ನಾಡಗೀತೆ ಸೀಮಿತ- ಭುವನೇಶ್ವರಿ ಭಾವಚಿತ್ರಕ್ಕೊಂದೇ ಸ್ವರೂಪ: ಸುನೀಲ್ ಕುಮಾರ್

Public TV
2 Min Read

ಉಡುಪಿ: ನಾಡಗೀತೆಯನ್ನು ಸೀಮಿತಗೊಳಿಸುವ, ರಾಜ್ಯಾದ್ಯಂತ ಒಂದೇ ಭುವನೇಶ್ವರಿ ಭಾವಚಿತ್ರ ಇಡುವ ವಿಚಾರಕ್ಕೆ ಸಂಬಂಧಿಸಿದಂತೆ ಶೀಘ್ರವಾಗಿ ಸರ್ಕಾರ ತಾರ್ಕಿಕ ಅಂತ್ಯಕ್ಕೆ ಬರುವ ಸಾಧ್ಯತೆಯಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಗೀತೆ ಎಷ್ಟು ನಿಮಿಷಕ್ಕೆ ಸೀಮಿತ ಮಾಡಬೇಕು ಎಂದು ಚರ್ಚಿಸುತ್ತೇವೆ. ಕನ್ನಡ ಭುವನೇಶ್ವರಿಯ ಫೋಟೋ ಯಾವ ರೀತಿ ಇರಬೇಕು ಎಂಬ ಬಗ್ಗೆಯೂ ಚರ್ಚೆ ಆರಂಭವಾಗಿದೆ. ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಇದಕ್ಕೊಂದು ತಾರ್ಕಿಕ ಅಂತ್ಯ ಮಾಡುತ್ತೇವೆ. ನಾಡಗೀತೆಯ ಸಂಗೀತ ಯಾವ ರೀತಿ ಇರಬೇಕು, ತಾಯಿ ಭುವನೇಶ್ವರಿ ಫೋಟೋ ರಾಜ್ಯಾದ್ಯಂತ ಒಂದೇ ರೀತಿ ಇರಬೇಕು. ಒಂದೊಂದು ಊರಲ್ಲಿ ಒಂದೊಂದು ರೀತಿ ಇದೆ. ಆದಷ್ಟು ಬೇಗ ಈ ಎರಡು ವಿಚಾರ ಇತ್ಯರ್ಥ ಮಾಡಲಿದ್ದೇವೆ ಎಂದರು.

ಜಯಂತಿಗಳಿಗೂ ಬೀಳಲಿದೆ ಕತ್ತರಿ:
ವಿವಿಧ ಜಯಂತಿಗಳ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಕನ್ನಡ ಸಂಸ್ಕೃತಿ ಇಲಾಖೆಯ ಸಭೆ ಇದೆ. ವಿವಿಧ ಜಯಂತಿಗಳನ್ನು ಸೀಮಿತಗೊಳಿಸುವ ಬಗ್ಗೆ ವಿಸ್ತೃತ ಚರ್ಚೆ ಮಾಡಲಿದೆ. ಕನ್ನಡ ಸಂಸ್ಕೃತಿ, ಯುವಜನಸೇವೆ ಮತ್ತು ಶಿಕ್ಷಣ ಇಲಾಖೆ ಒಟ್ಟಾಗಿ ಜಯಂತಿ ಆಚರಣೆ ಮಾಡಬಹುದು. ಹೆಚ್ಚು ಅರ್ಥಪೂರ್ಣ ಜಯಂತಿಗಳ ಆಚರಣೆಗೆ ಒತ್ತು ಕೊಡಲಾಗುವುದು. ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನೂ ಸಂಭ್ರಮದಿಂದ ಆಚರಿಸಬೇಕು. ನಾಡಿನಲ್ಲಿ ದೇಶಭಕ್ತಿಯ ವಾತಾವರಣ ನಿರ್ಮಿಸಲು ಕಾರ್ಯಕ್ರಮ ರೂಪಿಸುತ್ತೇವೆ. ಅಧಿವೇಶನದ ಒಳಗಾಗಿ ಕಾರ್ಯಕ್ರಮದ ರೂಪುರೇಷೆ ಅಂತಿಮ ಸ್ವರೂಪ ಪಡೆಯಲಿದೆ ಎಂದು ಸಚಿವರು ಹೇಳಿದರು.

ನಾರಾಯಣ ಗುರು ನಿಗಮ ಸ್ಥಾಪನೆ:
ಇಂದು ಶ್ರೀ ನಾರಾಯಣ ಗುರುಗಳ ಜಯಂತಿ. ನಾರಾಯಣ ಗುರು ನಿಗಮ ಸ್ಥಾಪನೆಯ ಬಗ್ಗೆ ಹಲವು ಬೇಡಿಕೆಗಳು ಬಂದಿವೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ನಿಗಮದ ಸ್ವರೂಪ ಶೀಘ್ರ ಚರ್ಚಿಸುತ್ತೇವೆ. ವ್ಯಾಪ್ತಿ, ಅನುದಾನ ವಿಚಾರ ನಿರ್ಧರಿಸುತ್ತೇವೆ. ಶೀಘ್ರ ನಿಗಮ ಘೋಷಣೆ ಮಾಡುತ್ತೇವೆ ಎಂದರು.

ವಿದ್ಯುತ್ ಬಿಲ್ ಪ್ರಿಪೇಯ್ಡ್ ಮೀಟರ್ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಈ ಬಗ್ಗೆ ಇಲಾಖೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸ್ಮಾರ್ಟ್ ಮೀಟರ್ ಮತ್ತು ಪ್ರಿಪೇಡ್ ಮೀಟರ್ ಬಗ್ಗೆ ಚರ್ಚೆ ನಡೆಯುತ್ತಿದೆ. ಸಾಧಕ ಬಾಧಕ ಯೋಚಿಸಿ ನಿರ್ಧರಿಸುತ್ತೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *