ಬಡ ಮೀನುಗಾರರಿಂದ ಹಣ ಕಿತ್ಕೊಂಡು ಜಿಎಸ್‍ಟಿ ಮನ್ನಾ ಮಾಡ್ಸಿಕೊಂಡ ಫಿಶ್ ಫ್ಯಾಕ್ಟರಿಗಳು

Public TV
3 Min Read

ಉಡುಪಿ: ಮೋದಿ ಸರಕಾರದ ಜಿಎಸ್‍ಟಿ ಮತ್ತು ನೋಟ್ ಬ್ಯಾನ್ ಅತೀ ಹೆಚ್ಚು ಚರ್ಚೆಯಾದ ಎರಡು ವಿಚಾರ. ಈ ನಡುವೆ ಬಡ ಮೀನುಗಾರರನ್ನು ವರ್ಷಗಟ್ಟಲೆ ಸತಾಯಿಸಿ, ರಾಜ್ಯ ಕೇಂದ್ರ ಸರ್ಕಾರಕ್ಕೆ ತೆರಿಗೆಯನ್ನೇ ಕಟ್ಟದೆ 600 ಕೋಟಿ ರೂಪಾಯಿಗಳನ್ನು ಫಿಶ್ ಫ್ಯಾಕ್ಟರಿಗಳು ಮನ್ನಾ ಮಾಡಿಸಿಕೊಂಡಿವೆ.

ಜಿಎಸ್‍ಟಿಯಿಂದ ಕಂಪನಿಗಳು ಜನ ಸಾಮಾನ್ಯರನ್ನು ಮಾತ್ರ ಸಿಕ್ಕಾಪಟ್ಟೆ ಸತಾಯಿಸುತ್ತಿದೆ. ಇದೊಂತರಾ ಡಿಫರೆಂಟ್ ಕೇಸ್. ಅರಬ್ಬೀ ಸಮುದ್ರ ತೀರದಲ್ಲಿ ಕಾರ್ಯಾಚರಿಸುತ್ತಿರುವ ನಾಲ್ಕು ರಾಜ್ಯದ ಫಿಶ್ ಫ್ಯಾಕ್ಟರಿಗಳು ಇದಕ್ಕೆ ಸರಿಯಾದ ಉದಾಹರಣೆ. ಲೆಕ್ಕ ಪ್ರಕಾರ 58 ಫಿಶ್ ಮಿಲ್ ಗಳು ಜಿಎಸ್‍ಟಿ ಅಡಿಯಲ್ಲಿ 2017ರಿಂದ ಈವರೆಗೆ 600 ಕೋಟಿ ರೂಪಾಯಿ ತೆರಿಗೆಯನ್ನು ಸರ್ಕಾರಕ್ಕೆ ಕಟ್ಟಬೇಕಿತ್ತು. ಆದರೆ ಚಿಕ್ಕಾಸೂ ಕಟ್ಟದೆ, ತೆರಿಗೆ ಮನ್ನಾ ಮಾಡಲು ಒತ್ತಾಯಿಸಿ ಫ್ಯಾಕ್ಟರಿಗಳು ಒಂದು ತಿಂಗಳು ಮುಚ್ಚಿತ್ತು. ಫ್ಯಾಕ್ಟರಿ ಒಂದು ತಿಂಗಳು ಮೀನು ಖರೀದಿಸದೆ ಸಾವಿರಾರು ಮೀನುಗಾರರ ಕುಟುಂಬ ಬೀದಿಗೆ ಬರಲು ಸಿದ್ಧವಾಗಿತ್ತು. ಉಡುಪಿಯ ಸ್ಥಳೀಯ ಜನ ನಾಯಕರು ಮತ್ತು ಪೇಜಾವರಶ್ರೀ ಒತ್ತಡದಿಂದ ರಾಜ್ಯದ 300, ದೇಶದ 600 ಕೋಟಿ ರೂಪಾಯಿ ಫಿಶ್ ಫ್ಯಾಕ್ಟರಿಗಳ ಜಿಎಸ್‍ಟಿ ಮನ್ನಾ ಆಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಈ ನಿರ್ಧಾರ ಕೈಗೊಂಡಿದ್ದಾರೆ.

ಸಿಎಂ ಯಡಿಯೂರಪ್ಪ ಸಂಸದೆ ಶೋಭಾ ಕರಂದ್ಲಾಜೆ, ಎರಡು ಜಿಲ್ಲೆಗಳ ಶಾಸಕರು, ಪೇಜಾವರ ಶ್ರೀಗಳ ಒತ್ತಡದಿಂದ ಫಿಶ್ ಫ್ಯಾಕ್ಟರಿಗಳ ಸಚಿವೆ ನಿರ್ಮಲಾ ಸೀತಾರಾಮನ್ ಜಿಎಸ್‍ಟಿ ಮನ್ನಾ ಮಾಡಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ಇದರಿಂದ 600 ಕೋಟಿ ರೂಪಾಯಿ ನಷ್ಟವಾಗಿದೆ. ಮನುಷ್ಯತ್ವ ಕನಿಕರ ಇದ್ದರೆ ಸಾವಿರಾರು ಮೀನುಗಾರರಿಂದ ಕಸಿದುಕೊಂಡ ಕೋಟ್ಯಂತರ ರೂಪಾಯಿಯನ್ನು ಫಿಶ್ ಫ್ಯಾಕ್ಟರಿಗಳು ಚುಕ್ತಾ ಮಾಡಲಿ. ಈ ಮೂಲಕ ಸ್ವಾಭಿಮಾನ ಪ್ರದರ್ಶಿಸಲಿ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

2017ರಿಂದ ಇಲ್ಲಿಯವರೆಗೆ ರಾಜ್ಯದ 22 ಫಿಶ್ ಫ್ಯಾಕ್ಟರಿಗಳು ಬಡ ಮೀನುಗಾರರನ್ನು ಶೋಷಿಸಿದೆ. ಜಿಎಸ್‍ಟಿ ಗುಮ್ಮ ತೋರಿಸಿ ತಮ್ಮ ಫ್ಯಾಕ್ಟರಿಗೆ ಮೀನು ಸರಬರಾಜು ಮಾಡುವ ಕಡಲ ಮಕ್ಕಳಿಗೆ ಪ್ರತಿ ಕೆಜಿ ಮೀನಿಗೆ 4 ರೂ.ಗಳಷ್ಟು ಕಡಿಮೆ ಹಣ ಪಾವತಿ ಮಾಡಿ ಮೀನು ಖರೀದಿಸಿವೆ. ಈ ಮೊತ್ತವೇ ಸುಮಾರು 25 ರಿಂದ 30 ಕೋಟಿ ರೂ.ನಷ್ಟು ಆಗುತ್ತದೆ. ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ಮುನ್ನೂರು ಕೋಟಿ ರೂ.ನಷ್ಟು ತೆರಿಗೆ ಮನ್ನಾ ಮಾಡಿದ್ದರಿಂದ ಫಿಶ್ ಫ್ಯಾಕ್ಟರಿಗಳಿಗೆ ಭಾರೀ ಲಾಭವಾಗಿದೆ. ಬಂದ ಲಾಭದಲ್ಲಿ ಎರಡೂವರೆ ವರ್ಷ ಮೀನುಗಾರರಿಂದ ಕಿತ್ತುಕೊಂಡಿದ್ದ ಪ್ರತಿ ಕೆ.ಜಿಯ ನಾಲ್ಕು ರೂ. ವನ್ನು ಫ್ಯಾಕ್ಟರಿಗಳು ಈಗ ಮರುಪಾವತಿ ಮಾಡಬೇಕು ಎಂದು ಮೀನುಗಾರರು ಒತ್ತಾಯ ಮಾಡುತ್ತಿದ್ದಾರೆ.

ಫಿಶ್ ಫ್ಯಾಕ್ಟರಿ ಮಾಲೀಕರು ಎಲ್ಲರೂ ಶ್ರೀಮಂತರೇ ಇದ್ದಾರೆ. ಜಿಎಸ್ ಟಿಯನ್ನು ಬಡ ಮೀನುಗಾರರ ಮೇಲೆ ಹೊರಿಸಿ ತಾವೂ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟದೆ ಈಗ ಲಾಭ ಮಾಡಿಕೊಳ್ಳುವುದು ಸರಿಯಲ್ಲ. ಸರ್ಕಾರ 600 ಕೋಟಿ ಕಡಿತ ಮಾಡಿದೆ. ಯೂನಿಯನ್ ನವರು ಮತ್ತೆ ಸಭೆ ಸೇರಿ ಒಂದೊಂದು ಕೆಜಿ ಮೀನಿಗೆ 3 ರಿಂದ ನಾಲ್ಕು ರೂ.ವರೆಗೆ ಹಣ ವಾಪಸ್ ಮಾಡಲಿ ಎಂದು ಮೀನುಗಾರರ ಮುಖಂಡ ಸತೀಶ್ ಕುಂದರ್ ಒತ್ತಾಯಿಸಿದ್ದಾರೆ.

10 ದಿನಗಳ ಆಳಸಮುದ್ರ ಮೀನುಗಾರಿಕೆಯಲ್ಲಿ ಕೊಳೆತ ಮೀನು, ಡ್ಯಾಮೇಜ್ ಆದ ಮೀನು, ಕೆಲ ಮೀನಿನ ತಲೆಯಿಂದ ಎಣ್ಣೆ- ಗೊಬ್ಬರ, ಪೌಡರ್ ತಯಾರು ಮಾಡಿ ಶೇ. 200ರಷ್ಟು ಲಾಭವನ್ನು ಫಿಶ್ ಫ್ಯಾಕ್ಟರಿಗಳು ಗಳಿಸುತ್ತವೆ. ಆದರೆ ಶೇ.5 ರಷ್ಟು ಜಿಎಸ್‍ಟಿಯನ್ನು ಸರ್ಕಾರಕ್ಕೆ ಕಟ್ಟದೆ ವಂಚಿಸಿದ್ದು ಎಷ್ಟು ಸರಿ ಎಂಬುದು ಹಲವರ ಪ್ರಶ್ನೆಯಾಗಿದೆ. ಇಷ್ಟಕ್ಕೂ ಬಡ ಮೀನುಗಾರರನ್ನು ವಂಚಿಸಿ ಕಿತ್ತುಕೊಂಡ ಹಣ ಮರುಪಾವತಿ ಆಗದಿದ್ದರೆ ಶ್ರೀಮಂತ ಉದ್ಯಮಿಗಳ ವಿರುದ್ಧ ಕಡಲಮಕ್ಕಳು ಹಿಡಿಶಾಪ ಹಾಕೋದು ಗ್ಯಾರಂಟಿ.

Share This Article
Leave a Comment

Leave a Reply

Your email address will not be published. Required fields are marked *