ಗಂಡನಿಗಾಗಿ ರಣಚಂಡಿಯರಾದ ಮಹಿಳೆಯರು – ಎರಡನೇ ಹೆಂಡ್ತಿ ಮನೆಗೆ ನುಗ್ಗಿ ಮೊದಲ ಹೆಂಡ್ತಿ ಅಬ್ಬರ

Public TV
4 Min Read

ದಾವಣಗೆರೆ: ಗಂಡನಿಗಾಗಿ ಇಬ್ಬರು ಮಹಿಳೆಯರಿಬ್ಬರು ಮಾರಾಮಾರಿ ನಡೆಸಿದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ಹೊರವಲಯದ ಮನೆಯೊಂದರಲ್ಲಿ ನಡೆದಿದೆ.

ವಸಂತ್ ಕುಮಾರ್ ಇಬ್ಬರನ್ನು ಮದುವೆಯಾದ ಪತಿ. ಭಾಗ್ಯ ಹಾಗೂ ರೇಖಾ ತನ್ನ ಗಂಡನಿಗಾಗಿ ಮಾರಾಮಾರಿ ನಡೆಸಿದ್ದಾರೆ. ವಸಂತ್ ಹಾಗೂ ಭಾಗ್ಯ ಹರಪ್ಪನಹಳ್ಳಿ ತಾಲೂಕಿನ ಪುಣಬಘಟ್ಟದ ನಿವಾಸಿಗಳಾಗಿದ್ದು, 9 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ವಸಂತ್ ಹಾಗೂ ಭಾಗ್ಯ ಅವರಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿದ್ದಾರೆ.

ಬೆಂಗಳೂರಿನಲ್ಲಿ ಕೆಲಸ ಮಾಡುವುದಾಗಿ ಹೇಳಿ ಹೋಗಿದ್ದ ವಸಂತ್ ರೇಖಾ ಅವರನ್ನು ಮದುವೆಯಾಗಿದ್ದಾನೆ. ಮೂರು ವರ್ಷಗಳಾದ್ರು ವಸಂತ್ ಮನೆಗೆ ಬಾರದೇ ಇದ್ದಾಗ ಭಾಗ್ಯಗೆ ಅನುಮಾನ ಶುರುವಾಗತೊಡಗಿದೆ. ನಂತರ ಮದುವೆಯಾದ ವಿಚಾರ ತಿಳಿದ ಭಾಗ್ಯ ಏಕಾಏಕಿ ಎರಡನೇ ಹೆಂಡತಿಯ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಸದ್ಯ ಪೊಲೀಸರು ಮಧ್ಯಸ್ಥಿಕೆ ವಹಿಸಿ ಗಲಾಟೆ ತಿಳಿಗೊಳಿಸಿದ್ದಾರೆ.

ಭಾಗ್ಯ ಹೇಳಿದ್ದು ಏನು?
ವಸಂತ್ ಸರ್ವೆ ಮಾಡುವುದಾಗಿ ಹೇಳಿ ಬೆಂಗಳೂರಿಗೆ ಹೋಗಿದ್ದರು. ಅಲ್ಲದೇ 6 ತಿಂಗಳಿಗೊಮ್ಮೆ ಮನೆಗೆ ಬರುತ್ತಿದ್ದರು. ಮನೆಗೆ ಬಂದ ವೇಳೆ ಅವರು ನನ್ನ ಜೊತೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ನನ್ನ ಬಗ್ಗೆ ಹೆಚ್ಚು ಗಮನ ಕೊಡುತ್ತಿರಲಿಲ್ಲ. ನನಗೆ ತುಂಬಾ ಬೇಸರವಾಗುತ್ತಿತ್ತು. ಈ ವೇಳೆ ಅವರಿಗೆ ಫೋನ್ ಕರೆಗಳು ಬರುತ್ತಿತ್ತು. ಫೋನ್ ಕರೆ ಬರುತ್ತಿದ್ದಾಗ ಅವರು ಮನೆ ಹೊರಗೆ ಹೋಗಿ ಮಾತನಾಡುತ್ತಿದ್ದರು. ಆ ಮಹಿಳೆ ಜೊತೆ ಫೋನಿನಲ್ಲಿ ಮಾತನಾಡುವಾಗ ಸ್ವತಃ ನಾನೇ ಕೇಳಿಸಿಕೊಂಡಿದ್ದೆ. ಆ ಮಹಿಳೆ ಮನೆಗೆ ಯಾವಾಗ ಬರುತ್ತೀಯಾ ಎಂದು ಕೇಳುತ್ತಿದ್ದಾಗ ತಕ್ಷಣ ನನ್ನ ಪತಿ ಬೈಕಿನಲ್ಲಿ ಆಕೆ ಮನೆಗೆ ಹೋಗುತ್ತಿದ್ದರು.

ಕೆಲವು ದಿನಗಳ ಹಿಂದೆ ವಸಂತ್ ಹರಿಹರದಲ್ಲಿ ಮನೆ ಮಾಡಿದ್ದಾರೆ ಎಂಬ ಸುದ್ದಿ ನನಗೆ ಬಂತು. ಆದರೆ ಹರಿಹರದಲ್ಲಿ ಎಲ್ಲಿ ಮನೆ ಮಾಡಿದ್ದಾರೆ ಎಂಬುದು ನನಗೆ ತಿಳಿದಿರಲಿಲ್ಲ. ನಾನು ಹಾಸ್ಟೆಲ್‍ನಲ್ಲಿದ್ದಾಗ ವಸಂತ್ ನನ್ನ ಮಕ್ಕಳಿಗೆ ಹೊಡೆದು ಆಕೆಯ ಮನೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ನನ್ನ ಮಕ್ಕಳು ಹಿಂತಿರುಗಿ ಬಂದಾಗ ನನ್ನ ಪತಿ ನನ್ನ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಾನು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಆದರೆ ವಸಂತ್ ನನ್ನ ಶೀಲ ಸರಿಯಿಲ್ಲ ಎಂದು ಹೇಳಿ ನನ್ನ ವಿರುದ್ಧವೇ ದೂರು ನೀಡಿದ್ದಾರೆ. ಅಲ್ಲದೇ ನನ್ನ ಮಗಳನ್ನು ಮಡಿಕೇರಿಯಲ್ಲಿ ಅವರ ಪೋಷಕರ ಜೊತೆ ಇರಿಸಿ, ನನ್ನ ಮಗನನ್ನು ಆತನ ದೊಡ್ಡಪ್ಪನ ಮನೆಯಲ್ಲಿ ಇರಿಸಿದ್ದಾರೆ.

ಮತ್ತೊಂದು ಮದುವೆ:
ನಾನು ಊರಿನಲ್ಲಿದ್ದಾಗ ನನ್ನ ಪತಿ ಆಗಾಗ ಬೆಂಗಳೂರಿಗೆ ಹೋಗುತ್ತಿದ್ದರು. ಮದುವೆಯಾಗಿ ನನ್ನ ಪತಿ ನನ್ನ ಜೊತೆ 4 ವರ್ಷ ಮಾತ್ರ ಜೀವನ ನಡೆಸಿದ್ದಾರೆ. ನನಗೆ ಆ ಮಹಿಳೆಯ ಪರಿಚಯವಿಲ್ಲ. ನಾನು ಆಕೆಯ ಮನೆಯನ್ನು ಹುಡುಕಿ ಆಕೆಯ ಮನೆಗೆ ಹೋದೆ. ಈ ವೇಳೆ ಆ ಮನೆಯಲ್ಲಿ ಆಕೆಯನ್ನು ನೋಡಿ ನಾನು ರೊಚ್ಚಿಗೆದ್ದೆ. ನಾನು ಆಕೆಯ ಮನೆಗೆ ಹೋಗಿದ್ದಾಗ ನನ್ನ ಪತಿ ಟೀ ಕುಡಿಯಲು ಹೊರಗೆ ಹೋಗಿದ್ದರು. ಈ ಮೊದಲು ವಿಡಿಯೋ ಕಾಲ್‍ನಲ್ಲಿ ನನ್ನ ಪತಿ ಆ ಮನೆಯನ್ನು ತೋರಿಸಿದ್ದರು. ಅಷ್ಟೇ ಅಲ್ಲದೇ ನಾನು ಮತ್ತೊಂದು ಮದುವೆಯಾಗಿದ್ದೇನೆ ಎಂದು ಹೇಳಿದ್ದರೂ ಮಹಿಳೆಯ ಫೋಟೋವನ್ನು ತೋರಿಸಿರಲಿಲ್ಲ.

ವಸಂತ್ ನನ್ನ ಜೊತೆ ಸರಿಯಾಗಿ ನಡೆದುಕೊಳ್ಳುತ್ತಿರಲಿಲ್ಲ. ಆಗ ನಾನು ಅವರನ್ನು ಪ್ರಶ್ನಿಸಿದೆ. ನಾನು ಇರುವುದು ನಿಮಗೆ ಇಷ್ಟವಿಲ್ಲವೇ? ಯಾರೋ ಫೋನ್ ಮಾಡಿದರೆ ನೀವು ಹೊರಟು ಹೋಗುತ್ತೀರಿ. ನನ್ನ ಜೊತೆ ಜೀವನ ನಡೆಸಲು ನಿಮಗೆ ಇಷ್ಟ ಇಲ್ಲವೇ ಎಂದು ಕೇಳಿದ್ದಾಗ ಅವರು, ನಾನು ಮತ್ತೊಂದು ಮದುವೆ ಆಗುತ್ತೇನೆ ಎಂದು ಆಗಾಗ ಹೇಳುತ್ತಿದ್ದರು. ಆದರೆ ನಾನು ಅದನ್ನು ನಂಬಲಿಲ್ಲ. ನನಗೆ ಎರಡು ಮಕ್ಕಳಿದ್ದಾರೆ ನಮ್ಮನ್ನು ಬಿಟ್ಟು ಎಲ್ಲಿ ಹೋಗುತ್ತಾನೆ ಎಂದು ನಾನು ಸುಮ್ಮನಿದ್ದೆ. ಮಕ್ಕಳಿಗೆ ತಂದೆಯನ್ನು ಕಂಡರೆ ತುಂಬಾ ಪ್ರೀತಿ. ಹಾಗಾಗಿ ವಸಂತ್ ನನ್ನ ಮಕ್ಕಳನ್ನು ಕರೆದುಕೊಂಡು ಹೋಗಿ ಅವರ ಪೋಷಕರ ಜೊತೆ ಹಾಗೂ ದೊಡ್ಡಪ್ಪನ ಮನೆಗೆ ಕಳಿಸಿಕೊಟ್ಟಿದ್ದರು.

ಅತ್ತೆ ಮಗಳೆಂದು ಹೇಳಿ ಮೋಸ:
ವಸಂತ್ ನನ್ನನ್ನು 4 ವರ್ಷ ಬಿಟ್ಟು ಹೋಗಿದ್ದಾಗ ನನಗೆ ಜೀವನ ನಡೆಸಲು ಆಗದೇ ಹಾಸ್ಟೆಲ್ ಸೇರಿದೆ. ನಾನು ಒಬ್ಬಳು ಅನಾಥೆಯಾಗಿದ್ದು, ಅನಾಥಶ್ರಾಮದಲ್ಲಿ ಬೆಳೆದಿದ್ದೆ. ನನ್ನನ್ನು ಅನಾಥಶ್ರಾಮದಿಂದ ಕರೆದುಕೊಂಡು ಹೋಗಿ ನನ್ನನ್ನು ತನ್ನ ಅತ್ತೆ ಮಗಳು ಎಂದು ಹೇಳಿಕೊಳ್ಳುತ್ತಿದ್ದನು. ನಂತರ 1 ವರ್ಷ ನನ್ನ ಜೊತೆ ಜೀವನ ನಡೆಸಿ ನಂತರ ನನ್ನನ್ನು ಮದುವೆಯಾಗಲ್ಲ ಎಂದು ತಿಳಿಸಿದ್ದನು. ಆಗ ನಾನು ನನ್ನನ್ನು ಅತ್ತೆ ಮಗಳು ಎಂದು ಊರಿಗೆಲ್ಲಾ ಪರಿಚಯ ಮಾಡಿಸಿ ಈಗ ಮೋಸ ಮಾಡಿದರೆ ನನ್ನ ಜೀವನದ ಗತಿಯೇನು ಎಂದು ಕೇಳಿದೆ. ಆಗ ಅವರ ಪೋಷಕರು ಅನಾಥೆಯನ್ನು ಯಾಕೆ ಮದುವೆಯಾಗುತ್ತೀಯಾ. ನಮಗೆ ನೀನು ಒಬ್ಬನೇ ಮಗ. ಬೇರೆಯವರ ಜೊತೆ ನಿನ್ನನ್ನು ಮದುವೆ ಮಾಡಿಸಿದರೆ, ಅವರು ವರದಕ್ಷಿಣೆಯಾಗಿ ನಮಗೆ 5 ಎಕ್ರೆ ಹೊಲ ಕೂಡ ನೀಡುತ್ತಿದ್ದರು ಎಂದು ಒತ್ತಡ ಹಾಕುತ್ತಿದ್ದರು. ಆಗ ವಸಂತ್ ತನ್ನ ಪೋಷಕರ ಮಾತು ಕೇಳಿ ನನ್ನನ್ನು ಬಿಟ್ಟು ಹೋಗಿದ್ದಾರೆ.

ನನಗೆ ಎಲ್ಲೂ ನೆಲೆ ಸಿಗಲಿಲ್ಲ. ನಂತರ ನಾನು ಅರಸಿಕೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಆಗ ಪೊಲೀಸರು ವಸಂತ್‍ನನ್ನು ರೆಡ್ ಹ್ಯಾಂಡಾಗಿ ಹಿಡಿದು ಪಂಚಾಯ್ತಿ ನಡೆಸಿ ಮದುವೆ ಮಾಡಿಸಿದ್ದರು. ಮದುವೆಯಾದ ಬಳಿಕ ವಸಂತ್ ಅವರ ತಂದೆ-ತಾಯಿ ನಮ್ಮನ್ನು ಮನೆಗೆ ಸೇರಿಸಲಿಲ್ಲ ಎಂದು ಭಾಗ್ಯ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

https://www.youtube.com/watch?v=Gsv6SrXkQO4

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *