– ಧುಮ್ಮಿಕ್ಕಿ ಹರಿಯುವ ಸೀತಾನದಿಯ ದೃಶ್ಯ ಡ್ರೋನ್ ನಲ್ಲಿ ಸೆರೆ
ಉಡುಪಿ: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರ ಮಳೆಯಾಗಿದೆ. ದಿನಕ್ಕೆ ಸರಾಸರಿ ನೂರು ಮಿಲಿ ಮೀಟರ್ ನಷ್ಟು ಮಳೆ ಬಿದ್ದಿದ್ದು, ನಾಲ್ಕು ದಿನದಲ್ಲಿ 500 ಮಿಲಿಮೀಟರ್ ಮಳೆಯಾಗಿದೆ. ಮುಂಗಾರು ಅಬ್ಬರಕ್ಕೆ ಜಿಲ್ಲೆಯ ಎಲ್ಲಾ ನದಿಗಳು ತುಂಬಿ ತುಳುಕಿದೆ.
ಪಶ್ಚಿಮಘಟ್ಟದ ತಪ್ಪಲಿನಲ್ಲಿ ಹುಟ್ಟಿ, ಹೆಬ್ರಿ ತಾಲೂಕು ದಾಟಿ, ಬ್ರಹ್ಮಾವರ ತಾಲೂಕಿನಲ್ಲಿ ಹಾದು ಸಮುದ್ರ ಸೇರುವ ಸೀತಾನದಿಯ ದೃಶ್ಯಗಳಿವು. ನೀಲಾವರದ ಸಿದ್ಧಾರ್ಥ್ ಎಂಬವರು ತಮ್ಮ ಡ್ರೋನ್ ಕ್ಯಾಮೆರಾ ಮೂಲಕ ಈ ಅದ್ಭುತ ದೃಶ್ಯವನ್ನು ಸೆರೆ ಹಿಡಿದ್ದಾರೆ. ಮಳೆ ಕಡಿಮೆಯಾದ ಕೂಡಲೇ ಡ್ರೋನ್ ಹಾರಿಸಿದ್ದು ನದಿಯ ತೀವ್ರತೆ ಮತ್ತು ಅಘಾದತೆಯನ್ನು ಸೆರೆ ಹಿಡಿಯುವ ಪ್ರಯತ್ನ ಮಾಡಿದ್ದಾರೆ.
ನಿರಂತರ ಮಳೆಗೆ ಸೀತಾನದಿ ಉಕ್ಕಿ ಹರಿದಿದ್ದು ಸುತ್ತಮುತ್ತಲ ಗದ್ದೆ ತೋಟಗಳು ಜಲಾವೃತವಾಗಿದೆ. ಕೂರಾಡಿ ಸೇತುವೆಯವರೆಗೆ ಸೀತಾ ನದಿ ಉಕ್ಕಿ ಹರಿದಿದೆ. ಕಳೆದ 24 ಗಂಟೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು ನೆರೆಯೂ ಇಳಿಮುಖವಾಗುತ್ತಿದೆ. ಆದರೆ ನದಿಯ ರಭಸವಾದ ಹರಿವು ಮಾತ್ರ ಹಾಗೆಯೇ ಇದೆ.
ಸ್ಥಳೀಯ ಮಟಪಾಡಿ ಗೋಪಾಲ ಪೂಜಾರಿ ಮಾತನಾಡಿ, ಜೂನ್ ಕೊನೆಯವರೆಗೂ ಮಳೆಯಾಗದ್ದು ನೋಡಿ ಈ ವರ್ಷ ಮುಂಗಾರು ಕೈಕೊಟ್ಟಿತು ಎಂಬ ಭಯ ಶುರುವಾಗಿತ್ತು. ಆದರೆ ಜುಲೈ, ಆಗಸ್ಟ್ ತಿಂಗಳಲ್ಲಿ ವರುಣದೇವ ಕೃಪೆ ತೋರಿದ್ದಾನೆ. ನದಿ ಪಾತ್ರದ ಜನರಿಗೆ ಸ್ವಲ್ಪ ಸಮಸ್ಯೆಯಾಗಿದೆ ಎಂದು ಹೇಳಿದರು.