ಕರಾವಳಿಯಲ್ಲಿ ಮರಳಿಗಾಗಿ ಬರ- ಜನನಾಯಕರಿಗೆ ಜನರಿಂದಲೇ ಕ್ಲಾಸ್!

Public TV
2 Min Read

ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮರಳಿನ ಬಿಸಿ ವಿಪರೀತವಾಗಿದೆ. ಜನಕ್ಕೆ ಮರಳು ಸಿಗದಿರೋದ್ರಿಂದ ಸಮಸ್ಯೆ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರ ನೆಮ್ಮದಿ ಕೆಡಿಸಿದೆ. ಜನನಾಯಕರು ಸಾರ್ವಜನಿಕವಾಗಿ ಓಡಾಡದ ಪರಿಸ್ಥಿತಿ ಎದುರಾಗಿದೆ. ಸಚಿವ- ಸಂಸದರನ್ನು ಸಿಕ್ಕ ಸಿಕ್ಕಲ್ಲಿ ಜನ ಅಡ್ಡ ಹಾಕಿ ಪ್ರಶ್ನೆ ಮಾಡುತ್ತಿದ್ದಾರೆ. ಸಾರ್ವಜನಿಕರು, ಸಾಂಪ್ರದಾಯಿಕದಾಗಿ ಮರಳು ತೆಗೆಯುವವರು, ಲಾರಿ ಮಾಲಕರು, ಚಾಲಕರು ಜನಪ್ರತಿನಿಧಿಗಳನ್ನು ಬೇತಾಳದಂತೆ ಬೆನ್ನತ್ತುತ್ತಿದ್ದಾರೆ. ಸಿಕ್ಕ ಸಿಕ್ಕಲ್ಲೆಲ್ಲಾ ಜನನಾಯಕರಿಗೆ ಮುತ್ತಿಗೆ ಹಾಕಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸುತ್ತಿದ್ದಾರೆ.

ಹೌದು. ಕರಾವಳಿಯಲ್ಲಿ ಮರಳುಗಾರಿಕೆಗೆ ಅನುಮತಿಯಿಲ್ಲದ ಕಾರಣ ಮರಳಿನ ಬಿಸಿ ವಿಪರೀತವಾಗಿದೆ. ವಿವಾದ ಹಸಿರು ನ್ಯಾಯಪೀಠದಲ್ಲಿದ್ದು ವಿಚಾರಣೆ ನಡೆಯುತ್ತಿದೆ. ಆದ್ರೆ ಉಡುಪಿಯಲ್ಲಿ ಜನಪ್ರತಿನಿಧಿಗಳು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಕ್ಕಸಿಕ್ಕಲ್ಲಿ ಅಡ್ಡಹಾಕ್ತಿರುವ ಜನರು ಬಿಸಿ ಮುಟ್ಟಿಸ್ತಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆಗೆ ಮರಳು ಲಾರಿ ಮಾಲಕರು, ಕಾರ್ಮಿಕ ಸಂಘದವರು ಘೇರಾವ್ ಹಾಕಿದ್ದಾರೆ. ಕುಂದಾಪುರದ ಕೋಟೇಶ್ವರದಲ್ಲಿ ಈ ಘಟನೆ ನಡೆದಿದ್ದು, ನೀವು ಉಡುಪಿ ಚಿಕ್ಕಮಗಳೂರಿನ ಸಂಸದೆಯಾದರೂ ಬೆಂಗಳೂರಲ್ಲೇ ಇರುತ್ತೀರಿ. ಇಲ್ಲಿನ ಜನರ ಸಮಸ್ಯೆ ನಿಮಗೆ ಬಿದ್ದೇ ಹೋಗಿಲ್ಲ ಅಂತ ಕಿಡಿಕಾರಿದ್ದಾರೆ.


ಉಡುಪಿಯ ಸಾಸ್ತಾನ ಬಳಿ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಗೆ ಮುತ್ತಿಗೆ ಹಾಕಿದ ಟಿಪ್ಪರ್ ಮಾಲೀಕರು, ನೀವೂ ನಮ್ಮೊಂದಿಗೆ ಕುಳಿತು ಪ್ರತಿಭಟಿಸಿ ಅಂತಾ ಕ್ಲಾಸ್ ತಗೊಂಡ್ರು.

ಅಕ್ಟೋಬರ್ 15ಕ್ಕೆ ಮರಳು ಸಮಸ್ಯೆ ಸರಿಮಾಡಿಕೊಡುತ್ತೇನೆ ಎಂದು ಹೇಳಿದ್ದ ಸಚಿವೆ ಜಯಮಾಲಾ ಅವರಿಗೂ ಮುತ್ತಿಗೆ ಹಾಕಿದ್ದಾರೆ. ಜಿಲ್ಲಾಧಿಕಾರಿಯನ್ನು ಎತ್ತಂಗಡಿ ಮಾಡಿ ಅಂತಾ ಪ್ರತಿಭಟನಾಕಾರರು ಒತ್ತಾಯಿಸಿದಾಗ ಅದು ನನ್ನಿಂದ ಸಾಧ್ಯವಿಲ್ಲ ಅಂತಾ ಜಯಮಾಲಾ ಜಾರಿಕೊಂಡ್ರು. ಬಿಜೆಪಿ ನಾಯಕ ಜಯಪ್ರಕಾಶ್ ಹೆಗ್ಡೆಯವರನ್ನು ಮರಳು ಕೊಡಿಸಿ ಸ್ವಾಮಿ ಅಂತ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನಾಕಾರರು ಅಡ್ಡ ಹಾಕಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಬ್ಯಾರಿಕೇಡ್ ಇಟ್ಟು ತಡೆದಿದ್ದಾರೆ. ಈ ಸಂದರ್ಭ ಮರಳು ಲಾರಿ ಮಾಲಕರು ಮತ್ತು ಕಾರ್ಮಿಕರ ನಡುವೆ ಜಟಾಪಟಿಯಾಗಿ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಮರಳು ಬಿಸಿಯಿಂದಾಗಿ ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು ಜನರ ಕೈಗೆ ಸಿಗದೆ ತಲೆ ಮರೆಸಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *