ಕರಾವಳಿಯ 3ನೇ ಚಿನ್ನದ ದೇಗುಲ ಶ್ರೀಕೃಷ್ಣಮಠ

Public TV
1 Min Read

ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದ ಗರ್ಭಗುಡಿಯನ್ನು ಚಿನ್ನದ ಗೋಪುರ ಮಾಡುವ ಮೂಲಕ ಕರಾವಳಿಯ ಮೂರನೇ ಚಿನ್ನದ ದೇಗುಲ ಎಂಬ ಕೀರ್ತಿಗೆ ಪಾತ್ರವಾಗಿದೆ.

40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಚಿನ್ನದ ಗೋಪುರದಲ್ಲಿ ಅಷ್ಟಮಠಾಧೀಶರ ಸಮ್ಮುಖದಲ್ಲಿ ಶಿಖರ ಪ್ರತಿಷ್ಠೆ ಮಾಡಿ ಅಭಿಷೇಕ ಮಾಡಲಾಯಿತು. ಪರ್ಯಾಯ ಪಲಿಮಾರು ಶ್ರೀಗಳು ತಮ್ಮ ಪರ್ಯಾಯ ಮಹೋತ್ಸವದ ಕೀರ್ತಿ ಶಾಶ್ವತಗೊಳಿಸಲು ಈ ಮಹತ್ವದ ಯೋಜನೆ ಪೂರೈಸಿದ್ದಾರೆ. ಈ ಮೂಲಕ ಪಲಿಮಾರು ಶ್ರೀಗಳ ಆ ಮಹತ್ವಾಕಾಂಕ್ಷಿ ಯೋಜನೆ ಈಡೇರಿದೆ. ಶ್ರೀ ಕೃಷ್ಣನಿಗೆ ಚಿನ್ನದ ಗೋಪುರ ಸಮರ್ಪಣೆಯಾಗಿದೆ.

ಕಳೆದ 10 ದಿನಗಳಿಂದ ಸುವರ್ಣ ಗೋಪುರ ಸಮರ್ಪಣೆ ಅಂಗವಾಗಿ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಾ ಬಂದಿದ್ದವು. ಚಿನ್ನದ ಶಿಖರ ಪ್ರತಿಷ್ಠೆ ಮಾಡಲಾಯಿತು. ಒಂದು ಸಾವಿರ ಬೆಳ್ಳಿ ಕಲಶಗಳಿಂದ ಗಂಗಾಧಿತೀರ್ಥದ ಅಭಿಷೇಕ ಸಲ್ಲಿಸಲಾಯಿತು. ಪುತ್ತಿಗೆ ಶ್ರೀಗಳು ಹೊರತು ಪಡಿಸಿದಂತೆ ಪೇಜಾವರ ಶ್ರೀಗಳ ಸಹಿತ ಅಷ್ಠಮಠಾಧೀಶರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಚಿನ್ನದ ಕಲಶದಿಂದ ಶಿಖರಕ್ಕೆ ಅಭಿಷೇಕ ಮಾಡಿದರು. ಪಲಿಮಾರು ಶ್ರೀಗಳು ಕೃಷ್ಣನ ಗೋಪುರ ಸುವರ್ಣಮಯವಾಗಿ ಇರಬೇಕೆಂದು ಈ ಯೋಜನೆ ಮಾಡಿದರು. 2500 ಚದರಡಿ ಸುವರ್ಣ ಗೋಪುರಕ್ಕೆ 200 ಕೆ.ಜಿ ತಾಮ್ರ, 800 ಕೆ.ಜಿ ಬೆಳ್ಳಿ, 100 ಕೆ.ಜಿ ಚಿನ್ನವನ್ನು ಬಳಕೆ ಮಾಡಲಾಗಿದೆ. ಸುಮಾರು 40 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಶ್ರೀ ಕೃಷ್ಣನಿಗೆ ಸುವರ್ಣ ತೊಟ್ಟಿಲು, ವಜ್ರ ಕಿರೀಟ, ಸುವರ್ಣ ರಥ ಸಮರ್ಪಿಸಿದರು. ಈಗಿನ ಪರ್ಯಾಯ ಪಲಿಮಾರು ಶ್ರೀಗಳು ತಮ್ಮ ಮೊದಲ ಪರ್ಯಾಯದಲ್ಲಿ ವಜ್ರ ಕವಚ ಅರ್ಪಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *