ಕೆರೆಯಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಿ ಪ್ರಾಣಬಿಟ್ಟ ಇಬ್ಬರು ಮಹಿಳೆಯರು

1 Min Read

ಕೋಲಾರ: ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಹೋಗಿ ಇಬ್ಬರು ಮಹಿಳೆಯರು (Woman) ಸಾವನ್ನಪ್ಪಿದ ಘಟನೆ ಕೋಲಾರ (Kolar) ಹೊರವಲಯದ ಅರಹಳ್ಳಿ ಕೆರೆಯಲ್ಲಿ ನಡೆದಿದೆ.

ಮೃತರನ್ನು ಕೋಲಾರ ನಗರದ ನಿಸಾರ್ ನಗರದ ಮೊಹಮದಿ (25) ಹಾಗೂ ಬೆಂಗಳೂರಿನ (Bengaluru) ಸಲ್ಮಾ (26) ಎಂದು ಗುರುತಿಸಲಾಗಿದೆ. ಮಕ್ಕಳೊಂದಿಗೆ ಕೆರೆಗೆ ಬಟ್ಟೆ ತೊಳೆಯಲು ಮಹಿಳೆಯರು ಬಂದಿದ್ದರು. ಈ ವೇಳೆ ಆಟವಾಡುತ್ತಾ ಮಕ್ಕಳು ನೀರಿನಲ್ಲಿ ಮುಳುಗುವ ಹಂತದಲ್ಲಿದ್ದರು. ತಕ್ಷಣ ನೀರಿಗಿಳಿದ ಮೊಹಮದಿ ಮಕ್ಕಳನ್ನು ರಕ್ಷಿಸಿದ್ದಾಳೆ. ಇದನ್ನೂ ಓದಿ: ಹುಟ್ಟುಹಬ್ಬದಂದೇ ಅಮೆರಿಕದ ಜಲಪಾತದಲ್ಲಿ ಮುಳುಗಿ ಭಾರತ ಮೂಲದ ಟೆಕ್ಕಿ ಸಾವು

ಮಕ್ಕಳನ್ನು ರಕ್ಷಿಸಿದ ಬಳಿಕ ಆಕೆ ನೀರಿನಲ್ಲಿ ಮುಳುಗಲು ಆರಂಭಿಸಿದ್ದಾಳೆ. ಆಗ ರಕ್ಷಣೆಗೆ ತೆರಳಿದ ಸಲ್ಮಾ ಸಹ ನೀರಿನಲ್ಲಿ ಮುಳುಗಿದ್ದಾಳೆ. ಇದನ್ನು ಕಂಡ ಸ್ಥಳೀಯರು ರಕ್ಷಣೆಗೆ ಬರುವುದರೊಳಗೆ ಇಬ್ಬರು ಜಲಸಮಾಧಿಯಾಗಿದ್ದಾರೆ. ಮೊಹಮದಿ ಮನೆಯಲ್ಲಿ ಮದುವೆ ಇದ್ದ ಕಾರಣ ಸಲ್ಮಾ ಬೆಂಗಳೂರಿನಿಂದ ಕೋಲಾರಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಗುಜರಾತ್ ಹೈವೇಯಲ್ಲಿ ಯಾತ್ರಿಕರ ಮೇಲೆ ಹರಿದ ಟ್ರಕ್ – 7 ಮಂದಿ ದುರ್ಮರಣ

Share This Article