ಶಿರಸಂಗಿ ಲಿಂಗರಾಜರ ತ್ಯಾಗ ಸ್ಮರಣೀಯ: ಪ್ರೊ. ಎಸ್.ವಿ. ಬಳಿಗಾರ

Public TV
2 Min Read

ಹಾವೇರಿ: ಈ ನಾಡು ಕಂಡ ಅಪ್ರತಿಮ ದಾನವೀರ ಶಿರಸಂಗಿ ಲಿಂಗರಾಜ ದೇಸಾಯಿಯವರ ತ್ಯಾಗ ಮತ್ತು ಉದಾರ ಮನೋಭಾವ ಸದಾ ಸ್ಮರಣೀಯವಾದದ್ದು ಎಂದು ಶಿಗ್ಗಾಂವಿ ಶ್ರೀ ಜಗದ್ಗುರು ರಂಭಾಪುರಿ ವೀರಗಂಗಾಧರ ಮಹಾವಿದ್ಯಾಲಯದ ಹಿಂದಿ ಪ್ರಾಧ್ಯಾಪಕ ಪ್ರೊ. ಶಿವಪ್ರಕಾಶ ವೀ. ಬಳಿಗಾರ ಹೇಳಿದರು.

ನಗರದ ಕೆ.ಎಲ್.ಇ. ಸಂಸ್ಥೆಯ ಹಾವೇರಿ ಅಂಗಸಂಸ್ಥೆಗಳಾದ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯ, ಜಿ. ಎಚ್. ಪದವಿ ಪೂರ್ವ ಮಹಾವಿದ್ಯಾಲಯ, ಜಿ. ಎಚ್. ಬಿ.ಸಿ.ಎ., ಎಂ.ಕಾಂ. ಸ್ನಾತಕೋತ್ತರ ವಿಭಾಗ, ಸಿ. ಬಿ. ಕೊಳ್ಳಿ ಪಾಲಿಟೆಕ್ನಿಕ್ ಹಾಗೂ ಆಂಗ್ಲ ಮಾಧ್ಯಮಿಕ ಶಾಲೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ತ್ಯಾಗವೀರ ಶಿರಸಂಗಿ ಲಿಂಗರಾಜರ 159ನೇ ವರ್ಷದ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ. ಎಸ್.ವಿ. ಬಳಿಗಾರ ಮಾತನಾಡಿದರು.

ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಲಿಂಗರಾಜರು ಕೈಗೊಂಡ ಯೋಜನೆಗಳು ಇಂದಿಗೂ ಪ್ರಚಲಿತವಿದ್ದು, ಕೃಷಿ ಮತ್ತು ನೀರಾವರಿ ಬಗೆಗಿನ ಕಾಳಜಿ, ರೈತರ ಪರವಾದ ನಿಲುವು, ಶಿಕ್ಷಣ ಮತ್ತು ಸಮಾಜದ ಒಲವುಗಳು ಅವರೊಳಗಿನ ಚುರುಕಿನ ಕ್ರಿಯಾಶೀಲತೆಯನ್ನು ಪ್ರದರ್ಶನಗೊಳಿಸುವಂತಹವಾಗಿದ್ದವು. ಸದಾ ಸಾಮಾಜಿಕ ಚಿಂತನೆಯಲ್ಲಿದ್ದ ಇವರು ಸಮಾಜ ಸಂಘಟನೆಗೆ ಹಲವಾರು ಯೋಜಿತ ದಾನ ದತ್ತಿಗಳನ್ನು ನೀಡಿದ್ದಲ್ಲದೇ ತಮ್ಮ ಸರ್ವಸ್ವವನ್ನು ಸಮಾಜಕ್ಕೋಸ್ಕರ ಮುಡಿಪಾಗಿಟ್ಟ ಧೀರೋದಾತ್ತರಾಗಿದ್ದರು. ಮಾತಿನ ನಿಲುವು, ಯೋಚನೆಯ ಲಹರಿ, ಗಟ್ಟಿ ನಿರ್ಧಾರಗಳು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಅಧಿಕಾರಿಗಳೂ ಸಹ ಬೆರಗುಗೊಳಿಸುವಂತೆ ಮಾಡಿದ್ದವು. ಅಖಿಲ ಭಾರತ ವೀರಶೈವ ಮಹಾಸಭೆ, ಕೆ.ಎಲ್.ಇ. ಸಂಸ್ಥೆ, ದೇವ-ದೈವ ಕಾರ್ಯ, ನೀರಾವರಿ ಯೋಜನೆ, ಭೂ ಅಭಿವೃದ್ಧಿಯಂತಹ ಕಳಕಳಿ ಕಾರ್ಯಗಳಿಗೆ ಅಪಾರ ಕೊಡುಗೆ ನೀಡಿದ ಲಿಂಗರಾಜರು ಇಂದಿಗೂ ಸ್ಮರಣೀಯ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಪಿ. ಡಿ. ಶಿರೂರ ವಹಿಸಿದ್ದರು. ವೇದಿಕೆಯ ಮೇಲೆ ಸದಸ್ಯರಾದ ಸಿ. ಬಿ. ಹಿರೇಮಠ, ಎಸ್. ಜೆ. ಹೆರೂರ, ಎಸ್. ಎಮ್. ಹುರಳಿಕುಪ್ಪಿ, ಪ್ರಾಚಾರ್ಯರಾದ ಡಾ| ಎಂ. ಎಸ್. ಯರಗೊಪ್ಪ, ಪ್ರೊ. ಬಿ. ಚನ್ನಪ್ಪ, ಪ್ರೊ. ಜೆ. ಆರ್. ಶಿಂಧೆ, ಪ್ರೊ. ಸಪ್ನಾ ಲೋಬೊ, ಪ್ರೊ. ವೆಂಕಟೇಶ ಕಲಾಲ ಉಪಸ್ಥಿತರಿದ್ದರು. ಕೆ.ಎಲ್.ಇ. ಶಾಲೆಯ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ, ಪ್ರೊ. ಡಿ. ಎ. ಕೊಲ್ಲಾಪುರೆ ಸ್ವಾಗತ, ಪ್ರೊ. ಸಿದ್ಧೇಶ್ವರಯ್ಯ ಹುಣಸಿಕಟ್ಟಿಮಠ ಇವರಿಂದ ನಿರೂಪಣೆ ಜರುಗಿದವು. ಡಾ|ಗುರುಪಾದಯ್ಯ ವೀ. ಸಾಲಿಮಠ ವಂದಿಸಿದರು. ಕಾರ್ಯಕ್ರಮದಲ್ಲಿ ಅಂಗಸಂಸ್ಥೆಗಳ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಆರಂಭಕ್ಕೂ ಮುನ್ನ ಶಿರಸಂಗಿ ಲಿಂಗರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *