ಉಡುಂಬನಿಗೆ ಫಿದಾ ಆದ ಪುರಿ ಜಗನ್ನಾಥ್, ಡ್ಯಾನಿಶ್!

Public TV
1 Min Read

ಒಂದು ಪರಿಣಾಮಕಾರಿಯಾದ ಟ್ರೇಲರ್ ಹೇಗಿರಬೇಕನ್ನೋದಕ್ಕೆ ಒಂದಷ್ಟು ಮಾಸ್ಟರ್ ಪೀಸ್‍ನಂಥಾ ಉದಾಹರಣೆಗಳು ಸಿಗುತ್ತವೆ. ಕನ್ನಡದಲ್ಲಿಯೂ ಅಂಥಾದ್ದೊಂದಷ್ಟು ಉದಾಹರಣೆಗಳು ಖಂಡಿತಾ ಇವೆ. ಅದಕ್ಕೆ ಇತ್ತೀಚಿನ ತಾಜಾ ಉದಾಹರಣೆಯಾಗಿ ಉಡುಂಬಾ ಟ್ರೇಲರ್ ಅನ್ನೂ ದಾಖಲಿಸಬಹುದು. ಶಿವರಾಜ್ ನಿರ್ದೇಶನದ ಉಡುಂಬಾ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಟ್ರೆಂಡಿಂಗ್‍ನಲ್ಲಿದೆ. ಇದೇ 23ರಂದು ಬಿಡುಗಡೆಯಾಗಲಿರೋ ಈ ಚಿತ್ರದ ಬಗ್ಗೆ ಕುತೂಹಲ ನಿಗಿನಿಗಿಸುವಂತಾಗಿರೋದರಲ್ಲಿ ಈ ಟ್ರೇಲರ್ ಪಾಲು ಪ್ರಧಾನವಾಗಿದೆ.

ಪವನ್ ಶೌರ್ಯ ನಾಯಕನಾಗಿ ನಟಿಸಿರೋ ಈ ಚಿತ್ರದಲ್ಲಿ ಹುಲಿರಾಯ ಖ್ಯಾತಿಯ ಚಿರಶ್ರೀ ಅಂಚನ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಉಡುಂಬಾ ಅನ್ನೋದು ಮೇಲುನೋಟಕ್ಕೆ ರಗಡ್ ಸ್ಟೋರಿಯಾಗಿ ಕಾಣಿಸುತ್ತದೆ. ಅದರಲ್ಲಿ ಸತ್ಯವೂ ಇದೆ. ಆದರೆ ಈ ಚಿತ್ರದಲ್ಲಿ ಬರೀ ಮಾಸ್ ಅಂಶಗಳು ಮಾತ್ರವೇ ಇದೆ ಅಂದುಕೊಳ್ಳುವಂತಿಲ್ಲ. ಪ್ರೀತಿ, ಸೆಂಟಿಮೆಂಟ್, ಕಾಮಿಡಿ ಎಲ್ಲವೂ ಇದೆ. ಅದೆಲ್ಲವನ್ನು ಮಾಸ್ ಅಬ್ಬರದ ಜೊತೆಗೆ ಬ್ಲೆಂಡ್ ಮಾಡಿ ಕಟ್ಟಿ ಕೊಡೋ ಮೂಲಕ ಈ ಟ್ರೇಲರ್ ಪ್ರೇಕ್ಷಕರನ್ನೆಲ್ಲ ಉಡುಂಬಾನತ್ತ ಆಕರ್ಷಿತರಾಗುವಂತೆ ಮಾಡಿ ಬಿಟ್ಟಿದೆ.

ಇದು ಕಡಲಮಕ್ಕಳೆಂದೇ ಬಿಂಬಿತರಾಗಿರೋ ಮೀನುಗಾರರ ಲೋಕದಲ್ಲಿ ನಡೆಯೋ ರೋಚಕ ಕಥೆಯ ಚಿತ್ರ. ಈಗಾಗಲೇ ಒಂದಷ್ಟು ಚಿತ್ರಗಳು ಈ ಜಗತ್ತಿನತ್ತ ಕಣ್ಣೋಟ ಬೀರಿವೆ. ಆದರೆ ಉಡುಂಬಾನದ್ದು ಮಾತ್ರ ಈ ವರೆಗೆ ಯಾವ ಚಿತ್ರದಲ್ಲಿಯೂ ಕಂಡಿರದ ಸ್ಟೋರಿ ಅನ್ನೋ ಭರವಸೆ ಚಿತ್ರತಂಡದಲ್ಲಿದೆ. ಟ್ರೇಲರ್ ನೋಡಿದ ಪ್ರೇಕ್ಷಕರು ಮಾತ್ರವಲ್ಲದೇ ಚಿತ್ರರಂಗದವರು, ಪರಭಾಷೆಯ ಗಣ್ಯರೂ ಹಾಡಿ ಹೊಗಳುತ್ತಿದ್ದಾರೆ. ತೆಲುಗಿನ ಸ್ಟಾರ್ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ಬಾಲಿವುಡ್ ಖ್ಯಾತ ನಟ ಹಾಗೂ ಕುರುಕ್ಷೇತ್ರದ ಭೀಮ ಡ್ಯಾನಿಶ್ ಕೂಡಾ ಉಡುಂಬಾದಲ್ಲಿನ ಪವನ್ ಶೌರ್ಯ ನಟನೆಯನ್ನು ಮೆಚ್ಚಿಕೊಂಡು ಶುಭ ಕೋರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *