– ವೈರಸ್ ಹೇಗೆ ಹರಡುತ್ತದೆ? ಇದರ ಲಕ್ಷಣಗಳೇನು?
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬರಾಸತ್ (West Bengal’s Barasat) ಆಸ್ಪತ್ರೆಯಲ್ಲಿ 2 ಶಂಕಿತ ನಿಫಾ ವೈರಸ್ (Nipah Virus) ಪ್ರಕರಣಗಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಜನರಲ್ಲಿ ಆತಂಕ ಹೆಚ್ಚಿದ ಬೆನ್ನಲ್ಲೇ ಪರಿಸ್ಥಿತಿ ಅವಲೋಕಿಸಲು ಬಂಗಾಳ ರಾಜ್ಯ ಸರ್ಕಾರದ ನಿಯೋಗ ಸೋಮವಾರ (ಇಂದು) ಆಸ್ಪತ್ರೆಗೆ ಭೇಟಿ ಕೊಟ್ಟಿತು. ಜೊತೆಗೆ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸುವಂತೆ ವೈದ್ಯರಿಗೆ (Doctors) ಸೂಚನೆ ನೀಡಲಾಯಿತು.
ವೈರಸ್ ಪತ್ತೆಯಾದ ಬೆನ್ನಲ್ಲೇ ಕೇಂದ್ರ ಆರೋಗ್ಯ ಕಾರ್ಯದರ್ಶಿಗಳು (Union health secretary), ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಕಾರ್ಯದರ್ಶಿ (ಆರೋಗ್ಯ) ಅವರೊಂದಿಗೆ ಚರ್ಚಿಸಿದ್ದು, ಪರಿಸ್ಥಿತಿಗಳನ್ನ ಗಮನಿಸಿ ತ್ವರಿತ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ.
ಜೊತೆಗೆ ಪರಿಸ್ಥಿತಿ ಮೇಲ್ವಿಚಾರಣೆಗಾಗಿ ಕೇಂದ್ರದಿಂದ ವಿಶೇಷ ತಂಡವನ್ನೂ ಕಳುಹಿಸಲಾಗಿದೆ. ಈ ತಂಡವು ಕೋಲ್ಕತ್ತಾದ ಅಖಿಲ ಭಾರತ ಆರೋಗ್ಯ ಮತ್ತು ಸಾರ್ವಜನಿಕ ನೈರ್ಮಲ್ಯ ಸಂಸ್ಥೆ, ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (NIV), ಚೆನ್ನೈನ ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆ (NIE), AIIMS ಕಲ್ಯಾಣಿ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಡಿಯಿರುವ ವನ್ಯಜೀವಿ ಇಲಾಖೆ ತಜ್ಞರನ್ನ ಒಳಗೊಂಡಿದೆ.
ಜೊತೆಗೆ ನಿಫಾ ವೈರಸ್ ಭೀತಿ ಹೆಚ್ಚಾಗಿದ್ದರಿಂದ ಸಾಂಕ್ರಾಮಿಕ ರೋಗ ಎಚ್ಚರಿಕೆ ಬಗ್ಗೆ ಮಾರ್ಗಸೂಚಿಗಳನ್ನ ಬಂಗಾಳದ IDSP ಘಟಕದೊಂದಿಗೆ ಹಂಚಿಕೊಂಡಿದೆ ಎಂದು ವರದಿಗಳು ತಿಳಿಸಿವೆ.
ನಿಫಾ ವೈರಸ್ ಎಂದರೇನು?
1998ರಲ್ಲಿ ಮಲೇಷ್ಯಾದ ಕಾಂಪುಂಗ್ ಸುಂಗಾತ್ ನಿಫಾ ವಲಯದಲ್ಲಿ ಕಾಣಿಸಿಕೊಂಡ ಮಾರಕ ಜ್ವರಕ್ಕೆ ಕಾರಣವಾದ ವೈರಸನ್ನು ನಿಫಾ ವೈರಸ್ ಎಂದು ಕರೆಯುತ್ತಾರೆ. ನಿಫಾ ವೈರಸ್ ಬಾವಲಿಗಳ ಮೂಲಕ ಹರಡುತ್ತದೆ. ಈ ಕ್ಷಣದವರೆಗೆ ಈ ರೋಗಕ್ಕೆ ಔಷಧಿ ಕಂಡುಹಿಡಿದಿಲ್ಲ. ಹೀಗಾಗಿ ನಿಫಾ ವೈರಸ್ ಮಾರಣಾಂತಿಕ ಎಂದೇ ಕುಖ್ಯಾತಿ ಪಡೆದಿದೆ. ಈ ವೈರಸ್ ಪತ್ತೆಯಾದರೆ ಶೇ.74ರಷ್ಟು ಸಾವು ಖಚಿತ ಎನ್ನಲಾಗಿದೆ.
ವೈರಸ್ ಹೇಗೆ ಹರಡುತ್ತದೆ?
ಸೋಂಕಿರುವ ಬಾವಲಿ ಕಚ್ಚಿದ ಹಣ್ಣನ್ನು ತಿನ್ನವುದರಿಂದ ವೈರಸ್ ಹರಡುವ ಸಾಧ್ಯತೆಗಳಿವೆ. ಅಲ್ಲದೆ ಇದೊಂದು ಸಾಂಕ್ರಾಮಿಕ ಕಾಯಿಲೆಯಾದ್ರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹೀಗಾಗಿ ಬಾವಲಿಗಳು ಕಚ್ಚಿದ ಸಾಧ್ಯತೆಯಿರುವ ಹಣ್ಣುಗಳನ್ನು ತಿನ್ನಲೇಬೇಡಿ.
ನಿಫಾ ವೈರಸ್ ಲಕ್ಷಣಗಳೇನು?
* ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವಿಕೆ
* ಕೆಲವರಲ್ಲಿ ಅಪಸ್ಮಾರದ ಲಕ್ಷಣಗಳು ಕಾಣಿಸುತ್ತವೆ
* ಈ ಲಕ್ಷಣಗಳು ಸಾಮಾನ್ಯವಾಗಿ 10ರಿಂದ 12 ದಿನ ಕಾಣಿಸುತ್ತದೆ
* ಬಳಿಕ ಪ್ರಜ್ಞಾಹೀನರಾಗುತ್ತಾರೆ
* ನಂತರ ಈ ಜ್ವರ ತೀವ್ರವಾಗಿ ಮೆದುಳಿಗೆ ವ್ಯಾಪಿಸುತ್ತದೆ
* ಕೆಲವು ಬಾರಿ ಸೂಕ್ತ ಚಿಕಿತ್ಸೆ ಲಭಿಸದಿದ್ದರೆ ಸಾವು ಸಂಭವಿಸಬಹುದು



