ಉಡುಪಿ ಬಿಜೆಪಿ ಮುಖಂಡನಿಂದ ನಗರಸಭೆ ಅಧಿಕಾರಿಗೆ ಗೂಸಾ

Public TV
2 Min Read

ಉಡುಪಿ: ಬಿಜೆಪಿ ನಗರಸಭೆ ಸದಸ್ಯ ಯೋಗೀಶ್ ಸಾಲ್ಯಾನ್, ಕಿರಿಯ ಆರೋಗ್ಯ ನಿರೀಕ್ಷಕನ ಮೇಲೆ ಹಲ್ಲೆ ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ನಗರಸಭೆ ಕಚೇರಿಯೊಳಗೇ ಈ ಘಟನೆ ನಡೆದಿದ್ದು, ಆರೋಗ್ಯ ನಿರೀಕ್ಷಕರ ಮುಖ, ಕಣ್ಣಿಗೆ ತೀವ್ರ ಗಾಯಗಳಾಗಿವೆ. ಹಲ್ಲೆಗೊಳಗಾದ ಆರೋಗ್ಯ ನಿರೀಕ್ಷರನ್ನು ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನಗರಸಭೆಯ ವಡಭಾಂಡೇಶ್ವರ ವಾರ್ಡ್ ನಲ್ಲಿ ನಿನ್ನೆ ರಾತ್ರಿ ಮರ ಬಿದ್ದಿದ್ದು, ಅದನ್ನು ತೆರವು ಗೊಳಿಸುವಂತೆ ವಾರ್ಡ್ ನ ಬಿಜೆಪಿಯ ಸದಸ್ಯ ಯೋಗೀಶ್ ಸಾಲ್ಯಾನ್ ಆರೋಗ್ಯ ನಿರೀಕ್ಷಕ ಪ್ರಸನ್ನ ರವರಿಗೆ ಫೋನ್ ಮೂಲಕ ತಿಳಿಸಿದ್ದರು. ಇಂದು ಬೆಳಿಗಿನವರೆಗೆ ಅದನ್ನ ತೆರವುಗೊಳಿಸದ ಕಾರಣ ಬೆಳಗ್ಗೆ ನಗರ ಸಭೆಯಲ್ಲಿದ್ದ ಪ್ರಸನ್ನರ ಕಚೇರಿಗೆ ಬಂದ ಯೋಗೀಶ್ ಈ ವಿಚಾರದ ಬಗ್ಗೆ ಪ್ರಶ್ನೆ ಕೇಳಿದ್ದಾರೆ.

ರಸ್ತೆಯಲ್ಲಿ ಮರ, ಕಲ್ಲುಗಳಿದ್ದು ಸಂಚಾರಕ್ಕೆ ಸಮಸ್ಯೆಯಾಗಿದೆ ಎನ್ನುತ್ತಾ, ಏಕಾಏಕಿ ಮುಖಕ್ಕೆ ಪಂಚ್ ಕೊಟ್ಟಿದ್ದಾರೆ. ಕಡಗವಿದ್ದ ಕೈಯ್ಯಲ್ಲಿ ಹಲ್ಲೆ ಮಾಡಿರುವುದರಿಂದ ಅಧಿಕಾರಿ ಪ್ರಸನ್ನರ ಹಣೆ ಮತ್ತು ಬಲ ಕಣ್ಣಿಗೆ ಪೆಟ್ಟು ಬಿದ್ದಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಗರಸಭಾ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಂಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಮಟ್ಟಾರು ರತ್ನಾಕರ ಹೆಗ್ಡೆ, ನಮ್ಮ ಸದಸ್ಯನಿಂದ ತಪ್ಪಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ತಪ್ಪು ಸಾಬೀತಾದರೆ ನಮ್ಮ ಸದಸ್ಯನನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಸಂಜೆ ಕಚೇರಿಯಲ್ಲಿ ಸಭೆ ಕರೆಯಲಾಗಿದೆ. ಮಾಹಿತಿ ಪಡೆದುಕೊಂಡು ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಬಿಜೆಪಿ ಸಂಸದರು, ಶಾಸಕರು ಹಾಗೂ ನಾಯಕರ ಅಸಭ್ಯ ಹಾಗೂ ಗೂಂಡಾ ವರ್ತನೆಗೆ ಬೇಸತ್ತು ಪ್ರಧಾನಿ ಮೋದಿ ಫುಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿ ವಾರ ನಡೆಯುವ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಎಲ್ಲ ಸಂಸದರು ಹಾಗೂ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅಧಿಕಾರಿಗಳ ಮೇಲೆ ಯಾವುದೇ ದರ್ಪ ತೋರಬೇಡಿ, ರೌಡಿಗಳಂತೆ ವರ್ತಿಸಬೇಡಿ. ಜನಪ್ರತಿನಿಧಿಗಳು ಶಿಸ್ತು ಕಾಪಾಡಿಕೊಳ್ಳುವ ಮೂಲಕ ಜನಸಾಮಾನ್ಯರಿಗೆ ಮಾದರಿಯಾಗಬೇಕು ಎಂದು ಸಲಹೆ ನೀಡುತ್ತಿದ್ದಾರೆ.

ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಶಾಸಕ ಆಕಾಶ್ ವಿಜಯ್‍ವರ್ಗಿಯಾ ಕೆಳ ಹಂತದ ಅಧಿಕಾರಿ ಮೇಲೆ ಕ್ರಿಕೆಟ್ ಬ್ಯಾಟ್‍ನಿಂದ ಹಲ್ಲೆ ಮಾಡಿದ್ದಕ್ಕೆ ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಯಾವ ನಾಯಕನ ಮಗನಾಗಿದ್ದರೂ ಪಕ್ಷದಿಂದ ಹೊರಗೆ ಹಾಕಿ ಎಂದು ಸೂಚಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *