ಬ್ರಾಹ್ಮೀ ಮುಹೂರ್ತದಲ್ಲಿ ದೇವರ ಮುಂದೆ ತಲೆಬಾಗಿ ನಿಲ್ಲುತ್ತೆ ಗೋವು

Public TV
1 Min Read

ಉಡುಪಿ: ಜನ ದೇವರನ್ನು ಭಕ್ತಿಯಿಂದ ನೋಡುತ್ತಾರೆ. ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಉಡುಪಿಯಲ್ಲಿ ಜನರ ಜೊತೆ ದನವೂ ದೇವರಿಗೆ ತಲೆ ತಗ್ಗಿಸಿ ಪೂಜೆ ಮಾಡಿದೆ.

ಉಡುಪಿಯ ಪ್ರಸಿದ್ಧ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದಲ್ಲಿ ಹಸುವೊಂದು ನಿತ್ಯವೂ ಪೂಜೆ ಸಲ್ಲಿಸುತ್ತಿದೆ. ಆಶ್ಚರ್ಯ ಆದ್ರೂ ಸತ್ಯ. ಹಸು ನಿತ್ಯವೂ ಬ್ರಾಹ್ಮಿ ಮುಹೂರ್ತದಲ್ಲಿಯೇ ನಡೆಯುವ ಪೂಜೆಯ ಸಂದರ್ಭ ಶ್ರೀ ನಾಗ ದೇವರ ಕಟ್ಟೆಯ ಎದುರಿನ ಮೆಟ್ಟಿಲಿನ ಮಧ್ಯದಲ್ಲಿ ಶಿರಬಾಗಿ ನಮಿಸಿ ನಿಲ್ಲುತ್ತದೆ. ಕಳೆದ ಹಲವು ದಿನಗಳಿಂದಲೂ ನಡೆಯುತ್ತಿರುವ ಈ ವಿದ್ಯಮಾನ ನೋಡಿದ ದೇಗುಲಕ್ಕೆ ಆಗಮಿಸುವ ಭಕ್ತರು ಬೆರಗಾಗಿದ್ದಾರೆ.

ಪ್ರತಿ ದಿನ ಮುಂಜಾನೆ ದೇವಳದ ಶ್ರೀನಾಗ ದೇವರ ಕಟ್ಟೆಯ ಎದುರು ಬಂದು ನಿಲ್ಲುವ ಈ ಗೋವು ಅಪರಾಹ್ನದ ದೇಗುಲದಲ್ಲಿ ನಡೆಯುವ ಮಹಾಪೂಜೆಯವರೆಗು ಕೂಡ ನಿಂತ ಸ್ಥಳವನ್ನು ಬಿಟ್ಟು ತೆರಳದೇ ಇರುವುದು ಭಕ್ತರ ಆಶ್ಚರ್ಯಕ್ಕೆ ಕಾರಣವಾಗಿದೆ. ಜನ ಮಾಡೋದನ್ನು ನೋಡಿ ಹೀಗೆ ಮಾಡುತ್ತಿರಬಹುದಾ? ಅಥವಾ ವಿಶೇಷ ಶಕ್ತಿಯೊಂದು ಇದರ ಹಿಂದೆ ಅಡಗಿದ್ಯಾ ಅನ್ನೋದು ಸದ್ಯ ಕುತೂಹಲದ ವಿಷಯ.

ಕುಂಭಾಸಿ ದೇವಸ್ಥಾನದ ಭಕ್ತ ದಿವಾಕರ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕೆಲವು ಮೂಕಪ್ರಾಣಿಗಳು ಮನುಷ್ಯರು ಮಾಡುವುದನ್ನು ಅನುಕರಣೆ ಮಾಡುತ್ತವೆ. ಆದರೆ ಗೋವು ಆ ಜಾತಿಗೆ ಸೇರಿಲ್ಲ. ಗೋವು ಅನುಕರಣೆ ಮಾಡುವ ನಿದರ್ಶನ ನನ್ನ ಅನುಭವದ ಪ್ರಕಾರ ಇದೇ ಮೊದಲು. ಕುಂಭಾಸಿ ಸಿದ್ಧಿವಿನಾಯಕ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೇವರು. ಪ್ರತಿದಿನ ಇಲ್ಲಿ ದನ ದೇವರಿಗೆ ಭಕ್ತಿಯನ್ನು ಅರ್ಪಿಸುತ್ತಿದೆ. ಇದರಿಂದ ಕುಂಭಾಸಿ ಗಣಪತಿ ಮೂಕಪ್ರಾಣಿಗಳಿಗೂ ಒಲಿದಿದ್ದಾನೆ ಎಂಬೂದು ಭಕ್ತನಾಗಿ ನನ್ನ ಅಭಿಪ್ರಾಯ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *