ನೆರೆ ನಂತ್ರ ಬರಗಾಲದ ಭಯದಲ್ಲಿ ಉಡುಪಿ ಜನತೆ

Public TV
2 Min Read

– ಪರೀಕ ಗ್ರಾಮದಲ್ಲಿ ಪ್ರಾಕೃತಿಕ ವಿಸ್ಮಯ
– ಕಾಡಿನ ನಡುವೆ ಹೂ ಬಿಟ್ಟಿದೆ ಶ್ರೀತಾಳೆ ಮರ

ಉಡುಪಿ: ಕಳೆದ ಮಳೆಗಾಲದಲ್ಲಿ ನೆರೆ ಬಂದು ರಾಜ್ಯದ ಬಹುಭಾಗಗಳು ಕೊಚ್ಚಿಕೊಂಡು ಹೋಗಿದೆ. ಆ ನಂತರ ಕರಾವಳಿಯಲ್ಲಿ ಬೀಸಿದ ಮೂರು ಚಂಡಮಾರುತಗಳು ಸಾಕಷ್ಟು ಸಮಸ್ಯೆ ತಂದೊಡ್ಡಿತು. ಗಾಯದ ಮೇಲೆ ಬರೆ ಎಳೆದಂತೆ ಬರಗಾಲ ಎದುರಾಗುತ್ತಾ ಎನ್ನುವ ಭಯ ಉಡುಪಿ ಜನರಲ್ಲಿ ಶುರುವಾಗಿದೆ. ಇದಕ್ಕೆ ಕಾರಣ ಕಾಡಿನ ನಡುವೆ ಹೂ ಬಿಟ್ಟಿರುವ ಶ್ರೀತಾಳೆ ಮರ.

ಉಡುಪಿ ಜಿಲ್ಲೆಯ ಪರೀಕದಲ್ಲಿ ಪ್ರಾಕೃತಿಕ ವಿಸ್ಮಯವೊಂದು ನಡೆದಿದೆ. ಈ ವಿಸ್ಮಯ ಏನೆಂದರೆ ಖಾಲಿ ಜಾಗದಲ್ಲಿ ಆಗಸದತ್ತ ಬೆಳೆದಿರುವ ಶ್ರೀತಾಳೆ ಮರ ಹೂವು ಬಿಟ್ಟಿರುವುದು. ಶ್ರೀತಾಳೆ ಮರ ಭಾರತದಲ್ಲಿ ಕಾಣಸಿಗುವುದು ಬಲು ಅಪರೂಪ, ಅದರಲ್ಲೂ 62 ವರ್ಷದ ಮರ ಹೂವು ಬಿಟ್ಟಿರುವುದು ಇನ್ನೂ ವಿಶೇಷ. ಶ್ರೀತಾಳೆ ಮರ ಹೂವು ಬಿಡುವುದು ಬರಗಾಲದ ಸಮಯದಲ್ಲಿ ಎಂಬ ನಂಬಿಕೆಯಿದೆ. ಶ್ರೀತಾಳೆ ಹೂವು ಬಿಟ್ಟಾಗ ಬರಗಾಲವಿತ್ತೋ ಎಂಬ ಜಿಜ್ಞಾಸೆ ಜನರಲ್ಲಿದೆ. ಹಾಗಾಗಿ ಶ್ರೀತಾಳೆ ಮರ ಮೂಢನಂಬಿಕೆಗೆ ತುತ್ತಾಗಿ ಸರ್ವನಾಶವಾಗಿದೆ.

ಶ್ರೀತಾಳೆ ಮರ ಹೂವು ಬಿಟ್ಟ ಸುದ್ದಿ ಕೇಳಿ ಪ್ರಾಚ್ಯವಸ್ತು ಸಂಶೋಧಕ ಪ್ರೊಫೆಸರ್ ಕೃಷ್ಣಯ್ಯ ಸ್ಥಳಕ್ಕೆ ದೌಡಾಯಿಸಿದ್ದಾರೆ. ಶ್ರೀತಾಳೆ ಮರದ ಬಗ್ಗೆ ಈಗಾಗಲೇ 40 ವರ್ಷಗಳಿಂದ ಅಧ್ಯಯನ ಮಾಡಿರುವ ಕೃಷ್ಣಯ್ಯ, ಮರದ ರಕ್ಷಣೆಗೆ ಮುಂದಾಗಿದ್ದಾರೆ. ಶ್ರೀ ತಾಳೆಮರದ ಗರಿ, ಓಲೆಗಳು ಅದರ ಇತಿಹಾಸವನ್ನೆಲ್ಲಾ ಸುತ್ತಮುತ್ತಲಿನ ಜನರಲ್ಲಿ ಮಾಹಿತಿ ತುಂಬಿಸುತ್ತಿದ್ದಾರೆ. ಮರ ಇರುವ ಜಮೀನಿನ ಮಾಲಕ ಜಗಜ್ಜೀವನ್ ಕುಟುಂಬದ ಮನವೊಲಿಸಿ ಮರ ಕಡಿಯದಂತೆ ವಿನಂತಿಸಿದ್ದಾರೆ. ಹೂವು ಕಾಯಿಯಾಗಲು ಎಂಟು ತಿಂಗಳು ಕಾಯಬೇಕು. 30 ಸಾವಿರದಿಂದ 3 ಲಕ್ಷದವರೆಗೂ ಈ ಮರ ಕಾಯಿಗಳನ್ನು ಉದುರಿಸುತ್ತದೆ. ಇದನ್ನು ಸಂಗ್ರಹಿಸಿ ದೇಶಾದ್ಯಂತ ಶ್ರೀತಾಳೆ ಮರ ನೆಟ್ಟು ಕಾರ್ಗಿಲ್ ಕಾಡು ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಸ್ಥಳದಲ್ಲೇ ಮಾಹಿತಿ ಕಣಜ ನಿರ್ಮಾಣ ಮಾಡುವ ಆಲೋಚನೆಯೂ ಹಾಕಲಾಗಿದೆ.

ಈ ಬಗ್ಗೆ ಮಾತನಾಡಿದ ಕೃಷ್ಣಯ್ಯ ಅವರು, ಹಸಿರು, ಹಸಿವು ಅಕ್ಷರ ಪ್ರತೀಕ ಈ ಮರ. ಬೆಟ್ಟ-ಗುಡ್ಡಗಳು ಜಾರದಂತೆ ಈ ಮರಗಳು ಇರುತ್ತಿದ್ದವು. ಆದರೆ ಈಗ ಈ ಮರಗಳು ನಾಶವಾಗಿರುವುದರಿಂದ ಬೆಟ್ಟ-ಗುಡ್ಡಗಳು ಜಾರುತ್ತಿದೆ. ಇದು ಔಷಧಿಯ ಮರ. ಶ್ರೀರಾಮ ಚಂದ್ರ ತನ್ನ ವನವಾಸದ ಕಾಲದಲ್ಲಿ ಈ ಮರದ ಕೆಳಗೆ ವಾಸಿಸುತ್ತಿದ್ದರು ಎಂದು ಪ್ರತಿಕ್ರಿಯಿಸಿದರು.

ಶಾಸನಗಳು, ಪುರಾಣ- ಪಾಡ್ದನಗಳು ಎಲ್ಲವೂ ಇದೇ ಮರದ ಗರಿಯಲ್ಲಿ ಸಂಗ್ರಹಿಸಲ್ಪಟ್ಟಿರುತ್ತದೆ. ಶ್ರೀರಾಮಚಂದ್ರ ಪರ್ಣಕುಟೀರ ಮಾಡಿದ್ದು ಈ ಮರದ ಎಲೆಗಳಿಂದಲೇ. ಈ ಮರದ ತಿರುಳಿನಲ್ಲಿ ಅತೀ ಹೆಚ್ಚು ಪ್ರೊಟೀನ್ ಇದೆ. ಶ್ರೀಲಂಕಾದ ರಾಷ್ಟ್ರೀಯ ಮರವನ್ನು ಭಾರತದ ಉದ್ದಗಲಕ್ಕೂ ಸಂರಕ್ಷಿಸಿ- ಹೊಸ ಗಿಡಗಳನ್ನು ಬೆಳೆಸುವ ಅಗತ್ಯತೆಯಿದೆ. ಬರಗಾಲದ ಹೆಸರಲ್ಲಿ ಶ್ರೀತಾಳೆ ಮರದ ಮಾರಣಹೋಮ ನಿಲ್ಲಿಸಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *