ವಿದೇಶದಿಂದ ಬಂದವರ ಮೇಲೆ ನಿಗಾ: ಉಡುಪಿ ಡಿಎಚ್‍ಒ

Public TV
2 Min Read

ಉಡುಪಿ: ಜಿಲ್ಲೆಗೆ ವಿದೇಶದಿಂದ ಬಂದ ವ್ಯಕ್ತಿಗಳು, ಆರೋಗ್ಯ ಇಲಾಖೆಯ ಸ್ಥಳೀಯ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರ ಬಳಿ ತಾವು ವಿದೇಶದಿಂದ ಬಂದಿರುವ ಬಗ್ಗೆ ಸ್ವಯಂ ಘೋಷಣೆ ಮಾಡಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಕುರಿತ ಕಾರ್ಯದಲ್ಲಿ ಸಹಕರಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ವಿನಂತಿಸಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ನಡೆದ ಕೊರೊನಾ ಮುನ್ನೆಚ್ಚರಿಕೆ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಫೆಬ್ರವರಿ 25ರ ಬಳಿಕ ವಿದೇಶಗಳಿಂದ ಆಗಮಿಸಿರುವ ಸಾರ್ವಜನಿಕರು ಸ್ವಯಂ ಘೋಷಣೆ ಮಾಡಿಕೊಳ್ಳುವಂತೆ ಹಾಗೂ ಸಾರ್ವಜನಿಕರು ವಿದೇಶಗಳಿಂದ ಬಂದ ವ್ಯಕ್ತಿಗಳ ಬಗ್ಗೆ ಮಾಹಿತಿಯಿದ್ದಲ್ಲಿ ಆರೋಗ್ಯ ಇಲಾಖೆಗೆ ತಿಳಿಸುವ ಮೂಲಕ ಕೊರೊನಾ ನಿಯಂತ್ರಿಸಲು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ವಿನಂತಿಸಿದರು. ಶಂಕಿತ ವ್ಯಕ್ತಿಯ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದರು.

ವಿದೇಶಗಳಿಗೆ ಭೇಟಿ ನೀಡಿ ವಾಪಸಾದವರು 14 ದಿನಗಳವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಮನೆಯಲ್ಲಿಯೆ ಪ್ರತ್ಯೇಕವಾಗಿದ್ದು, ರೋಗದ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಸಹಕರಿಸಬೇಕು. ಕೊರೊನಾ ಸೋಂಕಿನ ಸ್ಯಾಂಪಲ್ ಪರೀಕ್ಷೆಗಾಗಿ ಈಗಾಗಲೇ ಬೆಂಗಳೂರಿನಲ್ಲಿರುವ 2 ಲ್ಯಾಬ್‍ಗಳ ಜೊತೆಗೆ ಹೊಸದಾಗಿ ಶಿವಮೊಗ್ಗ, ಮೈಸೂರು ಮತ್ತು ಹಾಸನದಲ್ಲಿ ತಲಾ ಒಂದು ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಬಗ್ಗೆ ಸುಳ್ಳು ಸುದ್ದಿ ಅಥವಾ ವದಂತಿಗಳನ್ನು ಹರಡಬಾರದು. ಇಂತಹ ಸುದ್ದಿಗಳನ್ನು ಹರಡುವವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೊರೊನಾ ಶಂಕಿತ ವ್ಯಕ್ತಿಯ ಗುರುತು, ವಿಳಾಸ ಅಥವಾ ಇನ್ನಿತರ ವೈಯಕ್ತಿಕ ಮಾಹಿತಿಯನ್ನು ಸಹ ಮಾಧ್ಯಮದಲ್ಲಿ ಬಹಿರಂಗಪಡಿಸದಂತೆ ಡಿಹೆಚ್‍ಓ ತಿಳಿಸಿದರು. ವಿದೇಶದಿಂದ ಬಂದ ವ್ಯಕ್ತಿಗಳಲ್ಲಿ ತೀವ್ರ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ಸಮಸ್ಯೆಯಿದ್ದಲ್ಲಿ ಜಿಲ್ಲಾ ಸವೇಕ್ಷಣಾ ಘಟಕದ ದೂ.ಸಂ 0820-2525561ಗೆ ಮಾಹಿತಿ ನೀಡಬೇಕು. ಈ ಕುರಿತು ವೈದ್ಯಕೀಯ ಪರೀಕ್ಷೆಗೆ ಆಗಮಿಸುವಾಗ ಖಾಸಗಿ ವಾಹನ ಅಥವಾ ಬಸ್ ಮುಂತಾದ ಸಾರ್ವಜನಿಕ ವಾಹನ ಬಳಸಬಾರದು. ಆರೋಗ್ಯ ಇಲಾಖೆಯಲ್ಲಿ ಇದಕ್ಕಾಗಿಯೇ ಪ್ರತ್ಯೇಕ ಸುಸಜ್ಜಿತ ವಾಹನವಿದ್ದು, ಆ ವಾಹನವನ್ನು ಶಂಕಿತರ ಮನೆಗೆ ಕಳುಹಿಸಿ ಅದೇ ವಾಹನದಲ್ಲಿ ಕರೆ ತಂದು ಅಗತ್ಯ ಪರೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *