಲು ಬಿಯರ್ ಬಾಟಲಿ ನೇತು ಹಾಕಿದ್ದರು. ಚಿಕ್ಕಮಗಳೂರಿನ ಈ ಯುವಕರಿಗೆ ಉಡುಪಿ ಜಿಲ್ಲೆ ಕಾರ್ಕಳದ ಹಿಂದೂ ಸಂಘಟನೆಯವರು ಚಳಿ ಬಿಡಿಸಿದ್ದಾರೆ. ಕಾರ್ಕಳ ತಾಲೂಕು ಬಜರಂಗದಳದ ಕಾರ್ಯಕರ್ತರು ಟಿಕ್ ಟಾಕ್ ಶೂರರ ವಿಳಾಸ ಪತ್ತೆ ಮಾಡಿದ್ದಾರೆ. ಇದನ್ನು ಓದಿ:ಕೃಷ್ಣನ ಅವತಾರದಲ್ಲಿ ಯುವತಿ ವೈರಲ್ – ವಿಡಿಯೋದ ಅಸಲಿಯತ್ತು ಏನು?

ದಕ್ಷಿಣ ಕ್ನನಡ ಜಿಲ್ಲೆಯ ಮೂಡುಬಿದಿರೆಯ ಹುಡುಗನೊಬ್ಬ ತಂಡದಲ್ಲಿದ್ದು, ಅವನಿಗೆ ಎಚ್ಚರಿಕೆ ನೀಡಿ, ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಇದರಿಂದ ಭಯಗೊಂಡ ಮೂರು ಟಿಕ್ ಟಾಕ್ ಕಲಾವಿದರು ಕ್ಷಮೆ ಕೇಳಿದ್ದಾರೆ. ವೀಡಿಯೋ ಮಾಡಿ ತಮ್ಮ ತಪ್ಪಾಗಿದೆ ಎಂದು ಕೇಳಿಕೊಂಡಿದ್ದಾರೆ.

ಭಜರಂಗದಳದ ನಾಯಕ ಮಹೇಶ್ ಶೆಣೈ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಟಿಕ್ ಟಾಕ್ ಅವಾಂತರ ಮಿತಿ ಮೀರಿದೆ. ಅದರಲ್ಲೂ ದೇವರ ವಿಚಾರದಲ್ಲಿ ಟಿಕ್ ಟಾಕ್ ಮಾಡಿದ್ದು ನೋವಿನ ಸಂಗತಿ. ಕಲೆ, ಸಂಸ್ಕೃತಿ, ನಂಬಿಕೆ ವಿಚಾರವನ್ನು ವಿಡಂಬನೆ ಮಾಡುವುದು ಎಷ್ಟು ಸರಿ? ಯುವಕರನ್ನು ಫೋನ್  ಮೂಲಕ ಪತ್ತೆಹಚ್ಚಿ ಕ್ಷಮೆ ಕೇಳಿಸಿದ್ದೇವೆ. ಇನ್ನು ಈ ತರಹ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇಂತಹ ಘಟನೆ ಮುಂದುವರೆಯಬಾರದು ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *