ನುಸುಳುಕೋರರು ಪಾಕಿಸ್ತಾನ, ಬಾಂಗ್ಲಾಕ್ಕೆ ತೊಲಗಿ- ಕಲ್ಲಡ್ಕ ಪ್ರಭಾಕರ ಭಟ್

Public TV
2 Min Read

– ಭಾರತೀಯರಿಗೆ ಸಿಎಎಯಿಂದ ಸಮಸ್ಯೆಯಿಲ್ಲ

ಉಡುಪಿ: ಪೌರತ್ವ ಕಾನೂನು ಬಂದಿರುವುದು ಪಾಕಿಸ್ತಾನದ ನುಸುಳುಕೋರರ ವಿರುದ್ಧ. ಭಾರತೀಯ ಮುಸಲ್ಮಾನರಿಗೆ ಪೌರತ್ವ ಕಾನೂನಿನಿಂದ ಸಮಸ್ಯೆಯಾಗಲ್ಲ ಎಂದು ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

ಉಡುಪಿಯ ಕಟಪಾಡಿಯಲ್ಲಿ ಪೌರತ್ವ ಕಾಯ್ದೆ ಕುರಿತು ಸಮರ್ಥನಾ ಸಮಾವೇಶದಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಮಾತಾಡಿದ ಅವರು, ನುಸುಳುಕೋರರಾಗಿ ಬಾಂಗ್ಲಾ, ಅಫ್ಘಾನ್, ಪಾಕ್‍ನಿಂದ ಕೆಲ ಪಾಪಿ ಮುಸಲ್ಮಾನರು ಬಂದಿದ್ದಾರೆ. ದೇಶದ ಅರಾಜಕತೆಗೆ ಅವರೇ ಕಾರಣವಾಗಿದ್ದಾರೆ. ನಾವು ಈಗಾಗಲೇ ದೇಶದ್ರೋಹಿಗಳಿಗೆ ಎಲ್ಲಾ ದಾಖಲೆ ಕೊಟ್ಟಿದ್ದೇವೆ. ಅದನ್ನು ಹಿಂಪಡೆದು ನಮ್ಮಲ್ಲಿ ಹುಟ್ಟಿ, ಸಂಕಷ್ಟದಲ್ಲಿದ್ದವರಿಗೆ ನಾವು ಪೌರತ್ವ ಕೊಡುತ್ತೇವೆ ಹೊರತು, ಇಲ್ಲಿನವರ ಪೌರತ್ವ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಎ, ಎನ್.ಆರ್.ಸಿ, ಎನ್.ಪಿ.ಆರ್ ನಿಂದ ಭಾರತೀಯ ಮುಸಲ್ಮಾನರಿಗೆ ಯಾವುದೇ ಸಮಸ್ಯೆ ಇಲ್ಲ. ದಾಖಲೆ ಇಲ್ಲದವರು ಪಾಕ್‍ನಲ್ಲಿ ಜಮೀನು ಖರೀದಿಸಿ ಎಂದು ಸಲಹೆ ನೀಡಿದರು. ಎಲ್ಲರ ಜೊತೆ ಎಲ್ಲರಂತೆ ಬದುಕುವುದಾದರೆ ಬದುಕಿ. ಆಗದಿದ್ದರೆ ನಿಮ್ಮ ನೆಲ ನಿಮಗಿದೆ. ದಾಖಲೆ ಕೇಳುವಾಗ ಹೆಸರು ಹೇಳುವುದಿಲ್ವಾ? ಅಪ್ಪ ಯಾರೆಂದು ನಿಮಗೆ ಗೊತ್ತಿಲ್ವಾ? ಭಾರತ ಅಂದ್ರೆ ಛತ್ರ ಅಲ್ಲ. ಭಾರತ ಪವಿತ್ರ ನೆಲ ಇಲ್ಲಿ ನೆಲೆಸಲು ಪೌರತ್ವ ಬೇಕು ಎಂದು ಗುಡುಗಿದರು.

ಮಂಗಳೂರು ಗೋಲಿಬಾರ್ ಪ್ರಕರಣದಲ್ಲಿ ಇಬ್ಬರು ಭಯೋತ್ಪಾದಕರು ಪ್ರಾಣ ಕಳೆದುಕೊಂಡರು. ಕಮಿಷನರ್ ಡಾ. ಹರ್ಷಗೆ ಅಭಿನಂದನೆ. ಪರಿಸ್ಥಿತಿ ಕೈಮೀರಿತ್ತು. ಗೋಲಿಬಾರ್ ಮಾಡದಿದ್ದರೆ ದೇಶದಲ್ಲಿ ಮುಸ್ಲಿಂ ಅಟ್ಟಹಾಸ ನಡೆಯುತ್ತಿತ್ತು. ಪೌರತ್ವ ಕಾಯ್ದೆಗೆ ಎಲ್ಲರೂ ಒಳಗಾಗಬೇಕು. ದಾಖಲೆ ಇಲ್ಲದವರು ಹೊರಗೆ ನಡೆಯಿರಿ. ಪಾಕಿಸ್ತಾನ, ಬಾಂಗ್ಲಾ ಮತ್ತಿತರ ದೇಶದಲ್ಲಿ ಐದು ಸೈಟ್ ತೆಗೆದುಕೊಳ್ಳಿ ಎಂದರು.

ಭಾರತ ಮೃತ್ಯುಂಜಯ ದೇಶ. ಮೋದಿ, ಅಮಿತ್ ಶಾ ರಂತಹ ಜನ ಹುಟ್ಟಿ ಬರುತ್ತಲೇ ಇರುತ್ತಾರೆ. ಭಾರತ ಸೂಪರ್ ಪವರ್ ಆಗೋದು ಬೇಡ. ಭಾರತ ವಿಶ್ವ ಗುರು ಆದರೆ ಸಾಕು. ನಮ್ಮ ಸಂಸ್ಕೃತಿ, ವಿಚಾರ, ಆಚರಣೆಗಳ ಪಾಲನೆಯಿಂದ ತನ್ನಿಂದ ತಾನೇ ಭಾರತ ವಿಶ್ವಗುರು ಆಗುತ್ತದೆ ಎಂದರು. ಹಿಂದೂ, ಮುಸಲ್ಮಾನ, ಕ್ರೈಸ್ತ, ಜೈನ, ಪಾರಸಿ, ಸಿಖ್ ಹೀಗೆ ದೇಶದ ಪ್ರತಿಯೊಬ್ಬ ನೋಂದಣಿ ಮಾಡಲೇಬೇಕು. ದೇಶದ ನುಸುಳುಕೋರರು ಭಾರತದೊಳಗೆ ಉಳಿಯಲು ಸಾಧ್ಯವಿಲ್ಲ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *