ನನ್ನೂರಿನ ಕೋಮು ಸಾಮರಸ್ಯ ವಿಶ್ವಕ್ಕೆ ಮಾದರಿ: ಆಡ್ಲಿನ್ ಕ್ಯಾಸ್ಟಲಿನೋ

Public TV
1 Min Read

ಉಡುಪಿ: ಲಿವಾ ಮಿಸ್ ದಿವಾ 2020 ವಿನ್ನರ್ ಆಡ್ಲಿನ್ ಕ್ಯಾಸ್ಟಲಿನೋ ಅವರನ್ನು ಉಡುಪಿಯ ಉದ್ಯಾವರ ಚರ್ಚ್ ನಲ್ಲಿ ಸನ್ಮಾನ ಮಾಡಲಾಗಿದೆ. ಸನ್ಮಾನ ಸ್ವೀಕರಿಸಿದ ಆಡ್ಲಿನ್ ಕೋಮು ಸಾಮರಸ್ಯದ ಬಗ್ಗೆ ಮಾತನಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಕ್ಯಾಸ್ಟಲಿನೋ ಮನೆ ವ್ಯಾಪ್ತಿಯ ಉದ್ಯಾವರ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಗೆ ಅವರನ್ನು ಬರಮಾಡಿಕೊಳ್ಳಲಾಯಿತು. ಚರ್ಚಿನ ಆಡಳಿತ ಮಂಡಳಿ, ಐಸಿವೈಎಂ ಸಂಘಟನೆ ಮತ್ತು ಸ್ಥಳೀಯರಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಆಡ್ಲಿನ್‍ಗೆ ವಜ್ರ ಕಿರೀಟವನ್ನು ಮತ್ತೆ ತೊಡಿಸಿ ಸನ್ಮಾನ ಮಾಡಲಾಯಿತು. ಕಾಪು ಶಾಸಕ ಲಾಲಾಜಿ ಮೆಂಡನ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಉದ್ಯಾವರ ಚರ್ಚ್ ಧರ್ಮಗುರುಗಳು ಸ್ಥಳೀಯ ಸಂಸ್ಥೆಗಳ ಮುಖಂಡರು ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಬಳಿಕ ಮಾತನಾಡಿದ ಆಡ್ಲಿನ್, ಹುಟ್ಟೂರಿನಲ್ಲಿ ಅದರಲ್ಲೂ ಚರ್ಚ್ ನಲ್ಲಿ ನನಗೆ ಸಿಗುತ್ತಿರುವ ಮೊದಲ ಸನ್ಮಾನ ಸ್ವೀಕರಿಸಿ ಮನಸ್ಸಿಗೆ ಬಹಳ ಖುಷಿಯಾಗಿದೆ. ಕೋಮು ಸಾಮರಸ್ಯದ ಕುರಿತು ನಾನು ವೇದಿಕೆಯಲ್ಲಿ ಮಾತನಾಡಿದಾಗ ಎಲ್ಲರೂ ನನ್ನನ್ನು ಅಭಿನಂದಿಸಿದರು. ನಿಜವಾಗಿ ಕೋಮು ಸಾಮರಸ್ಯದ ಬಗ್ಗೆ ನನಗೆ ಮಾತನಾಡಲು ಪ್ರೇರಣೆ ಸಿಕ್ಕಿದ್ದು ನನ್ನ ಹುಟ್ಟೂರು ಉಡುಪಿಯಿಂದ ಎಂಬುದು ನನಗೆ ಬಹಳ ಹೆಮ್ಮೆ. ಅದೇ ಕೋಮು ಸಾಮರಸ್ಯ ಇಂದಿನ ವೇದಿಕೆಯಲ್ಲಿ ಕೂಡ ನಾನು ಕಾಣುತ್ತಿದ್ದೇನೆ ಎಂದರು.

ವಿಶ್ವಸುಂದರಿ ವೇದಿಕೆಯಲ್ಲಿ ನಾನು ನಿಂತಾಗ ನನ್ನ ಊರು, ನನ್ನ ರಾಜ್ಯ, ನನ್ನ ದೇಶವನ್ನು ನನ್ನ ಮನಸ್ಸಿಗೆ ನಾನು ತಂದುಕೊಳ್ಳುತ್ತೇನೆ. ನನ್ನ ಊರು ಉದ್ಯಾವರದ ಪ್ರೀತಿ ಆತ್ಮವಿಶ್ವಾಸ ಮತ್ತು ಆಶೀರ್ವಾದವನ್ನು ಕುವೈಟ್ ಗೆ ಕೊಂಡೊಯ್ಯಲಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಉನ್ನತ ಸ್ಥಾನದಲ್ಲಿದೆ. ಕಳೆದ ಬಾರಿಯ ಫಲಿತಾಂಶದಲ್ಲಿ ಕೂಡ ಉಡುಪಿ ನಂಬರ್ ಒನ್ ಸ್ಥಾನದಲ್ಲಿತ್ತು. ಕರಾವಳಿ ಭಾಗದಿಂದ ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ಗೂ ಅನೇಕ ಕಲಾವಿದರನ್ನು ಕಳುಹಿಸಿಕೊಡಲಾಗಿದೆ. ನಮ್ಮ ಊರಿನವರಾದ ಆಡ್ಲಿನ್ ನಮ್ಮ ಕ್ಷೇತ್ರದವರು ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *