ಏಪ್ರಿಲ್ 1ಕ್ಕೆ ಎನ್‍ಹೆಚ್‍ಎಂ ಸಿಬ್ಬಂದಿಗೆ ರಜೆ ಕೊಟ್ರೆ ಆರೋಗ್ಯ ಇಲಾಖೆಯಲ್ಲಿ ಅಲ್ಲೋಲ ಕಲ್ಲೋಲ

Public TV
1 Min Read

ಉಡುಪಿ: ಕೊರೊನಾ ವೈರಸ್ ರಾಜ್ಯದಲ್ಲಿ ರಣಕೇಕೆ ಹಾಕುತ್ತಿದೆ. ಈ ಸಂದಿಗ್ಧ ಸಂದರ್ಭದಲ್ಲಿ ನ್ಯಾಶನಲ್ ಹೆಲ್ತ್ ಮಷೀನ್‍ನ(ಎನ್‍ಎಚ್‍ಎಂ) 23,700 ಸಿಬ್ಬಂದಿಗೆ ರಜೆ ನೀಡುತ್ತಿದೆ. ಕೊರೊನಾ ಎಮರ್ಜೆನ್ಸಿ ಇದ್ದರೂ ಇಲಾಖೆಗೆ ರಿನಿವಲ್ ಮಾಡೋದೆ ಮುಖ್ಯವಾಯ್ತಾ ಎಂಬ ಪ್ರಶ್ನೆ ಹುಟ್ಟುಕೊಂಡಿದೆ.

ರಾಜ್ಯದಲ್ಲಿ ಕೊರೊನಾ ವೈರಸ್ ಆತಂಕದ ಸೃಷ್ಟಿಸಿದೆ. ಇದೇ ಸಂದರ್ಭವನ್ನು ಉಪಯೋಗಿಸಿಕೊಳ್ಳುತ್ತಿರುವ ಎನ್‍ಹೆಚ್‍ಎಂ ಸಿಬ್ಬಂದಿ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಕೆಲಸಕ್ಕೆ ಬರಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ.

ಉಡುಪಿಯಲ್ಲಿ ಎನ್‍ಎಚ್‍ಎಂ ಕೈಕೆಳಗೆ 412 ಮಂದಿ ಕೆಲಸ ಮಾಡುತ್ತಿದ್ದಾರೆ. ಈ 412 ಮಂದಿ ಏಪ್ರಿಲ್ 1ಕ್ಕೆ ರಜೆ ಹಾಕಲು ತೀರ್ಮಾನಿಸಿದ್ದಾರೆ. ಸರ್ಕಾರದ ಮುಂದೆ ಹಲವಾರು ತಿಂಗಳಿಂದ ನಮ್ಮ ಬೇಡಿಕೆಗಳನ್ನು ಇಡುತ್ತಿದ್ದೇವೆ. ಆದರೆ ಆರೋಗ್ಯ ಇಲಾಖೆ ಅಥವಾ ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಕೊಟ್ಟಿಲ್ಲ ಎಂದು ಎನ್‍ಎಚ್‍ಎಂನ ಮುಖಂಡರು ಹೇಳಿದ್ದಾರೆ.

ಒಟ್ಟು ಎನ್‍ಎಚ್‍ಎಂನ 23,700 ಸಿಬ್ಬಂದಿ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಕಳೆದ 15 ದಿನದಿಂದ ಕೈಜೋಡಿಸಿದ್ದಾರೆ. ಆದರೆ ನಮ್ಮ ಸೇವೆಗೆ ಸರಿಯಾದ ಮಾನ್ಯತೆ ಸಿಗುತ್ತಿಲ್ಲ. ನಮಗೆ ಸರಿಯಾಗಿ ಸಂಬಳ ಆಗುತ್ತಿಲ್ಲ. ಸವಲತ್ತುಗಳ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತಿಲ್ಲ ಎಂಬುದು ಎನ್‍ಎಚ್‍ಎಂನ ರಾಜ್ಯಾಧ್ಯಕ್ಷ ವಿಶ್ವಾರಾಧ್ಯ ಅವರ ಆರೋಪವಾಗಿದೆ.

ಏಪ್ರಿಲ್ 1ರಂದು ಬ್ರೇಕ್ ಕೊಟ್ಟು ಮತ್ತೆ ನಮ್ಮನ್ನು ಕೆಲಸಕ್ಕೆ ತೆಗೆದುಕೊಂಡರೆ ನಾವು ಹೊಸದಾಗಿ ಸೇವೆಗೆ ಬಂದಂತೆ ಆಗುತ್ತದೆ. ಸರ್ಕಾರದ ಸವಲತ್ತುಗಳಿಂದ ತಪ್ಪಿಸಲು ಈ ತರದ ಪ್ಲಾನ್ ಮಾಡಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಎನ್‍ಎಚ್‍ಎಂ ಕಾರ್ಯಕರ್ತರೊಬ್ಬರು ನೋವು ತೋಡಿಕೊಂಡಿದ್ದಾರೆ.

ನರ್ಸ್, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಆಯುಷ್ ಡಾಕ್ಟರ ಕೊರೊನಾ ವೈರಸ್ ತಡೆಗಟ್ಟಲು ಮನೆಮನೆಗೆ ಹೋಗಿ ಜಾಗೃತಿ ಮೂಡಿಸುತ್ತಿದ್ದಾರೆ. ಇಷ್ಟು ಸಂಖ್ಯೆಯ ಜನ ಒಂದೇ ದಿನ ರಜೆ ತೆಗೆದುಕೊಂಡರೆ ಇಡೀ ರಾಜ್ಯದ ವೈದ್ಯಕೀಯ ಪರಿಸ್ಥಿತಿ ವ್ಯವಸ್ಥೆಗಳು ಮೇಲೆ ಕೆಳಗಾಗುತ್ತದೆ ಎಂಬುದು ಸಾರ್ವಜನಿಕರ ಆತಂಕವಾಗಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಆರೋಗ್ಯ ಸಚಿವರಾದ ಶ್ರೀರಾಮುಲು, ವೈದ್ಯಕೀಯ ಸಚಿವ ಡಾ.ಸುಧಾಕರ್ ಅವರು ಮಧ್ಯಪ್ರವೇಶ ಮಾಡಿ ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *