ಗೆಳತಿ ಮೇಲೆ ಶಂಕೆ-ಫೋನ್ ಚೆಕ್ ಮಾಡಲು ಬಂದು ಇಬ್ಬರನ್ನ ಕೊಂದ

Public TV
2 Min Read

ಚಂಡೀಗಢ: ಯುವಕನೋರ್ವ ಗೆಳತಿಯ ಮೇಲೆ ಶಂಕೆ ವ್ಯಕ್ತಪಡಿಸಿ ರಾತ್ರೋರಾತ್ರಿ ಮನೆಗೆ ನುಗ್ಗಿ ಪ್ರಿಯತಮೆ ಮತ್ತು ಆಕೆಯ ಸೋದರಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದನು. ಇದೀಗ ಪೊಲೀಸರು ಯುವಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಂಡೀಗಢನ ಸೆಕ್ಟರ್ 22ರಲ್ಲಿ ಆಗಸ್ಟ್ 14ರ ರಾತ್ರಿ ಡಬಲ್ ಮರ್ಡರ್ ನಡೆದಿತ್ತು. ಆರೋಪಿ ಕುಲ್ದೀಪ್ ಸಿಂಗ್(30)ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮನಪ್ರೀತ್ ಮತ್ತು ರಾಜವಂತ್ ಕೊಲೆಯಾದ ಸೋದರರಿಯರು. ಆರೋಪಿ ಕುಲ್ದೀಪ್ ಸಿಂಗ್ ಮತ್ತು ಮನಪ್ರೀತ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮದುವೆಗೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದರು. ಮುಂದಿನ ಆರು ತಿಂಗಳಲ್ಲಿ ದಿನಾಂಕ ನಿಶ್ಚಯಿಸಲು ತೀರ್ಮಾನಿಸಿದ್ದರು. ಈ ನಡುವೆ ಕುಲ್ದೀಪ್ ಸಿಂಗ್ ಗೆಳತಿ ಬೇರೊಬ್ಬನ ಜೊತೆ ಚಾಟಿಂಗ್ ಮಾಡುತ್ತಿದ್ದಾಳೆ ಎಂಬ ಶಂಕೆ ಮೂಡಿದೆ.

ರಾತ್ರೋರಾತ್ರಿ ಮನೆಗೆ ನುಗ್ಗಿದ:
ಮದುವೆಗೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ ಮೇಲೆ ಕುಲ್ದೀಪ್ ಯುವತಿಯ ಮನೆಗೆ ಆಗಮಿಸುತ್ತಿದ್ದನು. ಹೀಗೆ ಆಗಸ್ಟ್ 14ರ ರಾತ್ರಿ ಮನಪ್ರೀತ್ ಮೊಬೈಲ್ ಚೆಕ್ ಮಾಡಲು ಹಿಂಬಾಗಿಲಿನಿಂದ ಮನೆ ಪ್ರವೇಶಿಸಿದ್ದನು. ಮೊಬೈಲ್ ಚೆಕ್ ಮಾಡುವಾಗ ರಾಜವಂತ್ ಎಚ್ಚರಗೊಂಡಿದ್ದಾಳೆ. ಕೂಡಲೇ ಆಕೆಯನ್ನು ಬೇರೊಂದು ಕೋಣೆಯಲ್ಲಿ ಕೂಡಿ ಹಾಕಿ, ಮೊಬೈಲ್ ಚೆಕ್ ಮಾಡಲಾರಂಭಿಸಿದ್ದಾನೆ. ಮನಪ್ರೀತ್ ಸಹ ಎಚ್ಚರಗೊಂಡಾಗ ಇಬ್ಬರ ನಡುವೆ ಜಗಳ ಆರಂಭಗೊಂಡಿದೆ. ಇಬ್ಬರ ಜಗಳ ಜೋರಾಗುತ್ತಿದ್ದಂತೆ ಬೇರೊಂದು ಕೋಣೆಯಲ್ಲಿದ್ದ ರಾಜವಂತ್ ಸಹ ಹೊರ ಬಂದಿದ್ದಾಳೆ. ಈ ವೇಳೆ ಕೋಪಗೊಂಡ ಕುಲ್ದೀಪ್ ಕೈಗೆ ಸಿಕ್ಕ ಕತ್ತರಿಯಿಂದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ. ಕೊನೆಗೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಕಾಲ್‍ಸೆಂಟರ್ ನಲ್ಲಿ ಲವ್:
ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಮನಪ್ರೀತ್ ಸೆಕ್ಟರ್ 22ರಲ್ಲಿ ಸೋದರಿಯೊಂದಿಗೆ ವಾಸವಾಗಿದ್ದಳು. ಇಲ್ಲಿಯೇ ಕುಲ್ದೀಪ್ ಸಹ ಕೆಲಸ ಮಾಡಿಕೊಂಡಿದ್ದನು. ಹೀಗೆ ಇಬ್ಬರು ನಡುವೆ ಸ್ನೇಹ ಬೆಳೆದು ಪ್ರೇಮವಾಗಿ ಬದಲಾಗಿತ್ತು. ಮದುವೆಗೆ ಇಬ್ಬರು ತಮ್ಮ ಕುಟುಂಬಸ್ಥರನ್ನು ಸಹ ಒಪ್ಪಿಸಿದ್ದರು. ಮದುವೆಗೆ ಆರು ತಿಂಗಳ ಇರೋವಾಗಲೇ ಕುಲ್ದೀಪ್ ಗೆ ಗೆಳತಿಯ ಮೇಲೆ ಅನುಮಾನ ಬಂದಿತ್ತು. ಇತ್ತೀಚೆಗೆ ಮನಪ್ರೀತ್ ಕಾಲ್‍ಸೆಂಟರ್ ನಲ್ಲಿಯ ಉದ್ಯೋಗ ತೊರೆದು ಬೇರೊಂದು ಕಂಪನಿಯಲ್ಲಿ ಕೆಲಸಕ್ಕೆ ಸೋದರಿಯೊಂದಿಗೆ ಸೇರಿಕೊಂಡಿದ್ದಳು. ಅಂದಿನಿಂದ ಮನಪ್ರೀತ್ ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾಳೆ ಎಂಬ ಭಾವನೆ ಕುಲ್ದೀಪ್ ಗೆ ಬಂದಿತ್ತು. ಶ್ರಾವಣದಲ್ಲಿ ನಡೆದ ವಿಶೇಷ ಕಾರ್ಯಕ್ರಮಕ್ಕೂ ಕುಲ್ದೀಪ್ ನನ್ನು ಮನಪ್ರೀತ್ ಆಹ್ವಾನಿಸಿರಲಿಲ್ಲ. ಈ ಎಲ್ಲ ಬೆಳವಣಿಗೆಯಿಂದ ಕುಲ್ದೀಪ್ ಅನುಮಾನ ಮತ್ತಷ್ಟು ಬಲಗೊಂಡಿತ್ತು.

ಗೆಳತಿಯ ಫೋನ್ ಚೆಕ್ ಮಾಡುವ ಉದ್ದೇಶದಿಂದ ಕುಲ್ದೀಪ್ ಮನೆಗೆ ನುಗ್ಗಿದ್ದನು. ಆದ್ರೆ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯಗೊಂಡಿತ್ತು. ಕುಲ್ದೀಪ್ ಚಲನವಲನ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇತ್ತ ಕೊಲೆಯ ಬಳಿಕ ತನ್ನ ಮನೆಗೆ ತೆರಳಿದ್ದ ಕುಲ್ದೀಪ್ ಸೋದರಿಯ ಕಡೆ ರಾಖಿ ಕಟ್ಟಿಸಿಕೊಂಡು ದೆಹಲಿಯತ್ತ ಪ್ರಯಾಣ ಬೆಳೆಸಿದ್ದನು.

ಮೊದಲು ಮನಪ್ರೀತ್ ಕುತ್ತಿಗೆಯನ್ನು ಹಿಸುಕಿದ್ದಾನೆ. ಸ್ಥಳದಲ್ಲಿದ್ದ ಆಕೆಯ ಸೋದರಿ ರಾಜವಂತ್ ಕುತ್ತಿಗೆಯನ್ನು ಹಿಸುಕಿದ್ದಾನೆ. ನಂತರ ಕೈಗೆ ಸಿಕ್ಕ ಕತ್ತರಿಯಿಂದ ಇಬ್ಬರ ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿದ್ದಾನೆ. ಘಟನೆ ಬಳಿಕ ಸ್ವಲ್ಪ ಸಮಯ ಅಲ್ಲಿಯೇ ನಿಂತಿದ್ದ ಕುಲ್ದೀಪ್ ಇಬ್ಬರ ಮೊಬೈಲ್ ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದನು. ಕುಲ್ದೀಪ್ ಓರ್ವ ನಿವೃತ್ತ ಪೊಲೀಸ್ ಅಧಿಕಾರಿಯ ಪುತ್ರ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *