ಏರ್ ಪೋರ್ಟಲ್ಲಿ ಬಾಂಬ್, ಲಾಕರ್‌ನಲ್ಲಿ ಸೈನೈಡ್ ಬಚ್ಚಿಟ್ಟ ಆದಿತ್ಯ ರಾವ್

Public TV
2 Min Read

ಉಡುಪಿ: ಬಾಂಬರ್ ಆದಿತ್ಯನ ತನಿಖಾ ಪುರಾಣದಲ್ಲಿ ಅಗೆದಷ್ಟು ವಿಷಯಗಳು ಸಿಗ್ತಾಯಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಆದಿತ್ಯನ ವಿಚಾರಣೆ ಇಂದು ತವರು ಜಿಲ್ಲೆಗೆ ಶಿಫ್ಟ್ ಆಗಿದೆ. ಮಂಗಳೂರು ಏರ್ ಪೋರ್ಟಿನಲ್ಲಿ ಬಾಂಬ್ ಇಟ್ಟು ಸೀದಾ ಬಂದದ್ದು ವಡಭಾಂಡೇಶ್ವರದ ಬಲರಾಮ ದೇವರ ಸನ್ನಿಧಿಗೆ ಅಂತ ಆದಿತ್ಯ ಬಾಯಿ ಬಿಟ್ಟಿದ್ದಾನೆ. ಖತರ್ನಾಕ್ ಆದಿತ್ಯ ಪುರಾಣಕ್ಕೆ ಸೈನೈಡ್ ಈಗ ತಗ್ಲಾಕೊಂಡಿದೆ.

ಮಂಗಳೂರು ಏರ್ಪೋರ್ಟಿಗೆ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಸೈಕೋ ಬಾಂಬರ್ ತನಿಖೆ ಶುರುವಾಗಿದೆ. ತನಿಖೆ ವೇಳೆ ಮಾಹಿತಿಗಳನ್ನು ಬಹಿರಂಗ ಮಾಡಿರುವ ಆದಿತ್ಯ, ಹಲವು ಬ್ಯಾಂಕಿನಲ್ಲಿ ಲಾಕರ್ ಗಳನ್ನು ಪಡೆದಿರುವ ಮಾಹಿತಿ ನೀಡಿದ್ದಾನೆ. ತನಿಖಾಧಿಕಾರಿ ಬೆಳ್ಳಿಯಪ್ಪ ಆರೋಪಿಯನ್ನು ಕಡಿಯಾಳಿಯ ಕರ್ಣಾಟಕ ಬ್ಯಾಂಕಿಗೆ ಕರೆತಂದಿದ್ದಾರೆ. ಲಾಕರ್ ನಲ್ಲಿ ಕೆಲ ವಸ್ತುಗಳನ್ನು ಇಟ್ಟ ಬಗ್ಗೆ ಆದಿತ್ಯ ಹೇಳಿದ್ದ. 4ನೇ ಶನಿವಾರ ಬ್ಯಾಂಕ್ ರಜೆ ಇದ್ದರೂ ಬಾಗಿಲು ತೆರೆಸಿ ತನಿಖೆ ಮಾಡಲಾಯ್ತು.

ಲಾಕರ್ ತೆರೆದಾಗ ಬೆಚ್ಚಿಬಿದ್ದ ಪೊಲೀಸರು:
ಸೈಕೋ ಬಾಂಬರ್ ಆದಿತ್ಯ ತನಿಖೆ ಮಾಡುತ್ತಾ ಲಾಕರ್ ನಲ್ಲಿ ಆದಿತ್ಯ ಇಟ್ಟದ್ದ ಬಾಕ್ಸ್ ಗಳನ್ನು ತೆರೆದು ನೋಡಿದಾಗ ಚಿನ್ನದ ಆಭರಣ ಇಡುವ ಬಾಕ್ಸ್ ಪತ್ತೆಯಾಗಿದೆ. ಬಾಕ್ಸ್ ಒಳಗೆ ಅನುಮಾನಾಸ್ಪದ ಪುಡಿ ಪತ್ತೆಯಾಗಿದೆ. ಎಫ್ ಎಸ್ ಎಲ್ ತಜ್ಞರಿಗೆ ಪೊಲೀಸರು ಅದನ್ನು ಒಪ್ಪಿಸಲಿದ್ದಾರೆ.

ಮಂಗಳೂರಿನ ಚಿನ್ನದಂಗಡಿಯಿಂದ ಖರೀದಿಸಿದ್ನಂತೆ ಸೈನೈಡ್:
ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಬ್ಯಾಂಕ್ ಲಾಕರ್ ನಿಂದ ಅನುಮಾನಾಸ್ಪದ ವಸ್ತುಗಳು, ದಾಖಲೆಗಳು, ಸರ್ಟಿಫಿಕೇಟ್ ಗಳನ್ನು ವಶಕ್ಕೆ ಪಡೆದಿದೆ. ವಿಮಾನ ನಿಲ್ದಾಣದಲ್ಲಿ ಸ್ಫೋಟಿಸಲು ವರ್ಷದ ಹಿಂದೆಯಿಂದ ತಯಾರಿ ಮಾಡಿದ್ನಾ ಎಂಬ ಬಗ್ಗೆ ಸಂಶಯ ಶುರುವಾಗಿದೆ. ಯಾಕಂದರೆ ಆದಿತ್ಯ ಲಾಕರ್ ಓಪನ್ ಮಾಡಿ ವರ್ಷ ಒಂದೂವರೆ ಕಳೆದಿದೆ. ಇದನ್ನೂ ಓದಿ: ಮಂಗ್ಳೂರು ಬಾಂಬರ್ ಆದಿತ್ಯ ರಾವ್‌ನನ್ನು ಎನ್‍ಐಎ ವಶಕ್ಕೆ ಪಡೆಯುತ್ತಾ..?

ಹುಸಿ ಬಾಂಬ್ ಕರೆ ಮಾಡಿದ್ದೇ ಉಡುಪಿಯ ಮಲ್ಪೆಯಿಂದ:
ಆರೋಪಿ ಆದಿತ್ಯನನ್ನು ಉಡುಪಿಯಿಂದ ಮಲ್ಪೆಗೆ ಶಿಫ್ಟ್ ಮಾಡಲಾಯ್ತು. ಇಲ್ಲಿನ ವಡಭಾಂಡೇಶ್ವರ ದೇವಸ್ಥಾನದ ಬಳಿ ಮಹಜರಿಗೆ ಕರೆತರಲಾಯ್ತು. ಮಂಗಳೂರು ಏರ್ ಪೋರ್ಟ್ ಬಳಿ ಬಾಂಬ್ ಇಟ್ಟ ಆದಿತ್ಯ ಸೀದಾ ಮಲ್ಪೆಗೆ ಬಂದಿದ್ದಾನೆ. ಇಲ್ಲಿನ ಪೆಟ್ಟಿಗೆ ಅಂಗಡಿಯೊಂದರ ಬಳಿ ಕುಳಿತು ಇಂಡಿಗೋ ವಿಮಾನದಲ್ಲಿ ಮತ್ತೊಂದು ಬ್ಯಾಗ್ ಬಾಂಬ್ ಇಟ್ಟಿದ್ದೇನೆಂದು ಹೇಳಿ ಸಿಮ್ ಕಾರ್ಡ್ ಬಿಸಾಕಿ ಕಾಲ್ಕಿತ್ತಿದ್ದಾನೆ. ಇದನ್ನು ಮಹಜರು ವೇಳೆ ಆದಿತ್ಯನೇ ಒಪ್ಪಿಕೊಂಡಿದ್ದಾನೆ.

ಏರ್ ಪೋರ್ಟ್ ಟರ್ಮಿನಲ್ ಮ್ಯಾನೇಜರ್‍ಗೆ ಆದಿತ್ಯ ಕರೆ ಮಾಡಿದ ನಂತರ ಕಾರ್ಕಳ ಮೂಲದ ಜಿಂ ಮಾಸ್ಟರ್ ಗೆ ಫೋನ್ ಮಾಡಿ ಕಾರ್ಕಳಕ್ಕೆ ಹೊರಟಿದ್ದಾನೆ. ಈ ಎಲ್ಲಾ ಫೋನ್ ಕರೆಗಳು ಮಲ್ಪೆ ಫೋನ್ ಟವರಲ್ಲಿ ದಾಖಲಾಗಿದೆ.

ಆದಿತ್ಯ ರಾವ್ ಏರ್ ಪೋರ್ಟ್ ಬಾಂಬಿಗೆ ಫೈನಲ್ ಟಚ್ ಕೊಟ್ಟ ಕಾರ್ಕಳದ ಕಿಂಗ್ಸ್ ಬಾರಿನಲ್ಲಿ ಆದಿತ್ಯನ ಚಟುವಟಿಕೆಗಳ ಮಹಜರು ನಡೆಯಿತು. ಬಾರ್ ಮಾಲೀಕರು- ಸಿಬ್ಬಂದಿ ಜೊತೆ ಪೊಲೀಸರು ಮಾಹಿತಿ ಪಡೆದರು. ಏರ್ ಪೋರ್ಟ್ ಅಧಿಕಾರಿಗಳ ಕೋಪದಲ್ಲಿ ಬಾಂಬ್ ಫಿಕ್ಸ್ ಮಾಡಿದ ಆದಿತ್ಯ, ಮಾನಸಿಕವಾಗಿ ಕುಗ್ಗಿದ್ದಾಗ ಸೈನೈಡ್ ಜಗಿದು ಸಾಯಲು ರೆಡಿ ಮಾಡಿಕೊಂಡಿದ್ದ ಎಂಬೂದು ಗೊತ್ತಾಗುತ್ತಿದೆ. ಆದಿತ್ಯನ ಪುರಾಣದಲ್ಲಿ ಇನ್ನೆಷ್ಟು ಅಧ್ಯಾಯಗಳಿವೆ ಎಂಬೂದು ಸದ್ಯದ ಕುತೂಹಲ.

Share This Article
Leave a Comment

Leave a Reply

Your email address will not be published. Required fields are marked *