ಡೆಂಗ್ಯೂ ನಿಯಂತ್ರಣಕ್ಕೆ ನಾಗನ ಮೊರೆ ಹೋದ ಕರಾವಳಿ ಮಂದಿ

Public TV
2 Min Read

– ನಾಗಬನದಲ್ಲಿ ಪರಿಸರ ಕ್ರಾಂತಿ

ಉಡುಪಿ: ಮಹಾಮಾರಿ ಡೆಂಗ್ಯೂಗೆ ಕರಾವಳಿ ಜನ ಭಯಭೀತರಾಗಿದ್ದಾರೆ. ಸೊಳ್ಳೆಗಳನ್ನು ನೋಡಿದರೆ ಹೌಹಾರುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನಾಗರಪಂಚಮಿಯ ದಿನವಾದ ಇಂದು ಈ ಮಹಾಮಾರಿ ಡೆಂಗ್ಯೂ ಹಾವಳಿ ನಿಯಂತ್ರಣವಾಗಲಿ ಎಂದು ನಾಗನಲ್ಲಿ ಕರಾವಳಿ ಜನ ಪ್ರಾರ್ಥನೆ ಮಾಡಿದರು.

ಹೌದು. ಎಲ್ಲೆಡೆ ಎರಡು ದಿನ ನಾಗರಪಂಚಮಿಯ ಸಂಭ್ರಮ. ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿಯನ್ನು ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಈ ದಿನ ನಾಗನ ಕಲ್ಲಿಗೆ ತನು ನೀಡಲಾಗುತ್ತದೆ. ಸೀಯಾಳ, ಹಾಲು, ಜೇನುತುಪ್ಪ, ಅರಿಶಿಣ ನೀರಿನ ಅಭಿಷೇಕವನ್ನೂ ಮಾಡಲಾಗುತ್ತದೆ.

ಕರಾವಳಿ ಜಿಲ್ಲೆ ಉಡುಪಿಯಲ್ಲಿ ಹತ್ತು ಸಾವಿರಕ್ಕೂ ಅಧಿಕ ನಾಗಬನವಿದೆ. ಇಲ್ಲಿ ಸಾವಿರಾರು ಸೀಯಾಳದ ಅಭಿಷೇಕ ಮಾಡಲಾಗುತ್ತದೆ. ಈ ಸೀಯಾಳದ ಚಿಪ್ಪನ್ನು ವಿಲೇವಾರಿ ಮಾಡುವುದೇ ಸವಾಲಿನ ಕೆಲಸವಾಗುತ್ತಿತ್ತು. ಆದರೆ ಈ ಬಾರಿ ಈ ಅಭಿಷೇಕ ಮಾಡಿ ಉಳಿದ ಸೀಯಾಳದ ಚಿಪ್ಪಿನೊಳಗೆ ನಾಗ ದೇವರಿಗೆ ಅಭಿಷೇಕ ಮಾಡಿದ ತೀರ್ಥವನ್ನು ತುಂಬಿ ಮತ್ತೆ ಭಕ್ತರಿಗೆ ನೀಡಲಾಯಿತು. ಉಡುಪಿಯ ನಾಗಬನದಲ್ಲಿ ಈ ಪರಿಸರ ಕ್ರಾಂತಿಯನ್ನು ಮಾಡಲಾಯಿತು. ಸೊಳ್ಳೆಗಳ ನಿಯಂತ್ರಣಕ್ಕಾಗಿ ಸಂಪ್ರದಾಯದ ಜೊತೆ ಪರಿಸರ ಕಾಳಜಿಯನ್ನು ಭಕ್ತರು ತೋರಿದರು. ಇದರಿಂದ ಅವರವರು ತಂದ ಸೀಯಾಳವನ್ನು ಅವರವರೇ ವಿಲೇವಾರಿ ಮಾಡಿದರು ಎಂದು ಅರ್ಚಕ ವಿಷ್ಣುಪ್ರಸಾದ್ ಪಾಡಿಗಾರ್ ಹೇಳಿದ್ದಾರೆ.

ಪ್ರತಿ ಮನೆಯವರು ತಮ್ಮ ಹತ್ತಿರದ, ಕುಟುಂಬದ ನಾಗಬನಕ್ಕೆ ಸೀಯಾಳ, ಹಾಲನ್ನು ಅರ್ಪಿಸುತ್ತಾರೆ. ಅಭಿಷೇಕ ಮಾಡಿದ ಬಳಿಕ ಸೀಯಾಳದ ಚಿಪ್ಪು ನಾಗಬನದ ಪರಿಸರದಲ್ಲೇ ಉಳಿಯುತ್ತಿತ್ತು. ಇದರಿಂದ ಮಳೆಗಾಲದಲ್ಲಿ ಈ ಚಿಪ್ಪಿನೊಳಗೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿತ್ತು. ಇದಕ್ಕಾಗಿ ಈ ಹೊಸ ಬದಲಾವಣೆಯನ್ನು ಮಾಡಲಾಗಿದೆ. ತಂದಿರುವ ಸೀಯಾಳದಲ್ಲೇ ತೀರ್ಥವನ್ನು ವಾಪಸ್ ಕೊಟ್ಟು ಕಳುಹಿಸಿದ್ದರಿಂದ ಪ್ರತಿ ಮನೆಯವರು ತಂದ ಸೀಯಾಳವನ್ನು ಅವರವರೇ ವಿಲೇವಾರಿ ಮಾಡಿದರು. ಇದರ ಜೊತೆ ಅಭಿಷೇಕ ಮಾಡಿದ ತೀರ್ಥವನ್ನು ಮನೆಯವರಿಗೆ ಹಂಚುವುದಕ್ಕೂ ಇದು ಸಹಾಯವಾಯಿತು. ಹೀಗಾಗಿ ಮೋದಿಯವರ ಸ್ವಚ್ಛ ಭಾರತ ಪರಿಕಲ್ಪನೆಗೂ ಇದು ಸಹಕಾರ ನೀಡಿದಂತಾಯಿತು. ಭಕ್ತರು ಕೂಡಾ ಭಕ್ತಿ-ಭಾವದ ಜೊತೆ ಪ್ರಸಾದವನ್ನು ಪಡೆದುಕೊಂಡು ನಾಗದೇವರ ಕೃಪೆಗೆ ಪಾತ್ರರಾದರು ಎಂದು ಅವರು ವಿವರಿಸಿದರು.

ಮಹಾಮಾರಿಯಿಂದ ಈಗಾಗಲೇ ಪ್ರಾಣಹಾನಿಯೂ ಸಂಭವಿಸಿದೆ. ಹೀಗಾಗಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಜನರು ಕೂಡ ಎಚ್ಚರಿಕೆ ವಹಿಸುತ್ತಿದ್ದಾರೆ. ಒಟ್ಟಿನಲ್ಲಿ ನಾಗರಪಂಚಮಿ ಹಬ್ಬದ ಆಚರಣೆಯಲ್ಲಿ ಈ ಬದಲಾವಣೆ ಎಲ್ಲಾ ಭಾಗಕ್ಕೂ ವಿಸ್ತರಣೆಯಾಗಬೇಕಾಗಿದೆ. ಪರಿಸರ ಸ್ವಚ್ಛತೆ ಬಗ್ಗೆ ಇನ್ನಷ್ಟೂ ಜಾಗೃತಿಯಾಗಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *