ಮಂಗಳೂರನ್ನು ಶಾಂತಿಯುತವಾಗಿರಲು ಬಿಡಿ: ಯು.ಟಿ ಖಾದರ್

Public TV
1 Min Read

ಉಡುಪಿ: ಯಾವುದೇ ರಾಜಕೀಯ ಪ್ರೇರಿತ ಹೇಳಿಕೆ ಕೊಡುವುದಿಲ್ಲ. ಮಂಗಳೂರನ್ನು ಶಾಂತಿಯುತವಾಗಿ ಇರಲು ಬಿಡಿ. ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ನನ್ನ ಮನವಿ ಇದು ಎಂದು ಮಾಜಿ ಸಚಿವ, ಶಾಸಕ ಯು.ಟಿ ಖಾದರ್ ಹೇಳಿದರು.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಒಂದೇ ವಿಚಾರವನ್ನು ಮತ್ತೆ ಮತ್ತೆ ಹೇಳಬೇಡಿ. ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ವಿಫಲವಾಗಿದೆ. ಅದನ್ನು ಬೇರೆಯವರ ತಲೆಗೆ ಕಟ್ಟುವುದು ಬೇಡ. ಜವಾಬ್ದಾರಿಯುತ ಸ್ಥಾನಕ್ಕೆ ಅದು ಶೋಭೆ ತರುವುದಿಲ್ಲ. ಮುಖ್ಯಮಂತ್ರಿ, ಗೃಹಸಚಿವರ ಜೊತೆ ಚರ್ಚೆ ಮಾಡಿದ್ದೇವೆ. ತನಿಖೆ ಮಾಡುವುದಾಗಿ ಹೇಳಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಹೇಳಿದ್ದಾರೆ ಎಂದು ಖಾದರ್ ಹೇಳಿದರು.

ನನ್ನ ವಿರುದ್ಧ ಬಂದ ಟೀಕೆಗೆ ಪ್ರತಿಕ್ರಿಯಿಸುವುದಿಲ್ಲ. ಈ ಹಿಂದಿನಿಂದಲೂ ನನ್ನ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ. ನನ್ನ ಮೇಲೆ ಬೇರೆ ಬೇರೆ ಆರೋಪ ಮಾಡಿದರು ಹಿಂದೆ ನನ್ನನ್ನು ಜೈಲಿಗೆ ಹಾಕುವ ಪ್ರಯತ್ನ ಮಾಡಿದ್ರು. ನನ್ನ ಕ್ಷೇತ್ರದ ಜನ ವಿಧಾನಸಭೆಯಲ್ಲಿ ಕುಳಿತುಕೊಳ್ಳುವ ಹಾಗೆ ಮಾಡಿದ್ದಾರೆ. ಇವರು ಬಿಸಾಡುವ ಪ್ರತೀ ಕಲ್ಲು ನನ್ನ ಏಳಿಗೆಗೆ ಮೆಟ್ಟಿಲಾಗಲಿ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರು ನನ್ನ ಕ್ಷೇತ್ರದಲ್ಲಿ ಗಲಭೆ ಆಗಿರೋದಾಗಿ ಹೇಳಿದ್ದಾರೆ. ಗೊತ್ತಿದ್ದು ಹೇಳಿದ್ದೋ, ಗೊತ್ತಿಲ್ಲದೆ ಮಾತನಾಡುತ್ತಿದ್ದಾರೋ ಗೊತ್ತಿಲ್ಲ. ನನ್ನ ಕ್ಷೇತ್ರದಲ್ಲಿ ಯಾವುದೇ ಗಲಾಟೆ ಆಗಿಲ್ಲ. ಬಿಜೆಪಿ ಶಾಸಕರಿರುವ ಕ್ಷೇತ್ರದಲ್ಲೆ ಗಲಭೆ ಆಗಿದೆ. ಬೇಕಂತಲೇ ರಾಜಕೀಯ ಹೇಳಿಕೆ ಕೊಡುತ್ತಿದ್ದಾರೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *