6 ವರ್ಷ ಪ್ರೀತಿಸಿ ಗಂಡಂದಿರಿಗೆ ವಿಚ್ಛೇದನ ನೀಡಿ ಕೊನೆಗೂ ಒಂದಾದ ಲೆಸ್ಬಿಯನ್‍ಗಳು!

Public TV
2 Min Read

ಲಕ್ನೋ: 6 ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರು ಲೆಸ್ಬಿಯನ್ ಮಹಿಳೆಯರು ಕೊನೆಗೂ ತಮ್ಮ ಗಂಡಂದಿರಿಗೆ ವಿಚ್ಛೇದನ ನೀಡಿ ಶನಿವಾರ ದೇವಾಲಯವೊಂದರಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.

ಉತ್ತರಪ್ರದೇಶದ ಹಮೀರ್‌ಪುರದ 24 ಮತ್ತು 26 ವರ್ಷದ ಮಹಿಳೆಯರು ಬುಂದೇಲ್‍ಖಂಡ್ ಪ್ರದೇಶದಲ್ಲಿರುವ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಕಳೆದ ಆರು ವರ್ಷಗಳಿಂದ ಉತ್ತರ ಪ್ರದೇಶದ ಇಬ್ಬರು ಮಹಿಳೆಯರು ಪ್ರೀತಿಸುತ್ತಿದ್ದರು. ಆದರೆ ಮನೆಯವರ ಒತ್ತಾಯಕ್ಕೆ ಇಬ್ಬರು ದೂರವಾಗಿದ್ದರು. ಪ್ರೀತಿಯಿಂದ ದೂರವಿರಲು ಆಗದೇ ಕೊನೆಗೂ ಇಬ್ಬರು ಮದುವೆಯಾಗಿದ್ದಾರೆ. ಆದ್ರೆ ಅವರ ಮದುವೆ ನೋಂದಣಿ ಮಾಡಿಕೊಳ್ಳಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ಆರು ವರ್ಷಗಳ ಹಿಂದೆ ಕಾಲೇಜಿನಲ್ಲಿ ಓದುತ್ತಿದ್ದ ವೇಳೆ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ಆಗಿನಿಂದಲೂ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಪಾಲಕರಿಗೆ ಈ ವಿಷಯ ತಿಳಿದಾಗ ಇಬ್ಬರ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಯುವಕರ ಜೊತೆ ಮದುವೆ ಮಾಡಿಸಿದ್ದರು.

ಕಾಲೇಜು ಬಿಟ್ಟ ಆರು ತಿಂಗಳಿಗೆ ನಮಗೆ ಬೇರೆಯವರ ಜೊತೆ ವಿವಾಹವಾಗಿತ್ತು. ಆದರೂ ಒಬ್ಬರನ್ನೊಬ್ಬರು ಮರೆತಿರಲಿಲ್ಲ. ಹೀಗಾಗಿ ಇಬ್ಬರೂ ಕೂಡ ಪತಿಗೆ ವಿಚ್ಛೇದನ ನೀಡಿ ಒಂದಾಗಿದ್ದೇವೆ ಎಂದು ನವ ವಿವಾಹಿತ ಸಲಿಂಗಿ ಜೋಡಿ ಹೇಳಿಕೊಂಡಿದೆ. ವಿಚ್ಛೇದನ ನೀಡಿದ ದಾಖಲೆಗಳನ್ನು ಸಲ್ಲಿಸದ ಕಾರಣ ವಿವಾಹ ನೋಂದಣಿ ಆಗಿಲ್ಲ.

ಸಲಿಂಗಿ ಜೋಡಿ ಪರ ಇರುವ ವಕೀಲ ದಯಾ ಶಂಕರ್ ತಿವಾರಿ ಮಾತನಾಡಿ, ಒಂದೇ ಲಿಂಗದವರ ವಿವಾಹ ನೋಂದಣಿಗೆ ಯಾವುದೇ ಸರ್ಕಾರಿ ಆದೇಶ ಇಲ್ಲವೆಂದು ವಿವಾಹ ನೋಂದಣಿ ಮಾಡಲು ನಿರಾಕರಿಸಿದ್ದಾರೆ. ಇದು ತಪ್ಪು ಈ ಕುರಿತು ಹೋರಾಡುತ್ತೇವೆ ಎಂದು ತಿಳಿಸಿದ್ದಾರೆ.

ಸುಪ್ರೀಂ ಹೇಳಿದ್ದು ಏನು?
ಐಪಿಸಿ ಸೆಕ್ಷನ್ 377ರ ಪ್ರಕಾರ ಯಾವುದೇ ವ್ಯಕ್ತಿ, ಮಹಿಳೆ ಅಥವಾ ಪ್ರಾಣಿಗಳೊಂದಿಗೆ ನಿಸರ್ಗಕ್ಕೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದರೆ, ಅದು ಅಪರಾಧವಾಗಿತ್ತು. ಇಂತಹ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಅಥವಾ 10 ವರ್ಷ ಜೈಲು ಹಾಗೂ ದಂಡ ವಿಧಿಸಬಹುದಾಗಿತ್ತು. 2018ರ ಸೆಪ್ಟೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ಭಾರತದಲ್ಲಿ ಸಲಿಂಗಕಾಮ ಅಪರಾಧ ಎಂದು ಪರಿಗಣಿಸುವ ಐಪಿಸಿ ಸೆಕ್ಷನ್ 377 ಅನ್ನು ರದ್ದುಗೊಳಿಸಿತ್ತು.

ಸಲಿಂಗಕಾಮ ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 377ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಕೋರ್ಟ್ ಈ ತೀರ್ಪು ಪ್ರಕಟಿಸಿತ್ತು. ಕಾಲದ ಜೊತೆ ಕಾನೂನು ಕೂಡ ಬದಲಾಗಬೇಕು ಎಂದು ಹೇಳಿ ಐಪಿಸಿ 377 ಅನ್ನು ಅಸಿಂಧುಗೊಳಿಸಿತ್ತು. ಈ ಮೂಲಕ 156 ವರ್ಷದ ಹಿಂದಿನ ಬ್ರಿಟಿಷ್ ಕಾನೂನು ರದ್ದಾಗಿತ್ತು.

ಕೇಂದ್ರ ಸರ್ಕಾರ ಸೆಕ್ಷನ್ 377ರ ರದ್ದತಿ ವಿಚಾರವನ್ನು ನ್ಯಾಯಾಲಯದ ವಿವೇಚನೆಗೆ ಬಿಡುವುದಾಗಿ ಹೇಳಿತ್ತು. ಆದರೆ ಸಲಿಂಗ ವಿವಾಹ ಮತ್ತು ಕೆಲವು ಹಕ್ಕುಗಳ ವಿಚಾರದಲ್ಲಿ ಗೊಂದಲ ಉಂಟಾಗಬಹುದು ಎಂಬ ಕಳವಳವನ್ನು ವ್ಯಕ್ತಪಡಿಸಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *