ದರ್ಶನ್ ಅಭಿಮಾನಿಯಂತೆ ಉದ್ಘರ್ಷ ಹೀರೋ ಅನೂಪ್!

Public TV
2 Min Read

ಬೆಂಗಳೂರು: ವಿಭಿನ್ನ ಪೋಸ್ಟರ್ ಮೂಲಕವೇ ಚಂದನವನದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಉದ್ಘರ್ಷ ಸಿನಿಮಾ ಹೊಸ ಆಲೋಚನೆಗಳನ್ನು ಪ್ರೇಕ್ಷಕರಲ್ಲಿ ಹುಟ್ಟು ಹಾಕಿತ್ತು. ಈ ಕುತೂಹಲಗಳನ್ನು ಮತ್ತಷ್ಟು ಹೆಚ್ಚು ಮಾಡಿ ಮೊದಲ ಬಾರಿಗೆ ಚಿತ್ರದ ತಂಡ ಮಾಧ್ಯಮಗಳ ಮುಂದೇ ಬಂದಿತ್ತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಸುನಿಲ್ ದೇಸಾಯಿ ಅವರು, ಚಿತ್ರದ ಬಗ್ಗೆ ಈ ಸಂದರ್ಭದಲ್ಲಿ ಕಡಿಮೆ ಮಾತನಾಡುತ್ತೇನೆ. ಏಕೆಂದರೆ ಚಿತ್ರದ ನಾಯಕ ನಟ ಠಾಕೂರ್ ಅನೂಪ್ ಸಿಂಗ್ ಪರಿಚಯ ಮಾಡಬೇಕಿದೆ. ಅಲ್ಲದೇ ಚಿತ್ರಕ್ಕಾಗಿ ನಾನು ಅನೂಪ್ ಸಿಂಗ್ ಆಯ್ಕೆ ಮಾಡಿದ ಕುರಿತು ಹೇಳಬೇಕಿದೆ ಎಂದು ಮಾತು ಆರಂಭಿಸಿದರು.

ಚಿತ್ರ ಕಥೆ ಸಿದ್ಧಗೊಂಡ ಬಳಿಕ ನಾಯಕನ ಹುಡುಕಾಟದಲ್ಲಿದ್ದೆ. ಆಕಸ್ಮಿಕವಾಗಿ ಠಾಕೂರ್ ಅನೂಪ್ ಸಿಂಗ್ ನಾನು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡೆವು. ಒಂದೇ ನೋಟದಲ್ಲಿ ನನ್ನ ಕಥೆಯ ನಾಯಕ ಅವರಲ್ಲಿ ಕಾಣಿಸಿದರು. ನನ್ನ ಸಿನಿಮಾಗೆ ನೀವು ನಾಯಕನಟರಾಗ ಬೇಕು ಎಂದು ಹೇಳುತ್ತಿದಂತೆ ಅನೂಪ್ ಅಚ್ಚರಿಗೊಳಗಾದರು. ಆದರೆ ಚಿತ್ರದ ಕಥೆ ಕೇಳಿದ ಮರುಕ್ಷಣದಲ್ಲಿ ಒಪ್ಪಿಕೊಂಡರು ಎಂದು ಚಿತ್ರ ನಾಯಕ ನಟನ ಹುಡುಕಾಟದ ಹಿಂದಿನ ಕುತೂಹಲ ಕಥೆ ಬಿಚ್ಚಿಟ್ಟರು.

ಚಿತ್ರದ ಕಥೆಗೆ ಅಭಿನಯ ಮಾತ್ರವಲ್ಲದೇ ವಿಲನ್ ಲುಕ್ ಕೂಡ ಬೇಕಾಗಿದ್ದರಿಂದ ಅವರನ್ನೇ ಆಯ್ಕೆ ಮಾಡಲಾಯಿತು. ಚಿತ್ರದ ಕುರಿತು ಬಹಳ ಆತ್ಮವಿಶ್ವಾಸ ಇದ್ದು, ಸಿನಿ ರಸಿಕರು ನಮಗೇ ಬೆಂಬಲ ನೀಡುತ್ತಾರೆ. ಅನುಪ್ ಕೂಡ ನಾನು ಬಯಸಿದ್ದ ಅಂಶಗಳಿಗಿಂತ ಹೆಚ್ಚಿನದನ್ನು ಚಿತ್ರಕ್ಕೆ ನೀಡಿದ್ದಾರೆ. ಅವರ ಈ ಕೆಲಸ ಶೈಲಿ ಹಾಗೂ ಅವರಿಗೆ ಕೆಲಸ ಮಾಡಲು ಇರುವ ಹಠ ಎಲ್ಲರಿಗೂ ಇಷ್ಟವಾಗುತ್ತದೆ. ಚಿತ್ರೀಕರಣ ವೇಳೆ ಅವರು ಹಲವು ಬಾರಿ ಡ್ಯೂಪ್ ಇಲ್ಲದೇ ಸಾಹಸ ದೃಶ್ಯಗಳನ್ನು ನಡೆಸಿದ್ದಾರೆ. ಸಿನಿಮಾ ನೋಡಿದಾಗ ಅವರ ಶ್ರಮ ನಿಜವಾಗಿ ಅರಿವಾಗುತ್ತದೆ ಎಂದರು.

ಇದೇ ವೇಳೆ ದರ್ಶನ್ ಬಗ್ಗೆ ಹಾಡಿ ಹೊಗಳಿದ ನಾಯಕ ಠಾಕೂರ್ ಅನೂಪ್ ಸಿಂಗ್, ನಾನು ದರ್ಶನ್ ಅವರ ದೊಡ್ಡ ಅಭಿಮಾನಿ. ಅವರ ಜೊತೆ ಯಜಮಾನ ಚಿತ್ರದಲ್ಲಿ ಅಭಿನಯಿಸಿದ್ದು ತುಂಬಾ ಖುಷಿ ತಂದಿದೆ. ಅವರು ಚಿತ್ರೀಕರಣಕ್ಕೆ ರಾಜನ ಹಾಗೆಯೇ ಬರುತ್ತಾರೆ, ರಾಜನ ಹಾಗೆಯೇ ಹೋಗುತ್ತಾರೆ. ಬಾಲಿವುಡ್‍ನ ಸಲ್ಮಾನ್ ಖಾನ್ ರೀತಿ, ಬಾದ್ ಷಾ ಅವರು. ನನ್ನ ಚಿತ್ರವನ್ನು ನೋಡಿ ಎಂದಿದ್ದಕ್ಕೆ, ತಮ್ಮ ಮೊಬೈಲ್ ನಂಬರ್ ಕೊಟ್ಟು ನಿನಗಾಗಿ ಬರುತ್ತೇನೆ ಎಂದು ಹೇಳಿದರು. ಅವರ ಸರಳ ವ್ಯಕ್ತಿತ್ವ ಕಂಡು ನನಗೆ ಹೆಮ್ಮೆಯಾಯಿತು ಎಂದು ಹೇಳಿದರು.

ಉದ್ಘರ್ಷ ಚಿತ್ರ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಹಾಗು ಮಲಯಾಳಂನಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲು ನಿರ್ದೇಶಕರು ಚಿಂತನೆ ನಡೆಸಿದ್ದಾರೆ. ಅದ್ದರಿಂದಲೇ ನಾಲ್ಕು ಭಾಷೆಗಳಲ್ಲಿ ನಟಿಸಿರುವ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅನೂಪ್ ಈಗಾಗಲೇ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪರಿಚಿತರಾಗಿದ್ದು, ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಡೆಸಿದ್ದಾರೆ. ಕಬಾಲಿ ಚಿತ್ರದಲ್ಲಿ ರಜಿನಿಕಾಂತ್ ಪಕ್ಕ ಮಿಂಚಿದ್ದ ಧನ್ಸಿಕಾ, ತಾನ್ಯಾ ಹೋಪ್, ಕಬೀರ್ ಸಿಂಗ್ ದುಹಾನ್ ಹಾಗೂ ಬಾಹುಬಲಿ ಚಿತ್ರದಲ್ಲಿ ಕಾಲಕೇಯ ಪಾತ್ರದಲ್ಲಿ ನಟಿಸಿದ್ದ ಪ್ರಭಾಕರ್, ಶ್ರದ್ಧಾ ದಾಸ್ ಮುಂತಾದ ನಟರ ಬಹುದೊಡ್ಡ ಪಟ್ಟಿಯೇ ಈ ಚಿತ್ರದಲ್ಲಿ ಇದೆ.

ಉಳಿದಂತೆ ಉದ್ಘರ್ಷ ಚಿತ್ರದಲ್ಲಿ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇವರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಮಂಜುನಾಥ್, ತಿರುಮಲೈ, ರಾಜೇಂದ್ರ ಕುಮಾರ್ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಚಿತ್ರಕ್ಕೆ ಸಂಜೋಯ್ ಚೌಧರಿ ಸಂಗೀತ, ವಿಷ್ಣು ವರ್ಧನ್ ಛಾಯಾಗ್ರಹಣ, ಕೆಂಪರಾಜು ಸಂಕಲನ ಹಾಗೂ ಖ್ಯಾತ ಸಾಹಸ ನಿರ್ದೇಶಕ ರವಿವರ್ಮ ಸಾಹಸ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *