ಅದಮಾರು ಮಠಕ್ಕೆ ಶ್ರೀಕೃಷ್ಣ ಪೂಜಾಧಿಕಾರ

Public TV
2 Min Read

– ಪರ್ಯಾಯ ಎಂದರೇನು?
– ಅಕ್ಷಯ ಪಾತ್ರೆ, ಸಟ್ಟುಗದ ಗುಟ್ಟೇನು?

ಉಡುಪಿ: ಇಲ್ಲಿನ ಶ್ರೀ ಕೃಷ್ಣನ ಪೂಜಾಧಿಕಾರ ಎರಡು ವರ್ಷದ ಮಟ್ಟಿಗೆ ಅದಮಾರು ಮಠಕ್ಕೆ ಹಸ್ತಾಂತರ ಆಗಿದೆ. ಅಕ್ಷಯ ಪಾತ್ರೆ ಮತ್ತು ಅನ್ನದ ಸಟ್ಟುಗ ಹಸ್ತಾಂತರ ಮಾಡುವ ಮೂಲಕ ಪಲಿಮಾರು ಮಠದ ಎರಡು ವರ್ಷದ ಅಧಿಕಾರ ಮುಗಿದಿದೆ.

ಉಡುಪಿಯ ಅಷ್ಟಮಠಗಳ ಪೈಕಿ ಒಂದಾಗಿರುವ ಅದಮಾರು ಮಠ ಶ್ರೀಕೃಷ್ಣನ ಪೂಜಾ ಕೈಂಕರ್ಯ ಮಾಡುವ ಜವಾಬ್ದಾರಿ ವಹಿಸಿಕೊಂಡಿದೆ. ಕಿರಿಯ ಶ್ರೀಪಾದರಾದ ಈಶಪ್ರಿಯ ತೀರ್ಥ ಸ್ವಾಮೀಜಿ ಸಿಂಹಾಸನ ಏರಿದ್ದಾರೆ. ಕೃಷ್ಣ ಮಠದ 250ನೇ ಪರ್ಯಾಯ ಸ್ವಾಮೀಜಿ ಎಂಬ ಹೆಗ್ಗಳಿಕೆಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

ದಂಡ ತೀರ್ಥದಲ್ಲಿ ಪುಣ್ಯಸ್ನಾನ:
ಶುಕ್ರವಾರ ರಾತ್ರಿ 1.30ಕ್ಕೆನೂತನ ಪರ್ಯಾಯ ಪೀಠಾಧಿಪತಿ ಅದಮಾರು ಮಠದ ಈಶಪ್ರಿಯ ತೀರ್ಥರು ಜಾಪು ತಾಲೂಕಿನ ದಂಡ ತೀರ್ಥ ಮಠದ ಪುಷ್ಕರಣಿಯಲ್ಲಿ ಸ್ನಾನ ಮಾಡಿ ಜೋಡುಕಟ್ಟೆಗೆ ಆಗಮಿಸಿದರು. ನೂರಾರು ಕಲಾತಂಡಗಳ ಸಹಿತ ವೈವಿದ್ಯಮಯ ಶೋಭಾಯಾತ್ರೆಯ ಮೂಲಕ ಅಷ್ಟಮಠದ ಪೈಕಿ ಐದು ಸ್ವಾಮೀಜಿಗಳನ್ನು ಡೋಲು, ವೀರಗಾಸೆ, ಸೋಮನಕುಣಿತ, ಕೋಲಾಟ, ಭಜನೆ ಸೇರಿದಂತೆ ವಿವಿಧ ಕಲಾಪ್ರಾಕಾರಗಳು ಶೋಭಾ ಯಾತ್ರೆಗೆ ಮೆರುಗು ನೀಡಿದವು. 50ಕ್ಕೂ ಅಧಿಕ ಟ್ಯಾಬ್ಲೋಗಳು ಮೆರವಣಿಗೆಯಲ್ಲಿತ್ತು.

ಪಲ್ಲಕ್ಕಿ ಮತ್ತು ಟ್ಯಾಬ್ಲೋ ಪಲ್ಲಕ್ಕಿ:
ಮೆರವಣಿಗೆಯ ಕಲಾ ತಂಡಗಳನ್ನು ಅನುಸರಿಸಿ ಸ್ವಾಮೀಜಿಗಳು ಮೆರವಣಿಗೆಯಲ್ಲಿ ಹೊರಟರು. ಪರ್ಯಾಯ ಪೀಠಾರೊಹಣ ಮಾಡುವ ಈಶಪ್ರಿಯರು ಮಾನವರು ಹೊರುವ ಪಲ್ಲಕ್ಕಿ ಏರಿ ಸಂಪ್ರದಾಯ ಮೆರೆದರು. ಉಳಿದ ಕೃಷ್ಣಾಪುರ, ಪೇಜಾವರ, ಕಾಣಿಯೂರು, ಸೋದೆ ಸ್ವಾಮೀಜಿಗಳು ಪಲ್ಲಕ್ಕಿಯನ್ನು ಟ್ಯಾಬ್ಲೋ ಮೇಲಿಟ್ಟು ಅದರಲ್ಲಿ ಕುಳಿತು ಸಾಗಿದರು.

ಕನಕನ ಕಿಂಡಿಯಲ್ಲೇ ದೇವರ ದರ್ಶನ:
ಅದಮಾರು ಮಠದ ಈಶಪ್ರಿಯ ತೀರ್ಥರು, ರಥಬೀದಿಗೆ ಆಗಮಿಸಿ ಕನಕನ ಕಿಂಡಿಯ ಮೂಲಕ ಕೃಷ್ಣನ ದರ್ಶನ ಮಾಡಿದರು. ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವರ ದರ್ಶನ ಪಡೆದು ಕೃಷ್ಣ ಮಠ ಪ್ರವೇಶಿಸಿದರು. ಕೃಷ್ಣ ಮಠದ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದರ್ಶನ ಗೈದರು.

ಕೃಷ್ಣ ಮಠದ ಅಧಿಕಾರ ಹಸ್ತಾಂತರ ಅಂದ್ರೆ ಅಕ್ಷಯ ಪಾತ್ರೆ, ಅನ್ನದ ಸೌಟು ನೀಡೋದು. ನಿರಂತರ ಭಕ್ತರಿಗೆ ಪ್ರವಾಸ ನೀಡೋದು ಇದ್ರ ಹಿಂದಿನ ಉದ್ದೇಶ.

ಅದಮಾರು ಹಿರಿಯ ಶ್ರೀಗಳಿಗೆ ಪಲಿಮಾರು ಶ್ರೀಗಳು ಅಕ್ಷಯ ಪಾತ್ರೆ ಹಸ್ತಾಂತರಿಸಿದರು ಈ ಮೂಲಕ ಕೃಷ್ಣನ ಪೂಜಾ ಅಧಿಕಾರ ವಿದ್ಯುಕ್ತವಾಗಿ ಹಸ್ತಾಂತರವಾಯಿತು. ಹಿರಿಯ ಶ್ರೀಗಳು ಈಶಪ್ರಿಯರಿಗೆ ಅಕ್ಷಯಪಾತ್ರೆ ಹಾಗೂ ಸಟ್ಟುಗ ನೀಡಿ ಅಧಿಕಾರ ವಹಿಸಿಕೊಟ್ಟರು. ಸಿಂಹಾಸನದಲ್ಲಿ ವಿಶ್ವಪ್ರಿಯರನ್ನು ವಿದ್ಯಾಧೀಶರು ಕುಳಿತುಕೊಳ್ಳಿಸಿದ ನಂತರ ಪ್ರಾರ್ಥನೆ ಮಾಡಿ ಕಿರಿಯರಿಗೆ ಅಧಿಕಾರ ವಹಿಸಿಕೊಟ್ಟರು.

ಅರಳು ಗದ್ದಿಗೆ ಮೇಲೆ ರಾಜ್ಯಭಾರದ ವಿಧಿ:
ರಾಜಮಹಾರಾಜರಿಗೆ ಚಿನ್ನದ ಸಿಂಹಾಸನವಾದ್ರೆ ಸ್ವಾಮೀಜಿಗಳುಗೆ ಅರಳಿನ ಗದ್ದಿಗೆ. ಮಠದ ಬಡಗು ಮಾಳಿಗೆಯ ಅರಳು ಗದ್ದಿಗೆ ವಿಧಿ ನಡೆಯಿತು. ಎಲ್ಲಾಕ ಮಠಾಧೀಶರ ಸಮ್ಮುಖದಲ್ಲಿ ಅದಮಾರು ಮಠದ ಈಶಪ್ರಿಯ ತೀರ್ಥರು ಅಧಿಕಾರ ಸ್ವೀಕರಿಸಿದರು. ಎಲ್ಲಾ ಸ್ವಾಮೀಜಿಗಳಿಗೆ ಗಂಧ, ಎಣ್ಣೆ ಹಚ್ಚಿ ಶಾಲು ಹೊದೆಸಿ ಕಾಣಿಕೆ ನೀಡಿ ನೂತನ ಪೀಠಾಧಿಪತಿ ಗೌರವಿಸಿದರು. ಎಲ್ಲರಿಂದ ಗೌರವ ಪಡೆದರು. ಇಲ್ಲಿಗೆ ಬೆಳಗ್ಗಿನ ಧಾರ್ಮಿಕ ವಿಧಿ ಮುಕ್ತಾಯಗೊಂಡಿದೆ. ಈ ಮೂಲಕ ಎರಡು ವರ್ಷ ಭಗವಾನ್ ಶ್ರೀಕೃಷ್ಣನ ಪೂಜೆ ಮತ್ತು ಕೃಷ್ಣಮಠದ ಸಂಪೂರ್ಣ ಅಧಿಕಾರ ಅದಮಾರು ಮಠದ ಪಾಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *