ಉಡುಪಿ ಅಪಘಾತ: ಬಂಡೆಗೆ ಉಜ್ಜಿಕೊಂಡೇ 50 ಮೀ. ಸಾಗಿದ ಬಸ್- 9 ಸಾವು

Public TV
2 Min Read

-ಬಸ್ ಬಲಭಾಗದಲ್ಲಿ ಕುಳಿತಿದ್ದವರ ಸಾವು
-ಅಪಘಾತಕ್ಕೆ ಕಾರಣ ಏನು?

ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನ ಎಸ್.ಕೆ ಬಾರ್ಡರ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಮೈಸೂರಿನಿಂದ ಪ್ರವಾಸ ಬಂದಿದ್ದ ಒಂಬತ್ತು ಮಂದಿ ಅಪಘಾತದಲ್ಲಿ ಅಸುನೀಗಿದ್ದಾರೆ. 25 ಮಂದಿ ಗಾಯಗೊಂಡಿದ್ದು ಓರ್ವನ ಸ್ಥಿತಿ ಗಂಭೀರವಾಗಿದೆ.

ಕುದುರೆಮುಖದ ಸುಂದರ ಪರ್ವತ ಶ್ರೇಣಿಯ ನಡುವಿನ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ 9 ಮಂದಿ ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತರನ್ನು ಮೈಸೂರಿನ ನಂಜನಗೂಡು ಸಮೀಪದ ಸೆಂಚುರಿ ವೈಟಲ್ ರೆಕಾರ್ಡ್ಸ್ ಕಂಪನಿಯ ನೌಕರರು ಎಂದು ಗುರುತಿಸಲಾಗಿದೆ. ಈ ಕಂಪನಿಯ ನೌಕರರು ಫೆಬ್ರುವರಿ 14ರಂದು ಮೈಸೂರಿನಿಂದ ಪ್ರವಾಸ ಹೊರಟು ಶೃಂಗೇರಿ, ಹೊರನಾಡು, ಕಳಸ ಸುತ್ತಾಡಿದ್ದಾರೆ. ಉಡುಪಿ ಜಿಲ್ಲೆಯ ಮಲ್ಪೆಗೆ ಸಮುದ್ರ ನೋಡಲು ಹೊರಟಿದ್ದರು. ಆದರೆ ಮಾರ್ಗಮಧ್ಯದಲ್ಲೇ ಒಂಬತ್ತು ಮಂದಿಯ ಪ್ರವಾಸ ದುರಂತ ಕಂಡಿದೆ.

ಶನಿವಾರ ಸಂಜೆ ಐದು ಮೂವತ್ತರ ಸುಮಾರಿಗೆ ಖಾಸಗಿ ಮಿನಿ ಬಸ್ ಘಾಟಿಯಿಂದಿಳಿದು ಬರುತ್ತಿದ್ದಾಗ ಎಡಗಡೆಯ ತಡೆಗೋಡೆಗೆ ಗುದ್ದಿದೆ. ಚಾಲಕ ಒಂದೇ ಸಮನೆ ಬಲಕ್ಕೆ ತಿರುಗಿಸಿದ್ದರಿಂದ ಬಂಡೆಗೆ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ 9 ಮಂದಿ ಸ್ಥಳದಲ್ಲೇ ಮೃತರಾಗಿದ್ದಾರೆ. ಘಟನೆಯಲ್ಲಿ 25 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಾರ್ಕಳದ ಸಿಟಿ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆ, ಮಣಿಪಾಲದ ಕೆಎಂಸಿಗೆ ದಾಖಲಿಸಲಾಗಿದೆ. ಗಾಯಗೊಂಡವರ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಸ್‍ಪಿ, ಎಎಸ್‍ಪಿ, ಸರ್ಕಲ್ ಇನ್‍ಸ್ಪೆಕ್ಟರ್ ಗಳ ತಂಡ ಆಸ್ಪತ್ರೆಯಲ್ಲಿ ಮೊಕ್ಕಾಂ ಹೂಡಿದ್ದು ಗಾಯಾಳುಗಳು ಮತ್ತು ಮೃತರ ವಿವರ ಸಂಗ್ರಹಿಸಿ ಕುಟುಂಬಗಳಿಗೆ ಮಾಹಿತಿ ನೀಡುತ್ತಿದ್ದಾರೆ.

ಕರಾವಳಿ ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಭೀಕರ ಅಪಘಾತವಿದು. ನಂಜನಗೂಡಿನ ವೈಟಲ್ ರೆಕಾರ್ಡ್ ಕಂಪನಿಯಲ್ಲಿ ಡಾಟಾ ಎಂಟ್ರಿ ಮಾಡುವ ಯುವಕರ ತಂಡವಿದು. ಪ್ರವಾಸದ ಸಂತೋಷದಲ್ಲಿದ್ದ ಯುವಕ-ಯುವತಿಯರ ತಂಡಕ್ಕೆ ಈ ಅಪಘಾತ ಬರಸಿಡಿಲಿನಂತೆ ಹೊಡೆದಿದೆ. ಬಸ್ ನಲ್ಲಿ ಮೋಜು-ಮಸ್ತಿ ಮಾಡಿಕೊಂಡು ಅಂತ್ಯಕ್ಷರಿ ಹಾಡುತ್ತಾ ಯುವಕರ ತಂಡ ಖುಷಿಖುಷಿಯಾಗಿ ಬರುತ್ತಿದ್ದರು. ಗೌಜು, ಗಲಾಟೆ ತಾರಕಕ್ಕೇರಿದಾಗ ಚಾಲಕನ ಗಮನ ಬೇರೆಡೆಗೆ ಹೋಗಿದೆ ಇದರಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಒಂಬತ್ತು ಮೃತರ ಪೈಕಿ ಎಂಟು ಮಂದಿಯ ಗುರುತು ಪತ್ತೆಯಾಗಿದ್ದು ಮೃತರನ್ನು ಗುರುತಿಸಲಾಗಿದೆ. ಅನಜ್ಞಾ (21,) ರಂಜಿತಾ ಪಿ, ಯೋಗೆಂದ್ರ (21), ರಾಧಾ ರವಿ(22), ಪ್ರೀತಂ ಗೌಡ ಶಾರೋಲ್(21), ಅಡುಗೆ ಸಹಾಯಕ ಬಸವರಾಜ್ (22), ಬಸ್ ಚಾಲಕ ಮಾರುತಿ ಎಂದು ಗುರುತಿಸಲಾಗಿದೆ. ಶವಗಳನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಕಾರ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಭಾನುವಾರ ಮೈಸೂರಿನಿಂದ ಮೃತರ ಕುಟುಂಬದವರು ಬಂದ ನಂತರ ಶವ ಪರೀಕ್ಷೆ ನಡೆಸಿ ಹಸ್ತಾಂತರಿಸಲಾಗುತ್ತದೆ. ಎಸ್.ಕೆ.ಬಾರ್ಡರ್ ಬಳಿಯ ಅಬ್ಬಾಸ್ ಕಟ್ಟಿಂಗ್ ಬಳಿ ಅಪಘಾತ ನಡೆದಿದ್ದು ಈ ಭಾಗದಲ್ಲಿ ತುಂಬಾ ಕಿರಿದಾದ ತಿರುವಿನ ರಸ್ತೆ ಅಪಘಾತಕ್ಕೆ ಕಾರಣ ಎನ್ನುವುದು ಸ್ಥಳೀಯರ ಆಕ್ರೋಶವಾಗಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವಂತೆ ಅಪಘಾತ ಸ್ಥಳದಲ್ಲಿದ್ದ ಬಸ್ ತೆರವು ಮಾಡಲಾಗಿದೆ. ಕಂಪನಿ ಎಚ್.ಆರ್. ಸೇರಿದಂತೆ 20 ವರ್ಷದೊಳಗಿನ ತರುಣ-ತರುಣಿಯರು ಬಸ್ ನ ಪ್ರಯಾಣಿಕರಾಗಿದ್ದರು. ಇದೊಂದು ಧಾರುಣ ಘಟನೆ ಮಲೆನಾಡು ಕರಾವಳಿ ಭಾಗದ ಜನರನ್ನು ಬೆಚ್ಚಿಬೀಳಿಸಿದೆ. ಭೀಕರ ಘಟನೆಗೆ ನಿಖರ ಕಾರಣ ತನಿಖೆಯಿಂದ ಗೊತ್ತಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *